

ಕುಮಟಾ: ತಾಲೂಕಿನ ಅಘನಾಶಿನಿಯಲ್ಲಿ ತಾರಿ ಧಕ್ಕೆಯಿಂದ ತದಡಿ ನಡುವೆ ಜನರನ್ನು ಹಾಗೂ ದ್ವಿಚಕ್ರ ವಾಹನಗಳನ್ನು ಸಾಗಿಸುತ್ತಿದ್ದ ಬಾರ್ಜ್ ಹಾಳಾಗಿದ್ದು ನಿತ್ಯ ಇಲ್ಲಿ ಬಾರ್ಜ್ ಉಪಯೋಗಿಸುತ್ತಿದ್ದ ಸಾರ್ವಜನಿಕರಿಗೆ ಸಮಸ್ಯೆಯಾಗಿದೆ.
ಕರೊನಾ ಸಂಕಟದ ನಿಮಿತ್ತ ಲಾಕ್ಡೌನ್ ಆರಂಭವಾಗುತ್ತಿದ್ದಂತೆ ಅಲ್ಲೆಡೆ ಬಾರ್ಜ್ ಸೇವೆ ಸ್ಥಗಿತಗೊಳಿಸಲಾಗಿತ್ತು. ಅದರಂತೆ ತದಡಿ ಹಾಗೂ ಅಘನಾಶಿನಿ ತಾರಿದಕ್ಕೆ ನಡುವೆ ಅಳಿವೆಯಲ್ಲಿ ಸಂಚರಿಸುತ್ತಿದ್ದ ಬಾರ್ಜ್ ಸೇವೆಗೂ ಕಡಿವಾಣ ಬಿದ್ದಿತ್ತು. ಆದರೆ, ತಿಂಗಳ ಹಿಂದೆ ಲಾಕ್ಡೌನ್ ಸಡಿಲಿಕೆಯ ಬಳಿಕ ಜಿಲ್ಲೆಯ ಇತರೆಡೆಗಳಲ್ಲಿ ಬಾರ್ಜ್ ಸೇವೆಯನ್ನು ಪುನಃ ಆರಂಭಿಸಲಾಗಿದೆ. ಬಂದರು ಇಲಾಖೆಯಿಂದ ಗುತ್ತಿಗೆ ಪಡೆದ ದೋಣಿ ಹಾಗೂ ಬಾರ್ಜ್ನವರು ಬಹುತೇಕ ಎಲ್ಲೆಡೆ ಸಾರ್ವಜನಿಕರನ್ನು ನದಿ ದಾಟಿಸುವ ಕಾರ್ಯ ನಡೆಸಿದ್ದಾರೆ. ಆದರೆ, ಅಘನಾಶಿನಿ-ತದಡಿ ನಡುವಿನ ಬಾರ್ಜ್ ಮಾತ್ರ ತಾರಿದಕ್ಕೆಯಲ್ಲಿ ಸರಪಳಿ ಬಿಗಿದುಕೊಂಡು ನಿಂತಿದೆ.
ಇಲ್ಲಿ ಅಳಿವೆ ದಾಟಿ ಓಡಾಡುವವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಮುಖ್ಯವಾಗಿ ಮೀನುಗಾರರು ಹಾಗೂ ವಿವಿಧ ಉದ್ಯೋಗ ನಿರತರು ಅಳಿವೆಯನ್ನು ದಾಟಲೇಬೇಕಾಗುತ್ತದೆ. ಬಾರ್ಜ್ ಇಲ್ಲದಿರುವುದರಿಂದ ಖಾಸಗಿ ದೋಣಿಗಳನ್ನು ಅನಿವಾರ್ಯವಾಗಿ ಬಳಸುತ್ತಿದ್ದು, ಅಳಿವೆಯ ದೊಡ್ಡ ಅಲೆಗಳ ನಡುವೆ ಅಪಾಯಕಾರಿ ಎನ್ನಲಾಗಿದೆ. ಈ ದೋಣಿಗಳಲ್ಲಿ ದ್ವಿಚಕ್ರ ವಾಹನಗಳನ್ನು ಸಾಗಿಸಲು ಸಾಧ್ಯವಾಗುತ್ತಿಲ್ಲ. ಕೆಟ್ಟು ನಿಂತಿರುವ ಬಾರ್ಜ್ ಅನ್ನು ದುರಸ್ತಿ ಮಾಡುವ ಪ್ರಯತ್ನ ಸಂಬಂಧಪಟ್ಟವರಿಂದ ನಡೆದಿಲ್ಲ.
ಈಗಾಗಲೇ ಮಳೆಗಾಲ ಕಡಿಮೆಯಾಗುತ್ತಿದ್ದು, ಸೆಪ್ಟೆಂಬರ್ನಿಂದ ಮೀನುಗಾರಿಕೆ ವಹಿವಾಟು ನಿಧಾನವಾಗಿ ವೇಗ ಪಡೆಯಲಿದೆ. ತದಡಿ, ಗೋಕರ್ಣ ಹಾಗೂ ಸುತ್ತಮುತ್ತಲ ಪ್ರದೇಶಗಳಿಗೆ ತೆರಳುವವರು ಹಾಗೂ ಅಲ್ಲಿಂದ ಕುಮಟಾ ಕಡೆಗೆ ಬರುವವರು 30-40 ಕಿ.ಮೀ. ಸುತ್ತುಬಳಸಿ ಸಾಗಬೇಕಾಗುತ್ತದೆ. ಆದ್ದರಿಂದ ನಿತ್ಯ ಸಾವಿರಾರು ಮಂದಿಗೆ ಉಪಯುಕ್ತವಾದ ಬಾರ್ಜ್ ಸೇವೆಯನ್ನು ಕೂಡಲೆ ಆರಂಭಿಸಬೇಕು ಎಂಬ ಬೇಡಿಕೆ ಸಾರ್ವಜನಿಕರದ್ದಾಗಿದೆ.
ಅಘನಾಶಿನಿ-ತದಡಿ ನಡುವೆ ಬಾರ್ಜ್ ಸೇವೆ ಬಹಳ ಉಪಯುಕ್ತವಾದದ್ದು. ಲಾಕ್ಡೌನ್ನಿಂದ ಸ್ಥಗಿತಗೊಂಡಿತ್ತು. ಬಾರ್ಜ್ ಕೆಟ್ಟಿರುವ ಮಾಹಿತಿ ಇದ್ದು, ಶೀಘ್ರ ಬಾರ್ಜ್ ಸೇವೆ ಪುನಾರಂಭಕ್ಕೆ ಕ್ರಮ ಕೈಗೊಳ್ಳುತ್ತೇನೆ. | ದಿನಕರ ಶೆಟ್ಟಿ ಶಾಸಕ