ಬಾಲ್ಯ ವಿವಾಹ ಪ್ರಕರಣಗಳು ಹೆಚ್ಚಳ

01 Hg Photo
Published on

ಹಗರೆ: ಮನೆ ಬಾಗಿಲಿಗೆ ಸರ್ಕಾರಿ ಯೋಜನೆಗಳ ಮಾಹಿತಿ ನೀಡುವುದು, ಗ್ರಾಮಗಳ ಸ್ವಚ್ಛತೆ ಬಗ್ಗೆ ಅರಿವು ಮೂಡಿಸುವುದು ರಾಷ್ಟ್ರೀಯ ಸೇವಾ ಯೋಜನೆಯ ಒಂದು ಭಾಗ ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ದಾಕ್ಷಾಯಿಣಿ ತಿಳಿಸಿದರು.

ಹಗರೆ ಸಮೀಪದ ಮಾದೀಹಳ್ಳಿ ಗ್ರಾಮದಲ್ಲಿ ಗುರುವಾರ ಹಾರನಹಳ್ಳಿ ರಾಮಸ್ವಾಮಿ ಉನ್ನತ ಶಿಕ್ಷಣ ಸಂಸ್ಥೆಯಿಂದ ಆಯೋಜಿಸಿದ್ದ ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ಶಿಬಿರದಲ್ಲಿ ಮಾತನಾಡಿದ ಅವರು, ಶಿಬಿರಾರ್ಥಿಗಳು ಸರ್ಕಾರಿ ಸೇವೆಗಳನ್ನು ಮನೆ ಬಾಗಿಲಿಗೆ ತಲುಪಿಸುವ ಪ್ರಯತ್ನ ಮಾಡಬೇಕು. ಇತ್ತೀಚಿನ ದಿನಗಳಲ್ಲಿ ಬಾಲ್ಯ ವಿವಾಹ ಪ್ರಕರಣಗಳು ಹೆಚ್ಚಾಗಿ ಪೋಕ್ಸೋ ಪ್ರಕರಣಗಳು ಹೆಚ್ಚು ದಾಖಲಾಗುತ್ತಿರುವುದನ್ನು ಕಾಣುತ್ತಿದ್ದೇವೆ. ಇದರಿಂದ ಯುವಕರ ಜೀವನ ಹಾಳಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

ವಿದ್ಯಾರ್ಥಿಗಳು ಪರವಾನಿಗೆ ಇಲ್ಲದೆ ವಾಹನ ಚಲಾಯಿಸಬಾರದು. ತಪ್ಪಿದ್ದಲ್ಲಿ ಪಾಲಕರೇ ನೇರ ಹೊಣೆಗಾರರಾಗಿರುತ್ತಾರೆ. ಅಪಘಾತ ಹಾಗೂ ಚೆಕ್ ಬೌನ್ಸ್ ಪ್ರಕರಣಗಳು ಹೆಚ್ಚುತ್ತಿದ್ದು ಮೌಖಿಕ ಸಾಕ್ಷಿಗಿಂತ ದಾಖಲಾತಿ ಸಾಕ್ಷ್ಯಕ್ಕೆ ಹೆಚ್ಚು ಪ್ರಾಮುಖ್ಯತೆ ದೊರಯಲಿದೆ ಎಂಬುದನ್ನು ಎಲ್ಲರೂ ತಿಳಿದುಕೊಳ್ಳಬೇಕು. ರೀಲ್ಸ್ ಹುಚ್ಚು ಬಿಟ್ಟು ವಿದ್ಯಾರ್ಥಿ ಜೀವನದ ಸುಂದರ ಕ್ಷಣಗಳನ್ನು ಆನಂದಿಸಿ ಎಂದು ಸಲಹೆ ನೀಡಿದರು.

ಕಾಲೇಜಿನ ಪ್ರಾಧ್ಯಾಪಕ ಯೋಗೇಶ್ ಮಾತನಾಡಿ, ನನಗಲ್ಲ, ನಿನಗಾಗಿ ಎಂಬುದೇ ರಾಷ್ಟ್ರೀಯ ಸೇವಾ ಶಿಬಿರದ ಧ್ಯೇಯ. ಪ್ರತಿಫಲಾಪೇಕ್ಷೆ ಇಲ್ಲದೆ ಅರ್ಪಣಾ ಭಾವದಿಂದ ಕಾರ್ಯನಿರ್ವಹಿಸುವುದೇ ಇದರ ಮುಖ್ಯ ಗುರಿ. ವಿದ್ಯಾರ್ಥಿಗಳು ಜಿಲ್ಲೆ, ರಾಜ್ಯ, ರಾಷ್ಟ್ರೀಯ ಮಟ್ಟದ ಶಿಬಿರಗಳಲ್ಲಿ ಪಾಲ್ಗೊಳ್ಳುವುದರಿಂದ ನಿಮ್ಮ ಕೌಶಲ ಬೆಳೆವಣಿಗೆಯಾಗಲಿದೆ ಎಂದರು.

ಕಟ್ಟಾಯ ಶಿವಕುಮಾರ್ ಮಾತನಾಡಿ, ಶಿಬಿರಗಳಿಂದ ಮಕ್ಕಳು ಪರಿವರ್ತನೆಗೊಳ್ಳುತ್ತಾರೆ. ಹೊಂದಾಣಿಕೆ ಗುಣ, ನಾಯಕತ್ವ ಗುಣ, ಶಿಸ್ತು ಬೆಳೆಯುತ್ತದೆ. ಸಾಮಾಜಿಕ ಮನೋಭಾವ ಬೆಳೆಯಲಿದೆ. ದುಶ್ಚಟಗಳಿಂದ ದೂರವಿದ್ದು ಅಧ್ಯಯನದ ಕಡೆ ಗಮನ ನೀಡಬೇಕು ಎಂದು ಸಲಹೆ ನೀಡಿದರು.

ಹಾರನಹಳ್ಳಿ ರಾಮಸ್ವಾಮಿ ಉನ್ನತ ಶಿಕ್ಷಣ ಸಂಸ್ಥೆಯ ರಾಷ್ಟ್ರೀಯ ಸೇವಾ ಯೋಜನೆಯ ಒಟ್ಟು 50 ಶಿಬಿರಾರ್ಥಿಗಳು ಪಾಲ್ಗೊಂಡಿದ್ದರು. ಹಾರನಹಳ್ಳಿ ರಾಮಸ್ವಾಮಿ ಉನ್ನತ ಶಿಕ್ಷಣ ಸಂಸ್ಥೆಯ ನಿರ್ದೇಶಕ ಡಾ.ಎಂ.ಕೆ ಪಾರ್ಥ, ಪ್ರಾಂಶುಪಾಲ ಅರುಣ್‌ಕುಮಾರ್, ವಿಭಾಗದ ಮುಖ್ಯಸ್ಥ ಗಣೇಶ್, ಶಿಬಿರ ಸಂಯೋಜಕಿ ಶೀಲಾ, ರಾಷ್ಟ್ರೀಯ ಸೇವಾ ಯೋಜನಾ ಅಧಿಕಾರಿ ನೀರಜ, ದೈಹಿಕ ಶಿಕ್ಷಣ ನಿರ್ದೇಶಕ ಲೋಕೇಶ್, ಮಾದೀಹಳ್ಳಿ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕಿ ಲಕ್ಷ್ಮೀದೇವಿ, ಗ್ರಾಮಸ್ಥ ರುದ್ರೇಶ್ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net