ಬಾದಾಮಿ ಸಿಪಿಐ ವಿರುದ್ದ ಹಿಂಜಾವೇ ಪ್ರತಿಭಟನೆ

bkt-08-13
ಬಾಗಲಕೋಟೆ ಎಸ್ಪಿ ಕಚೇರಿ ಎದುರು ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
Published on

ಬಾಗಲಕೋಟೆ: ಕೆರೂರ ಗಣೇಶ ವಿಸರ್ಜನೆ ವೇಳೆ ನಡೆದಿದ್ದ ಗಲಾಟೆಗೆ ಸಂಬಂಧಿಸಿದಂತೆ ಪೊಲೀಸರು ವಶಕ್ಕೆ ಪಡೆದಿರುವ ಹಿಂದೂ ಕಾರ್ಯಕರ್ತರ ಮೇಲೆ ಹಿಗ್ಗಾಮುಗ್ಗಾ ಹಲ್ಲೆ ನಡೆಸಿದ್ದಾರೆಂದು ಹಿಂದೂ ಜಾಗರಣ ವೇದಿಕೆ ಆರೋಪಿಸಿದೆ.
ಇದೇ ಕಾರಣಕ್ಕೆ ಘಟನೆಗೆ ಸಂಬಂಸಿದಂತೆ ಬಾದಾಮಿ ಸಿಪಿಐ ಕರೆಪ್ಪ ಬನ್ನೆ ಅವರ ವಿರುದ್ದ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿ ಹಿಂಜಾವೇ ಕಾರ್ಯಕರ್ತರು ಬಾಗಲಕೋಟೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಪೊಲೀಸರು ವಶಕ್ಕೆ ಪಡೆದಿರುವ ಆರು ಜನ ಕಾರ್ಯಕರ್ತರ ಮೇಲೆ ತೀವ್ರ ತರಹದ ಹಲ್ಲೆ ನಡೆಸಿದ್ದಾರೆ. ಅವರನ್ನು ಆಸ್ಪತ್ರೆಗೂ ಸೇರಿಸಿದೆ ಅನ್ಯಾಯ ಮಾಡುತ್ತಿದ್ದಾರೆ. ವಶಕ್ಕೆ ಪಡೆದಿರುವ ಶರಣು ಸಜ್ಜನ ಎನ್ನುವವರ ಮೇಳೆ ಭಾರಿ ಪ್ರಮಾಣದಲ್ಲಿ ಹಲ್ಲೆ ನಡೆದಿದೆ ಎಂದು ಆರೋಪಿಸಿದರು.
ಈ ವೇಳೆ ಡಿವೈಎಸ್ಪಿ ಪ್ರಶಾಂತ ಮುನ್ನೊಳ್ಳಿ ಅವರೊಂದಿಗೆ ವಾಗ್ವಾದವೂ ನಡೆಯಿತು. ಸಿಪಿಐ ವಿರುದ್ದ ಕ್ರಮ ತೆಗೆದುಕೊಳ್ಳಬೇಕು ಎಂದು ಎಸ್ಪಿ ಜಯಪ್ರಕಾಶ ಅವರನ್ನು ಒತ್ತಾಯಿಸಿದರು. ಬಿಜೆಪಿ ಜಿಲ್ಲಾ ಅಧ್ಯಕ್ಷ ಶಾಂತಗೌಡ ಪಾಟೀಲ, ಬಿಜೆಪಿ ಮುಖಂಡ ಬಸವರಾಜ ಯಂಕಂಚಿ, ಕುಮಾರಸ್ವಾಮಿ ಹಿರೇಮಠ ಸೇರಿದಂತೆ ಹಿಂಜಾವೇ ಅನೇಕ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಇದ್ದರು.

ಸಿಪಿಐ ಮೇಲೆ ಹಲ್ಲೆ ಆರೋಪ :
ಎರಡು ದಿನಗಳ ಹಿಂದೆ ಕೆರೂರ ಪಟ್ಟಣದಲ್ಲಿ ಗನೇಶ ವಿಸರ್ಜನೆ ವೇಳೆ ಮೆರವಣಿಗೆ ಬೇಗ ಬೇಗ ಮುಂದಕ್ಕೆ ಸಾಗಿಸಿ ಎಂದಿದ್ದಕ್ಕೆ ಕೆಲವರು ಸೇರಿ ಸಿಪಿಐ ಬನ್ನೆ ಹಾಗೂ ಇಬ್ಬರು ಕಾನ್ಸಟೇಬಲ್ ಗಳ ಮೇಲೆ ಹಲ್ಲೆ ನಡೆಸಿದ್ದರು ಎನ್ನುವ ಆರೋಪ ಇತ್ತು.ಸಿಪಿಐ ಕರೆಪ್ಪ ಬನ್ನೆ, ಕಾನ್ಸಟೇಬಲ್ ಗಳಾದ ಸುರೇಶ್ ಮತ್ತು ರಮೇಶ್ ಎನ್ನುವವರ ಮೇಲೆ ಹಲ್ಲೆ ಆಗಿತ್ತು. ಶರಣು ಸಜ್ಜನ ಸೇರಿ 11 ಜನರ ವಿರುದ್ಧ ಕೆರೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಆರು ಜನ ಆರೋಪಿಗಳನ್ನು ವಶಕ್ಕೆ ಪಡೆದಿದ್ದರು. ಇದೀಗ ವಶಕ್ಕೆ ಪಡೆದಿದ್ದ ಆರೋಪಿಗಳ ಮೇಲೆ ಪೊಲೀಸರು ಹಿಗ್ಗಾಮುಗ್ಗಾ ಹಲ್ಲೆ ನಡೆಸಿದ್ದಾರೆ ಎಂದು ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಪ್ರತ್ಯಾರೋಪ ಮಾಡಿ ಎಸ್ಪಿ ಕಚೇರಿ ಎದುರು ಪ್ರತಿಭಟನೆ ನಡೆಸಿ, ಹಲ್ಲೆಗೆ ಒಳಗಾದ ಯುವಕರನ್ನು ಮೆಡಿಕಲ್ ಮಾಡಿಸುವಂತೆ ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net