

ಬಾಗಲಕೋಟೆ: ಬಾಲ್ಯ ವಿವಾಹದಿಂದ ಸಾವಿರಾರು ಹೆಣ್ಣು ಮಕ್ಕಳು ಈಗಾಗಲೇ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದಕ್ಕೆ ಕೊನೆ ಹಾಡಬೇಕಿದೆ. ಹೀಗಾಗಿ ಎಲ್ಲ ಇಲಾಖೆಗಳು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜೊತೆಗೆ ಜವಾಬ್ದಾರಿಯಿಂದ ನಡೆದುಕೊಳ್ಳಬೇಕಿದೆ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ ಹೇಳಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಾಲ್ಯ ವಿವಾಹಕ್ಕೆ ಒಳಗಾಗುವ ಮಕ್ಕಳು ಶಾಲೆ ಬಿಡುತ್ತಾರೆ. ೧೦ ದಿನಗಳಿಂದ ಹೆಚ್ಚು ಶಾಲೆಗೆ ಬರದ ಮಕ್ಕಳ ಬಗ್ಗೆ ಶಿಕ್ಷಣ ಇಲಾಖೆಯ ಶಿಕ್ಷಕರೂ ನಿಗಾ ಇಡಬೇಕು. ಕೂಡಲೇ ಸಂಬಂಧಿಸಿದವರಿಗೆ ಮಾಹಿತಿ ನೀಡಬೇಕು ಎಂದರು.
ಪುರುಷ, ಮಹಿಳೆಯರ ಲಿಂಗಾನುಪಾತ ಅಂತರ ಹೆಚ್ಚಾಗುತ್ತಿದೆ. ಲಿಂಗಾನುಪಾತ ಹೆಚ್ಚಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಬೇಕು. ಹೆಣ್ಣು ಮಕ್ಕಳ ಸಾಗಾಟ, ಹೆಣ್ಣು ಭ್ರೂಣ ಹತ್ಯೆ ತಡೆಗೆ ಜಾಗೃತಿ ಮೂಡಿಸುವ ಕೆಲಸ ಆಗಬೇಕು. ಅಪೌಷ್ಠಿಕತೆಯಿಂದ ಬಳಲುತ್ತಿರುವುದು ಕಂಡು ಬಂದಿದೆ. ಅಂತವರನ್ನು ಗುರುತಿಸಿ ಪೌಷ್ಠಿಕ ಆಹಾರ ನೀಡಬೇಕು ಎಂದು ಹೇಳಿದರು.
ಶೌಚಾಲಯ ನಿರ್ಮಾಣಕ್ಕೆ ಆದ್ಯತೆ ನೀಡಬೇಕು. ಇನಾಂ ತಾಂಡಾದಲ್ಲಿ ಅಧಿಕಾರಿಯೊಬ್ಬರು ಪಿಟ್ ನಿರ್ಮಾಣ ಮಾಡಲು ಸಾಧ್ಯವಾಗುತ್ತಿಲ್ಲ. ಕುಂಟು ನೆಪಗಳನ್ನು ಹೇಳದೆ ಮಹಿಳೆಯರಿಗೆ ಅವಶ್ಯವಿದ್ದಡೇ ಶೌಚಗೃಯಗಳನ್ನು ನಿರ್ಮಿಸಿಕೊಡಬೇಕು. ಕುಡಿಯುವ ನೀರು ಸೇರಿದಂತೆ ಮೂಲ ಸೌಲಭ್ಯಗಳನ್ನು ಒದಗಿಸಬೇಕು ಎಂದರು.
ಸಮಾಜ ಕಲ್ಯಾಣ ಇಲಾಖೆಯಲ್ಲಿ ಕೆಲವು ನೂನ್ಯತೆಗಳಿರುವುದು ಕಂಡು ಬಂದಿದೆ. ಅವುಗಳನ್ನು ಸರಿಪಡಿಸಿಕೊಳ್ಳಲು ಸೂಚಿಸಿದ್ದೇನೆ. ಮುಧೋಳ ವಸತಿ ನಿಲಯವೊಂದರಲ್ಲಿ ಬಾಗಿಲು ತುಕ್ಕು ಹಿಡಿದಿದೆ. ನೂಕಿದರೆ ಬಿದ್ದು ಹೋಗುವ ಸ್ಥಿತಿಯಲ್ಲಿತ್ತು. ಅದನ್ನು ಸರಿಪಡಿಸಬೇಕು. ಭದ್ರತೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಹೇಳಿದರು.