

ಬಾಗಲಕೋಟೆ: ತೇರದಾಳ ಕ್ಷೇತ್ರದ ಶಾಸಕ ಸಿದ್ದು ಸವದಿಯೇ ಮುಂದಿನ ಬಿಜೆಪಿ ಅಭ್ಯರ್ಥಿ ಎಂದು ಘೋಷಿಸಿದ್ದ ಮಾಜಿ ಸಿಎಂ ಯಡಿಯೂರಪ್ಪ ಒಂದು ದಿನ ಕಳೆಯುವಷ್ಟರಲ್ಲಿ ಬುಧವಾರ ಆ ಬಗ್ಗೆ ಸ್ಪಷ್ಟನೆ ನೀಡಿದ್ದು, ಆದು ಬಾಯಿ ತಪ್ಪಿ ಹೇಳಿರುವ ಮಾತು ಎಂದಿದ್ದಾರೆ.
ಬಾಗಲಕೋಟೆ ನಗರದಲ್ಲಿ ಬುಧವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಯಾವುದೇ ಕ್ಷೇತ್ರದ ಅಭ್ಯರ್ಥಿಯನ್ನು ತೀರ್ಮಾನ ಮಾಡುವುದು ಕೇಂದ್ರ ಚುನಾವಣೆ ಸಮಿತಿ. ಹೀಗಾಗಿ ಆ ತರಹದ ನಾನು ಘೋಷಣೆ ಮಾಡಿದ್ದ ಬಾಯಿ ತಪ್ಪಿನಿಂದ ಎಂದು ತಿಳಿಸಿದ್ದಾರೆ.
ಬಾಗಲಕೋಟೆ, ಜಮಖಂಡಿ, ತೇರದಾಳ ಕ್ಷೇತ್ರಗಳಲ್ಲಿ ಟಿಕೆಟ್ ವಿಚಾರ ಗೊಂದಲ ಇದೆ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, ಅಧಿಕಾರಕ್ಕೆ ಬರುತ್ತೇವೆ ಎನ್ನುವ ಖಾತರಿ ಇರುವುದರಿಂದ ಟಿಕೆಟ್ ಪೈಪೋಟಿ ಹೆಚ್ಚಿದೆ. ಈ ಬಗ್ಗೆ ಆಕಾಂಕ್ಷಿಗಳ ಜೊತೆ ಕುಳಿತು ಮಾತನಾಡಿ ಎಲ್ಲರ ಸಹಕಾರದಿಂದ ಒಬ್ಬರನ್ನು ನಿಲ್ಲಿಸಿ ಗೆಲ್ಲುತ್ತೇವೆ. ಹೀಗಾಗಿ ಟಿಕೆಟ್ ಆಕಾಂಕ್ಷಿಗಳು ಗೊಂದಲ ಮಾಡಬೇಕಿಲ್ಲ. ಅಂತಿಮವಾಗಿ ಚುನಾವಣೆ ಏನು ಹೇಳುತ್ತದೆ ಅದಕ್ಕೆ ಎಲ್ಲರೂ ಸಹಕರಿಸಬೇಕು ಎಂದರು.
ಇನ್ನು ಬಾಗಲಕೋಟೆ ಶಾಸಕ ವೀರಣ್ಣ ಚರಂತಿಮಠ ಅವರ ಬಗ್ಗೆ, ಅಭಿವೃದ್ದಿ ಕಾರ್ಯಗಳ ಬಗ್ಗೆ ಮೆಚ್ಚುಗೆ ಸೂಚಿಸಿದ ಬಿಎಸ್‌ವೈ, ಮಂಗಳವಾರ ಬಾಗಲಕೋಟೆಯಲ್ಲಿ ನಡೆದ ಸಮಾವೇಶದ ಕುರಿತು ಸಂತೋಷ ವ್ಯಕ್ತಪಡಿಸಿದರು.
ಶಾಸಕ ವೀರಣ್ಣ ಚರಂತಿಮಠ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ ಇದ್ದರು.
ಜಾರಕಿಹೊಳಿ ಹೇಳಿಕೆ ಸರಿಯಲ್ಲ :ಮಹೇಶ ಕುಮಟಳ್ಳಿಗೆ ಟಿಕೆಟ್ ಕೊಡದೇ ಇದ್ದರೆ ಗೋಕಾಕನಲ್ಲಿ ನಾನು ಸ್ಪರ್ಧೆ ಮಾಡಲ್ಲ ಎಂದು ರಮೇಶ ಜಾರಕಿಹೊಳಿ ಅವರು ಆ ತರಹ ಹೇಳಿಕೆ ಕೊಡುವುದು ಸೂಕ್ತವಲ್ಲ. ಎಲ್ಲರ ಜೊತೆ ಕುಳಿತು ಸಮಾಲೋಚನೆ ಮಾಡದೇ ಈ ರೀತಿ ಹೇಳಿ ಗೊಂದಲ ಉಂಟು ಮಾಡುವುದನ್ನು ಇನ್ನಾದರೂ ನಿಲ್ಲಿಸಬೇಕು ಎಂದು ಸಲಹೆ ನೀಡಿದರು.
ಸೋಮಣ್ಣ ನಮ್ಮ ಜೊತೆಗೆ ಇರುತ್ತಾರೆ:
ವಿ.ಸೋಮಣ್ಣ ಅವರು ದೆಹಲಿಗೆ ಬೇರೆ ಕಾರಣಕ್ಕಾಗಿ. ಯಾವುದೇ ಕಾರಣಕ್ಕೂ ಅವರು ಪಕ್ಷ ಬಿಡಲ್ಲ. ಆ ಭಾಗದಲ್ಲಿ ಅವರು ಒಳ್ಳೆಯ ಕೆಲಸ ಮಾಡಿದ್ದಾರೆ. ಸೋಮಣ್ಣ ನಮ್ಮ ಜೊತೆಗೆ ಇರುತ್ತಾರೆ. ಎಲ್ಲ ಕಡೆಗೂ ಅವರಿಗೆ ಗೌರವ ಇದೆ. ಅವರ ಸಹಕಾರದಿಂದಲೇ ನಾವು ಅಧಿಕಾರಕ್ಕೆ ಬರುತ್ತೇವೆ ಎಂದು ಬಿಎಸ್ ವೈ ಹೇಳಿದರು