ಬಾಳೆಕಾಯಿ ಬೆಲೆ ಕುಸಿತ

25sdp2
Published on

ಸಿದ್ದಾಪುರ: ರೈತರ ನಿತ್ಯದ ಖರ್ಚು ವೆಚ್ಚಗಳಿಗೆ ಆಧಾರವಾಗಿದ್ದ ಬಾಳೆಕಾಯಿ ಬೆಲೆ ಕುಸಿತಗೊಂಡಿದ್ದು, ಬೆಳೆ ಬೆಳೆದ ಖರ್ಚು ಸಿಗದಂತಾಗಿದೆ.

ಲಾಕ್​ಡೌನ್​ನಿಂದಾಗಿ ಒಂದು ತಿಂಗಳಿನಿಂದ ಸ್ಥಗಿತಗೊಂಡಿದ್ದ ಬಾಳೆಕಾಯಿ ವ್ಯಾಪಾರ ತಾಲೂಕಿನ ಗ್ರಾಮೀಣ ಭಾಗದ ಅಲ್ಲಲ್ಲಿ ಹಾಗೂ ಪಟ್ಟಣದ ಕೆಲವು ವ್ಯಾಪಾರಸ್ಥರು ಆರಂಭಿಸಿದ್ದಾರೆ.

ಮಿಟ್ಲಿ ಬಾಳೆಕಾಯಿ ಕೆಜಿಗೆ 8ರಿಂದ 10 ರೂ., ಕರಿ ಬಾಳೆಕಾಯಿ ಹಾಗೂ ನೀರಬಾಳೆ ಕೆಜಿಗೆ 4 ರಿಂದ 6 ರೂಪಾಯಿಯಂತೆ ವ್ಯಾಪಾರಸ್ಥರು ಖರೀದಿಸುತ್ತಿದ್ದಾರೆ. ಬೆಳೆಗಾರರು ಮರು ಮಾತಾಡದೆ ಮಾರಾಟ ಮಾಡುತ್ತಿದ್ದಾರೆ. ಇಲ್ಲದಿದ್ದರೆ ಸುಮ್ಮನೆ ತೋಟದಲ್ಲಿ ಹಣ್ಣಾಗಿ ಉದುರಿ ಹೋಗುತ್ತದೆ ಎನ್ನುವ ಆತಂಕ.

ಎರಡನೇ ದರ್ಜೆ ಕೇಳುವವರಿಲ್ಲ: ಈ ಹಿಂದೆ ವ್ಯಾಪಾರಸ್ಥರು ಪ್ರಥಮ ಹಾಗೂ ಎರಡನೇ ದರ್ಜೆ ಬಾಳೆಕಾಯಿ ಎಂದು ಎರಡು ವಿಧದಲ್ಲಿ ಖರೀದಿಸುತ್ತಿದ್ದರು. ಆದರೆ, ಈಗ ಪ್ರಥಮ ದರ್ಜೆ ಮಾತ್ರ ಖರೀದಿಸುತ್ತಿದ್ದು, ಎರಡನೇ ದರ್ಜೆ ಕಾಯಿಯನ್ನು ಖರೀದಿಸುತ್ತಿಲ್ಲ.

ತೋಟದಲ್ಲೆ ಹಣ್ಣಾಗಿ ಹೋಯಿತು: ಲಾಕ್​ಡೌನ್​ನಿಂದಾಗಿ ಒಂದು ತಿಂಗಳ ಕಾಲ ಬಾಳೆಕಾಯಿ ವ್ಯಾಪಾರ ಇಲ್ಲದಿದ್ದರಿಂದ ಹಲವು ಬೆಳೆಗಾರರು ಬಾಳೆ ಗೊನೆಯನ್ನು ಕಟಾವು ಮಾಡದೇ ಅವು ಮರದಲ್ಲಿಯೇ ಹಣ್ಣಾಗಿ ಹೋಗಿದೆ. ಇದರಿಂದ ಅನೇಕ ಬೆಳೆಗಾರರು ನಷ್ಟ ಅನುಭವಿಸಿ ಕಂಗಾಲಾಗಿ ಕುಳಿತ್ತಿದ್ದಾರೆ. ಈಗ ಬೆಳೆದ ವೆಚ್ಚ ಸಿಗುತ್ತಿಲ್ಲ. ಕಟಾವು ಮಾಡಿದ ಖರ್ಚಾದರೂ ಸಿಕ್ಕರೆ ಸಾಕು ಎನ್ನುತ್ತ ಬಾಳೆಕಾಯಿ ಕೊನೆ ಕಟಾವು ಮಾಡಿ ಮಾರಾಟ ಮಾಡಲು ಮುಂದಾಗಿದ್ದಾರೆ.

ಬಾಳೆಕಾಯಿ ವ್ಯಾಪಾರ ಆರಂಭಿಸಿದ್ದು, ದೂರದ ಗೋವಾ ರಾಜ್ಯಕ್ಕೆ ಹೋಗಿ ಮಾರಾಟ ಮಾಡುವುದು ಕಷ್ಟ. ಆದರೂ ಮಾರಾಟ ಮಾಡುತ್ತಿದ್ದೇವೆ. ಸ್ಥಳೀಯವಾಗಿ ಅಂಗಡಿ, ಹೋಟೆಲ್ ತೆರೆದರೆ ಹಾಗೂ ಸಭೆ, ಸಮಾರಂಭ, ದೇವಸ್ಥಾನಗಳಲ್ಲಿ ಪೂಜೆ ಆರಂಭವಾದರೆ ಬಾಳೆಕಾಯಿಗೆ ಬೆಲೆ ಬರುವ ಸಾಧ್ಯತೆ ಇದೆ. | ಜನಾರ್ಧನ ಗೌಡ, ಬಾಳೆಕಾಯಿ ವ್ಯಾಪಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net