

ಮಳವಳ್ಳಿ: ಹೈನುಗಾರಿಕೆಯನ್ನು ಜೀವನಾಧಾರ ಮಾಡಿಕೊಂಡಿರುವ ಹಾಲು ಉತ್ಪಾದಕರ ಮಕ್ಕಳು ಶೈಕ್ಷಣಿಕವಾಗಿ ಸಾಧನೆ ಮಾಡಬೇಕೆಂಬ ಉದ್ದೇಶದಿಂದ ಸಂಘದಿಂದ ಸಹಕಾರ ನೀಡಲಾಗುತ್ತಿದೆ ಎಂದು ಬಿ.ಜಿ.ಪುರ ಡೇರಿ ಅಧ್ಯಕ್ಷ ಬಿ.ಎಸ್.ಮಹೇಶ್ ತಿಳಿಸಿದರು.
ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ 2024- 25ನೇ ಸಾಲಿನ ವಾರ್ಷಿಕ ಸಭೆಯಲ್ಲಿ ಮಾತನಾಡಿದ ಅವರು, ಗ್ರಾಮೀಣ ಮಟ್ಟದಲ್ಲಿ ಜನರ ಆರ್ಥಿಕ ಮಟ್ಟ ಸುಧಾರಣೆಗೆ ಸಹಕಾರ ಸಂಘಗಳು ಬೆನ್ನೆಲುಬು. ಇತ್ತೀಚಿನ ದಿನಗಳಲ್ಲಿ ಬಹಳಷ್ಟು ರೈತರು ಹೈನೋದ್ಯಮದಲ್ಲಿ ತೊಡಗಿಸಿಕೊಂಡು ಜೀವನ ರೂಪಿಸಿಕೊಂಡಿದ್ದಾರೆ. ಇದಕ್ಕೆ ಪೂರಕವಾಗಿ ಸಂಘದ ಆಡಳಿತ ಮಂಡಳಿಯಿಂದ ಉತ್ಪಾದಕರ ಮಕ್ಕಳ ಶೈಕ್ಷಣಿಕ ಉತ್ತೇಜನಕ್ಕಾಗಿ ಸಂಘದ ವತಿಯಿಂದ ಗೌರವಧನ ನೀಡಲಾಗುತ್ತಿದೆ ಎಂದರು.
ಕಾರ್ಯದರ್ಶಿ ಮಹೇಶ್ ವಾರ್ಷಿಕ ವರದಿ ಮಂಡಿಸುವುದರ ಜತೆಗೆ ಸಂಘವು 17,13,782ರೂ.ನಿವ್ವಳ ಲಾಭ ಗಳಿಸಿದೆ ಎಂದು ಸಭೆಗೆ ಮಾಹಿತಿ ನೀಡಿದರು.
ಸಂಘಕ್ಕೆ ಹೆಚ್ಚು ಹಾಲು ಪೂರೈಕೆ ಮಾಡಿದ್ದ ಬಸವಣ್ಣ (ಪ್ರಥಮ), ಪುಷ್ಪಾ ಮುದ್ದಣ್ಣ (ದ್ವಿತೀಯ), ಸವಿತಾ ರಾಚಯ್ಯ (ತೃತೀಯ) ಅವರಿಗೆ ಬಹುಮಾನ ನೀಡಿ ಗೌರವಿಸಲಾಯಿತು. ಹೆಚ್ಚು ಅಂಕ ಪಡೆದ ಉತ್ಪಾದಕರ ಮಕ್ಕಳಿಗೆ ಗೌರವಧನ ನೀಡಲಾಯಿತು.
ನಿರ್ದೇಶಕರಾದ ರಾಜಪ್ಪ, ಬಿ.ಎಂ.ನಾಗರಾಜು, ನಾಗೇಶ್, ಬಿ.ವೀರಸ್ವಾಮಿ, ಶಿವಮೂರ್ತಿ, ಸಿದ್ದರಾಜು, ಎಸ್.ಲಿಂಗರಾಜು, ಕೆಂಪಮ್ಮಣ್ಣಿ, ಶಶಿಕಲಾ, ಮರಿಸ್ವಾಮಿ, ಮಹದೇವಸ್ವಾಮಿ ಇದ್ದರು.