ಬಿ.ರಂ.ಬೆಟ್ಟದಲ್ಲಿ ಇಂದು ಶ್ರೀಗಂಗಾಧರೇಶ್ವರನ ತೇರು

Oplus_131072
Oplus_131072
Published on

ಯಳಂದೂರು: ತಾಲೂಕಿನ ಬಿಳಿಗಿರಿರಂಗನ ಬೆಟ್ಟದಲ್ಲಿರುವ ಪುರಾಣ ಪ್ರಸಿದ್ಧ ಶ್ರೀಗಂಗಾಧರೇಶ್ವರ ದೇಗುಲದಲ್ಲಿ ಗಂಗಾಧರೇಶ್ವರ ತೇರು ಗುರುವಾರ ನಡೆಯಲಿದ್ದು, ಇದಕ್ಕಾಗಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.

ಬಿಳಿಗಿರಿರಂಗನಾಥ ದೇವಾಲಯದ ವ್ಯಾಪ್ತಿಗೆ ಮುಜರಾಯಿ ಇಲಾಖೆಗೆ ಸೇರಿರುವ ಈ ದೇಗುಲದಲ್ಲಿ ಪ್ರತಿ ವರ್ಷವೂ ಮಹಾಶಿವರಾತ್ರಿಯಂದು ರಾತ್ರಿಯಿಡಿ ಪೂಜೆಗಳು ನಡೆದು ಅದರ ಮಾರನೇ ದಿನ ಗಂಗಾಧರೇಶ್ವರನ ರಥ ನಡೆಯುವ ವಾಡಿಕೆ ಇದೆ. ಇದು ಸ್ವಯಂ ಉದ್ಭವ ಲಿಂಗವಾಗಿದ್ದು ಇದಕ್ಕೆ ಸಾವಿರಾರು ವರ್ಷಗಳ ಐತಿಹ್ಯವಿದೆ. ಪುರಾಣ ಪ್ರಸಿದ್ಧ ಈ ಕ್ಷೇತ್ರದಲ್ಲಿ ಹರಿಹರ ಒಂದಾಗಿ ನೆಲೆಸಿದ್ದಾರೆ ಎಂಬ ಉಲ್ಲೇಖ ಧಾರ್ಮಿಕ ಗ್ರಂಥಗಳಲ್ಲಿದೆ.

ಇಲ್ಲಿಗೂ ಮೈಸೂರಿನ ಮಹಾರಾಜರಿಗೆ ಅವಿನಾಭಾವ ಸಂಬಂಧವಿದೆ. ಬಿಳಿಗಿರಿರಂಗನಾಥಸ್ವಾಮಿಗೆ ಅನೇಕ ರತ್ನಖಚಿತ ಚಿನ್ನದ ವಡವೆಗಳನ್ನು ಮಹಾರಾಜರು ಉಡುಗೊರೆಯಾಗಿ ನೀಡಿರುವಂತೆ ಗಂಗಾಧರೇಶ್ವರ ಸ್ವಾಮಿಗೂ ಚಿನ್ನದ ಕೊಳಗವನ್ನು ನೀಡಿದ್ದಾರೆ. ಇದನ್ನು ಯಳಂದೂರು ಪಟ್ಟಣದ ಉಪ ಖಜಾನೆಯಲ್ಲಿ ಇರಿಸಲಾಗಿದ್ದು, ತೇರಿನ ದಿನ ತಂದು ಇಲ್ಲಿಗೆ ತೊಡಿಸಿ ವಿಶೇಷ ಅಲಂಕಾರ ಮಾಡಿ ಪೂಜೆಗೈಯುವ ಸಂಪ್ರದಾಯವಿದೆ.

ಇಲ್ಲಿನ ಬುಡಕಟ್ಟು ಸಮುದಾಯದ ಸೋಲಿಗರೂ ಸೇರಿದಂತೆ ಬೇರೆ ಜಿಲ್ಲೆಗಳಿಂದಲೂ ಭಕ್ತರು ಆಗಮಿಸಿ ಪೂಜೆಯನ್ನು ಸಲ್ಲಿಸಿ, ತೇರನ್ನು ಎಳೆದು ಸಂಭ್ರಮಿಸುತ್ತಾರೆ.

ಮಧ್ಯಾಹ್ನ 12.20ರಿಂದ 12.45 ಗಂಟೆಯೊಳಗೆ ಸಲ್ಲುವ ಶುಭ ಅಭಿಜಿನ್ ಲಗ್ನದಲ್ಲಿ ತೇರು ನಡೆಯಲಿದ್ದು ನಂತರ ಇಲ್ಲಿ ನೆರೆದಿರುವ ಎಲ್ಲ ಭಕ್ತರಿಗೆ ಭೋಜನದ ವ್ಯವಸ್ಥೆಯನ್ನು ಮಾಡಲಾಗುತ್ತದೆ. ಎಲ್ಲರೂ ದೇಗುಲದ ಆವರಣದಲ್ಲಿ ನೆಲದ ಮೇಲೆ ಕುಳಿತು ಭೋಜನ ಸವಿಯುವುದು ಇಲ್ಲಿನ ವಾಡಿಕೆಯಾಗಿದೆ. ಇದಕ್ಕಾಗಿ ಈಗಾಗಲೇ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ತೇರನ್ನು ಸಿಂಗರಿಸುವ ಕಾರ್ಯವೂ ಭರದಿಂದ ಸಾಗಿದೆ ಎಂದು ದೇಗುಲದ ಕಾರ್ಯನಿರ್ವಾಹಣಾಧಿಕಾರಿ ಮೋಹನ್‌ಕುವರ್ ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net