

ಯಳಂದೂರು: ಸಮೀಪದ ಸಂಕಮರಹಳ್ಳಿ ಹೋಬಳಿ ಹೊಮ್ಮ ಗ್ರಾಮದ ಪ್ರಗತಿಪರ ರೈತ ಬಿ.ಮಹದೇವಸ್ವಾಮಿ ಅವರಿಗೆ ಬಾಗಲಕೋಟೆಯ ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯ ರಾಜ್ಯ ಮಟ್ಟದ ಫಲ ಶ್ರೇಷ್ಠ ತೋಟಗಾರಿಕಾ ರೈತ ಪ್ರಶಸ್ತಿ ನೀಡಿದೆ.
ಇತ್ತೀಚೆಗೆ ಬಾಗಲಕೋಟೆಯ ಕೋವಿನ ಉದ್ಯಾನಗಿರಿಯಲ್ಲಿ ನಡೆದ ತೋಟಗಾರಿಕಾ ಮೇಳದಲ್ಲಿ ಪ್ರಶಸ್ತಿಯನ್ನು ರಾಜ್ಯಸಭಾ ಸದಸ್ಯ ನಾರಾಯಣಸಾ ಕೆ.ಭಾಂಡಗೆ ಪ್ರದಾನ ಮಾಡಿದರು. ಪ್ರಶಸ್ತಿಗೆ ಜಿಲ್ಲೆಯಿಂದ ಮಹದೇವಸ್ವಾಮಿ ಅವರನ್ನು ಆಯ್ಕೆ ಮಾಡಲಾಗಿತ್ತು.
8 ಎಕರೆಯಲ್ಲಿ ಕೃಷಿ ಮಾಡುತ್ತಿದ್ದು, ಗೂಳೀಪುರ ಗ್ರಾಮದ ಬಳಿ ಇವರ ತೋಟವಿದ್ದು ಇಲ್ಲಿ ನೀರಿನ ಅಭಾವ ಇದ್ದ ಕಾರಣ ಒಂದೂವರೆ ಕಿಮೀ ಪೈಪ್‌ಲೈನ್ ಮೂಲಕ ನೀರನ್ನು ತಂದು ಕೃಷಿ ಹೊಂಡ ನಿರ್ಮಿಸಿದ್ದಾರೆ. ಸಾಂಪ್ರದಾಯಿಕ ಪದ್ಧತಿಯೊಂದಿಗೆ ವೈಜ್ಞಾನಿಕ ಪದ್ಧತಿ ಅಳವಡಿಸಿಕೊಂಡು ಸಾವಯವ ಗೊಬ್ಬರ ಬಳಕೆ ಮಾಡಿ ತೋಟವನ್ನು ಅಭಿವೃದ್ಧಿಪಡಿಸಿದ್ದಾರೆ.