

ಬಾಗಲಕೋಟೆ: ಗ್ರಾಮೀಣ ಭಾಗದಲ್ಲಿ ಮೂಡನಂಬಿಕೆ, ಅನಿಷ್ಠ ಪದ್ಧತಿಗಳು ಇನ್ನು ಜೀವಂತವಿದ್ದು, ಇವುಗಳನ್ನು ಹೋಗಲಾಡಿಸಲು ಜನರಲ್ಲಿ ಜಾಗೃತಿ ಮೂಡಿಸುವ ಮೂಲಕ ಬಾಲ್ಯವಿವಾಹ ತಡೆಗಟ್ಟುವಲ್ಲಿ ಪಿಡಿಓಗಳ ಪಾತ್ರ ಮುಖ್ಯವಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಜಿ.ಎಸ್.ದೇಶಪಾಂಡೆ ಹೇಳಿದರು.
ಜಿಲ್ಲಾ ಪಂಚಾಯಿತಿ ಸಭಾಭವನದಲ್ಲಿ ಶುಕ್ರವಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಯುನಿಸೆಫ್ ಸಹಯೋಗದಲ್ಲಿ ಕ್ರೀಯಾಶೀಲ ಮಕ್ಕಳ ಗ್ರಾಮಸಭೆ ಅನುಷ್ಠಾನ, ಮಕ್ಕಳ ಹಕ್ಕುಗಳು ಮತ್ತು ಸಂರಕ್ಷಣೆಯಲ್ಲಿ ಗ್ರಾಮ ಪಂಚಾಯಿತಿಗಳ ಪಾತ್ರ ಕುರಿತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಹಮ್ಮಿಕೊಂಡ ಒಂದು ದಿನದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಬಾಲ್ಯವಿವಾಹಕ್ಕೆ ಮುಖ್ಯವಾಗಿ ಬಡತನ ಕಾರಣವಾಗಿದ್ದು, ಬಾಲ್ಯದಲ್ಲಿ ಮದುವೆಯಾದಲ್ಲಿ ಅದರಿಂದ ಉಂಟಾಗುವ ಪರಿಣಾಮ, ಮಗುವಿನ ಆರೋಗ್ಯ, ಅಪೌಷ್ಠಿಕತೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಶಾಲೆಗಳಿಗೆ ಭೇಟಿ ನೀಡಿ ಮಕ್ಕಳಲ್ಲಿ, ಮಕ್ಕಳ ಮೂಲಕ ಪಾಲಕರಲ್ಲಿ ಅರಿವು ಮೂಡಿಸಿ ಬಾಲ್ಯವಿವಾಹ ತಡೆಯುವ ಕೆಲಸವಾಗಬೇಕು. ಈ ಕಾರ್ಯದಲ್ಲಿ ಪಿಡಿಒಗಳ ಪಾತ್ರ ಬಹಳ ಮುಖ್ಯವಾಗಿರುವ ಹಿನ್ನಲೆಯಲ್ಲಿ ಇಂತಹ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಇದರ ಸದುಪಯೋಗ ಪಡೆದುಕೊಳ್ಳಲು ತಿಳಿಸಿದರು.
ಜಿಲ್ಲಾಧಿಕಾರಿ ಪಿ.ಸುನೀಲಕುಮಾರ ಮಾತನಾಡಿ, ಸರ್ಕಾರಿ ವೃತ್ತಿಯಲ್ಲಿ ಏನಾದರೂ ಸಾಧಿಸಲು ಹೊರಡುವರಿದ್ದರೆ, ತಮ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬಾಲ್ಯವಿವಾಹ ನಿಷೇಧದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ, ಹೆಣ್ಣು ಮಕ್ಕಳನ್ನು ರಕ್ಷಿಸುವ ಗುರಿ ಇಟ್ಟುಕೊಳ್ಳಬೇಕು. ಅಂದಾಗ ಮಾತ್ರ ಇಂತಹ ಸಾಮಾಜಿಕ ಪಿಡುಗುಗಳನ್ನು ತೊಡೆದು ಹಾಕಲು ಸಾಧ್ಯವಾಗುತ್ತದೆ. ಈ ಕಾರ್ಯದಲ್ಲಿ ಸ್ವಯಂ ಸೇವಾ ಸಂಸ್ಥೆಗಳ ಸಹಕಾರವನ್ನು ಸಹ ಪಡೆಯಲು ಹೇಳಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಟಿ.ಭೂಬಾಲನ್, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹೇಮಲತಾ ಪಸ್ತಾಪೂರ ಮತ್ತು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷ ಗುಲಾಬ ನದಾಫ್ ಕಾರ್ಯಾಗಾರ ಕುರಿತು ಮಾತನಾಡಿದರು. ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಕೊಪ್ಪಳ ಯುನಿಸೇಫ್‌ನ ರಾಘವೇಂದ್ರ ಭಟ್, ಹರೀಶ ಜೋಶಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಅಕ್ಕಮಹಾದೇವಿ ಕೆ.ಎಚ್, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ದಸ್ತಗಿರಿಸಾಬ ಮುಲ್ಲಾ, ಮಕ್ಕಳ ರಕ್ಷಣಾಧಿಕಾರಿ ಕೇಶವ ದಾಸ ಸೇರಿದಂತೆ ಇತರರು ಉಪಸ್ಥಿತರಿದ್ದರು.