

ಸಕಲೇಶಪುರ: ತಾಲೂಕಿನ ಬಾಳ್ಳುಪೇಟೆ ಗ್ರಾಮ ಸಮೀಪ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಗೆ ಪರ್ಯಾಯವಾಗಿ ಸೇವಾ ರಸ್ತೆ ನಿರ್ಮಿಸಬೇಕು ಹಾಗೂ ಯು ಟರ್ನ್‌ಗೆ ಅವಕಾಶ ಕಲ್ಪಿಸಬೇಕು ಎಂದು ಆಗ್ರಹಿಸಿ ಗ್ರಾಮಸ್ಥರು ಸೋಮವಾರ ಹೆದ್ದಾರಿ ಸಂಚಾರ ತಡೆದು ಪ್ರತಿಭಟನೆ ನಡೆಸಿದರು.
2016ರಿಂದ ಕುಂಟುತ್ತಾ ಸಾಗಿದ್ದ ಹೆದ್ದಾರಿ ಕಾಮಗಾರಿ ಸದ್ಯ ಬಾಳ್ಳುಪೇಟೆ ಗ್ರಾಮದವರೆಗೆ ಮುಕ್ತಾಯಗೊಂಡಿದ್ದು, ಕಳೆದ ಎರಡು ದಿನಗಳಿಂದ ಆಲೂರು ತಾಲೂಕಿನ ಬೈರಾಪುರ ಗ್ರಾಮದಿಂದ ಬಾಳ್ಳುಪೇಟೆ ಗ್ರಾಮದವರಗೆ ದ್ವಿಪಥ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಆದರೆ, ಸಾವಿರಾರು ಮನೆಗಳು ಹಾಗೂ ನಾಲ್ಕಾರು ಶಾಲೆಗಳಿರುವ ಬಾಳ್ಳುಪೇಟೆ ಗ್ರಾಮದಲ್ಲಿ ಸೇವಾ ರಸ್ತೆ ನಿರ್ಮಿಸದ ಕಾರಣ ಸ್ಥಳೀಯರು ಹಾಗೂ ಶಾಲಾ ಮಕ್ಕಳು ವಾಹನಗಳ ಮಧ್ಯೆ ತೆರಳುವಂತಾಗಿದೆ. ಇದರಿಂದ ಅಪಘಾತಗಳು ಸಂಭವಿಸುವ ಸನ್ನಿವೇಶ ಸೃಷ್ಟಿಯಾಗಿದೆ ಎಂದು ಪ್ರತಿಭಟನಾನಿರತರು ಆತಂಕ ವ್ಯಕ್ತಪಡಿಸಿದರು.
ಬಾಳ್ಳುಪೇಟೆ ಗ್ರಾಮದ ಸಿದ್ದಣ್ಣಯ್ಯ ಶಾಲೆ ಸಮೀಪ ಮಾತ್ರ ವಾಹನಗಳ ಯೂ-ಟರ್ನ್‌ಗೆ ಅವಕಾಶ ಕಲ್ಪಿಸಲಾಗಿದ್ದು, ಇದನ್ನು ಹೊರತುಪಡಿಸಿದರೆ ಗ್ರಾಮಸ್ಥರು ವಾಹನಗಳ ಯು-ಟರ್ನ್ ತೆಗೆದುಕೊಳ್ಳಲು ಗ್ರಾಮದಿಂದ ಮೂರು ಕಿ.ಮೀ. ದೂರದ ನಿಡನೂರು ಕೂಡಿಗೆಗೆ ಹೋಗುವಂತಾಗಿದೆ. ಆದ್ದರಿಂದ ಗ್ರಾಮದ ಕೆಲವೆಡೆ ಯೂ-ಟರ್ನ್ ತೆಗೆದುಕೊಳ್ಳಲು ಅವಕಾಶ ಕಲ್ಪಿಸಬೇಕು. ಶೀಘ್ರವೇ ಸೇವಾ ರಸ್ತೆ ನಿರ್ಮಿಸಬೇಕು. ಅಲ್ಲಲ್ಲಿ ಎಚ್ಚರಿಕೆ ಫಲಕಗಳನ್ನು ಆಳವಡಿಸ ಬೇಕು ಆಗ್ರಹಿಸಿದರು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಶಾಸಕ ಸಿಮೆಂಟ್ ಮಂಜು, ಹೆದ್ದಾರಿ ಕಾಮಗಾರಿ ಹೊಣೆ ಹೊತ್ತಿರುವ ರಾಜ್‌ಕಮಲ್ ಕಂಪನಿಯ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ ಗ್ರಾಮದಲ್ಲಿ ಅಗತ್ಯವಿರುವ ಸೇವಾ ರಸ್ತೆಯನ್ನು ಶೀಘ್ರದಲ್ಲೇ ನಿರ್ಮಿಸಬೇಕು. ಅಗತ್ಯವಿರುವಡೆ ಯು-ಟರ್ನ್ ತೆಗೆದುಕೊಳ್ಳಲು ಅವಕಾಶ ಕಲ್ಪಿಸಿಕೊಡಬೇಕು. ಅಪಾಯಕಾರಿ ಪ್ರದೇಶದಲ್ಲಿ ಎಚ್ಚರಿಕೆ ನಾಮಫಲಕ ಹಾಗೂ ರೇಡಿಯಂ ಸ್ಟೀಕರ್ ಅಳವಡಿಸ ಬೇಕು ಎಂದು ಸೂಚನೆ ನೀಡಿದರು.
ಪ್ರತಿಭಟನೆಯಲ್ಲಿ ಗ್ರಾಪಂ ಅಧ್ಯಕ್ಷೆ ಗೌರಮ್ಮ, ಯಡೇಹಳ್ಳಿ ಮಂಜುನಾಥ್,ಪಾಲಾಕ್ಷ ಹಲವರಿದ್ದರು.