ಬಾಳ್ಳುಪೇಟೆ ಗ್ರಾಪಂ ಅಧ್ಯಕ್ಷರು ರಾಜೀನಾಮೆ ನೀಡಲಿ

Published on

ಸಕಲೇಶಪುರ: ತಾಲೂಕಿನ ಬಾಳ್ಳುಪೇಟೆ ಗ್ರಾಮ ಪಂಚಾಯಿತಿಯಲ್ಲಿ 12 ಲಕ್ಷ ರೂ. ವಂಚನೆ ನಡೆದಿದ್ದು, ಇದರ ನೈತಿಕ ಹೊಣೆ ಹೊತ್ತು ಅಧ್ಯಕ್ಷರು ರಾಜೀನಾಮೆ ನೀಡಬೇಕು ಎಂದು ಗ್ರಾಪಂ ಉಪಾಧ್ಯಕ್ಷ ಸ್ವಾಮಿ ಒತ್ತಾಯಿಸಿದರು.

ಪ್ರತಿ ತಿಂಗಳು ಗ್ರಾ.ಪಂ.ಗೆ ಸುಮಾರು 2 ಲಕ್ಷ ರೂ. ತೆರಿಗೆ ಮೂಲಕ ಆದಾಯ ಸಂಗ್ರಹವಾಗುತ್ತದೆ. ಆದರೆ, ಕರವಸೂಲಿಗ ಕಳೆದ ಒಂದು ವರ್ಷದಿಂದ ಸಾರ್ವಜನಿಕರಿಂದ ಸಂಗ್ರಹಿಸಿದ ಕರವನ್ನು ಬ್ಯಾಂಕಿಗೆ ಜಮೆ ಮಾಡದೆ ವಂಚಿಸಿದ್ದಾನೆ. ಕರವಸೂಲಿ ಬಗ್ಗೆ ನಿಗಾ ವಹಿಸಬೇಕಿದ್ದ ಗ್ರಾ.ಪಂ ಕಾರ್ಯದರ್ಶಿ, ಅಭಿವೃದ್ಧಿ ಅಧಿಕಾರಿ ಹಾಗೂ ಅಧ್ಯಕ್ಷರು ನಿರ್ಲಕ್ಷ್ಯ ವಹಿಸಿದ್ದೇ ಇದಕ್ಕೆಲ್ಲ ಕಾರಣ. ಸದ್ಯ ಅಧ್ಯಕ್ಷರು ಕರವಸೂಲಿಗಾರನ ಬಗ್ಗೆ ಠಾಣೆಗೆ ದೂರು ನೀಡಿದ್ದಾರೆ. ಆದರೆ, ಇವರ ಆಡಳಿತದ ಅವಧಿಯಲ್ಲೆ ಬಾರಿ ಅಕ್ರಮ ನಡೆದಿದ್ದು, ಇದರ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

ಕಳೆದ ವರ್ಷ ಇದೇ ಕರವಸೂಲಿಗಾರ ಒಂದು ಲಕ್ಷ ರೂ.ಗಳನ್ನು ವಂಚಿಸಿದ್ದ. ಈ ಬಗ್ಗೆ ಸಭೆ ನಡೆಸಿ ಮಾನವೀಯತೆ ಆಧಾರದ ಮೇಲೆ ಹಣ ಸಂದಾಯಕ್ಕೆ ಸಮಯ ನೀಡಿ ಹಣ ವಾಪಸ್ ಕಟ್ಟಿಸಿಕೊಳ್ಳಲಾಗಿತ್ತು. ಇಂತಹ ನೌಕರನ ಬಗ್ಗೆ ನಿರ್ಲಕ್ಷ್ಯ ವಹಿಸಿರುವ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಅಧಿಕಾರಿಯ ವಿರುದ್ಧ ಸಹ ಕ್ರಮ ಕೈಗೊಳ್ಳ ಬೇಕು ಎಂದು ಸದಸ್ಯರು ಒತ್ತಾಯಿಸಿದರು.

ಈ ವೇಳೆ ಸದಸ್ಯರಾದ ರತ್ನ, ಶಿಲ್ಪಾ, ಸಂಜು ಮುಂತಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net