ಬಾಲ್ಯವಿವಾಹ ಸಮಾಜಕ್ಕೆ ಅಂಟಿದ ಪಿಡುಗು

HUN-MAR-13-1(BEEDI NATAKA AT KOTTEGALA)
Published on

ಹುಣಸೂರು: ಕ್ಷಯರೋಗ ಶಾಪವಲ್ಲ. ಬಾಲ್ಯವಿವಾಹ ಸಮಾಜಕ್ಕೆ ಅಂಟಿದ ಪಿಡುಗು. ಸ್ವಚ್ಛತೆ ಕಾಪಾಡಿಕೊಳ್ಳಿ, ಆರೋಗ್ಯ ಉಳಿಸಿಕೊಳ್ಳಿ...

ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ಮತ್ತು ಮೈಸೂರಿನ ರಂಗಾಂತರ ರಂಗ ತಂಡ ಕಲಾವಿದರ ಸಹಯೋಗದಲ್ಲಿ ಗುರುವಾರ ತಾಲೂಕಿನ ಕೊತ್ತೇಗಾಲ, ಹಿರೀಕ್ಯಾತನಹಳ್ಳಿ ಸೇರಿದಂತೆ ಹಲವು ಪ್ರಾಥಮಿಕ ಆರೋಗ್ಯ ಕೇಂದ್ರಗಳ ವ್ಯಾಪ್ತಿಯಲ್ಲಿ ಆರೋಗ್ಯ ಅರಿವು ಕುರಿತು ಆಯೋಜಿಸಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಕಲಾವಿದರು ಬೀದಿನಾಟಕ, ಜಾನಪದ ಗಾಯನಗಳ ಮೂಲಕ ವಿವಿಧ ಘೋಷಣೆಗಳೊಂದಿಗೆ ಜಾಗೃತಿ ಮೂಡಿಸಿದರು.

ಬಾಲ್ಯವಿವಾಹದಿಂದ ಅಪ್ರಾಪ್ತ ಮಕ್ಕಳ ಮೇಲಾಗುವ ದೈಹಿಕ ಮತ್ತು ಮಾನಸಿಕ ಪರಿಣಾಮಗಳು, ಪಾಲಕರು ಎದುರಿಸಬೇಕಾದ ಕಾನೂನು ತೊಡಕುಗಳು, ಎರಡೂ ಕುಟುಂಬಗಳ ದಾರುಣ ಪರಿಸ್ಥಿತಿಯ ಕುರಿತು ಮನಮುಟ್ಟುವಂತೆ ಪ್ರದರ್ಶನ ನೀಡಿದರು. ಕ್ಷಯರೋಗವೆಂದರೆ ದೇವರ ಶಾಪವೆಂದು ರೋಗಿಯನ್ನು ದೂರವಿಡುವ ಪದ್ಧತಿ ನಿಲ್ಲಿಸಲು ಹಾಡಿನ ಮೂಲಕ ಕೋರಲಾಯಿತು. ಕ್ಷಯ ರೋಗ ಶಾಪವಲ್ಲ, ಸೂಕ್ತ ಚಿಕಿತ್ಸೆಯಿಂದ ಗುಣಪಡಿಸಬಹುದಾದ ಕಾಯಿಲೆ. ಸರ್ಕಾರಿ ಆಸ್ಪತೆಗಳಲ್ಲಿ ಉಚಿತವಾಗಿ ಔಷಧೋಪಚಾರ ಸಿಗುವುದರ ಕುರಿತು ಮಾಹಿತಿ ನೀಡಲಾಯಿತು.

ಗ್ರಾಮೀಣರು ಆರೋಗ್ಯ ಕಾಪಾಡಿಕೊಳ್ಳುವ ಸಲುವಾಗಿ ವೈಯಕ್ತಿಕ ಮತ್ತು ಪರಿಸರ ಸ್ವಚ್ಛತೆ ಕಾಪಾಡಿಕೊಳ್ಳುವ ಕುರಿತು ಗಮನಹರಿಸಲು ಕೋರಲಾಯಿತು. ಆರೋಗ್ಯ ಇಲಾಖೆ ರೂಪಿಸಿರುವ ವಿವಿಧ ಕಾರ್ಯಕ್ತಮಗಳ ಕುರಿತು ಮಾಹಿತಿ ಒದಗಿಸಲಾಯಿತು. ಈ ವೇಳೆ ಮಾತನಾಡಿದ ರಂಗಾಂತರ ರಂಗ ತಂಡದ ಮುಖ್ಯಸ್ಥ ಕೆ.ಎಂ.ಕೀರ್ತಿರಾಜ್, ಆರೋಗ್ಯ ಇಲಾಖೆ ಸಹಯೋಗದಲ್ಲಿ ನಮ್ಮ ತಂಡದ ಕಲಾವಿದರೊಂದಿಗೆ ಗ್ರಾಮೀಣರಲ್ಲಿ ಸಮಾಜ ಎದುರಿಸುತ್ತಿರುವ ಹಲವಾರು ಅನಿಷ್ಟ ಪದ್ಧತಿಗಳ ಕುರಿತು ಅರಿವು ಮತ್ತು ಇಲಾಖೆಯ ವಿವಿಧ ಯೋಜನೆಗಳ ಕುರಿತು ಮಾಹಿತಿ ನೀಡಲಾಗುತ್ತಿದೆ ಎಂದರು.

ಕೊತ್ತೇಗಾಲ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಎಸ್.ಕೆ.ರವಿಕುಮಾರ್, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಸಿದ್ಧರಾಮೇಗೌಡ, ಕಲಾವಿದರಾದ ಸಾಗರ್, ಹೇಮಾ, ಪೃಥ್ವಿ, ದಿನೇಶ್, ಮಂಜುನಾಥ್, ವಿನೋದ್, ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆ ಸಿಬ್ಬಂದಿ, ಗ್ರಾಮಸ್ಥರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net