

ರಾಜೇಂದ್ರ ಶಿಂಗನಮನೆ
ಹೈನೋದ್ಯಮದ ಜೀವನಾಡಿಯಾದ ಬಹುತೇಕ ಹಾಲು ಉತ್ಪಾದಕ ಸಹಕಾರಿ ಸಂಘಗಳು ಸ್ವಂತ ಕಟ್ಟಡವಿಲ್ಲದೆ ಬಳಲುತ್ತಿವೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಶೇಕಡಾ 75ರಷ್ಟು ಸಂಘಗಳು ವಾರ್ಷಿಕ 40 ಲಕ್ಷ ರೂಪಾಯಿಗೂ ಅಧಿಕ ಮೊತ್ತವನ್ನು ಬಾಡಿಗೆ ರೂಪದಲ್ಲಿ ಪಾವತಿಸುತ್ತಿವೆ.
ಧಾರವಾಡ ಹಾಲು ಒಕ್ಕೂಟ ವ್ಯಾಪ್ತಿಗೆ ಸೇರಿದ ಉತ್ತರ ಕನ್ನಡ ಜಿಲ್ಲೆಯಲ್ಲಿ ಹಾಲು ಉತ್ಪಾದನೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಅದರಂತೆ ಗ್ರಾಮೀಣ ಭಾಗಗಳಲ್ಲಿ ಹಾಲು ಸಂಘಗಳು ಹೆಚ್ಚೆಚ್ಚು ತೆರೆದುಕೊಳ್ಳುತ್ತಿವೆ. ಪ್ರಸ್ತುತ 249 ಸಂಘಗಳಿದ್ದು, 5 ವರ್ಷದಲ್ಲಿ 100ಕ್ಕೂ ಹೆಚ್ಚು ಸಂಘಗಳು ಹೊಸದಾಗಿ ಆರಂಭಗೊಂಡಿವೆ. ಜಿಲ್ಲೆಯ ವ್ಯಾಪ್ತಿಯಲ್ಲಿ 8700 ಮಂದಿ ಹಾಲು ಉತ್ಪಾದಕರು ಈ ಸಂಘಗಳಿಗೆ ಹಾಲನ್ನು ಹಾಕುತ್ತಿದ್ದು, ನಿತ್ಯ 47 ಸಾವಿರ ಲೀ. ಉತ್ಪಾದನೆಯಾಗುತ್ತಿದೆ. ಆದರೆ, ಸಂಘಗಳಿಗೆ ಸ್ವಂತ ಕಟ್ಟಡ ಹೊಂದಲು ಸರ್ಕಾರದ ಯಾವುದೇ ಅನುದಾನ ದೊರೆಯದೆ ಇರುವುದು ನೂರಾರು ಸಂಘಗಳು ಇನ್ನೂ ಸಂಘ-ಸಂಸ್ಥೆಗಳ ಬಾಡಿಗೆ ಕಟ್ಟಡದಲ್ಲಿದ್ದು ನಷ್ಟದಲ್ಲಿ ದಿನ ಕಳೆಯುವಂತಾಗಿದೆ.
ಮೂರು ದಶಕ ಕಳೆದರೂ ಇಲ್ಲ: ಜಿಲ್ಲೆಯಲ್ಲಿ ಹಾಲು ಉತ್ಪಾದಕ ಸಂಘಗಳು ಮೂರು ದಶಕಗಳ ಹಿಂದೆ ಕಾರ್ಯಾರಂಭ ಮಾಡಿವೆ. ಇವು ಸಹಜವಾಗಿ ರೈತಾಪಿ ವರ್ಗವನ್ನು ಹಾಲು ಉತ್ಪಾದನೆಯಲ್ಲಿ ತೊಡಗುವುದಕ್ಕೆ ಉತ್ತೇಜಿಸಿವೆ. ಆದರೆ, ಮೂಲ ಸೌಲಭ್ಯಗಳಲ್ಲೊಂದಾದ ಸ್ವಂತ ಕಟ್ಟಡ ಹೊಂದುವುದಕ್ಕೆ ನೂರಾರು ಸಂಘಗಳಿಗೆ ಇನ್ನೂ ಸಾಧ್ಯವಾಗಿಲ್ಲ. ಜಿಲ್ಲೆಯಲ್ಲಿ 245 ಸಂಘಗಳಿದ್ದು, 70 ಸಂಘಗಳು ಮಾತ್ರ ಸ್ವಂತ ಕಟ್ಟಡ ಹೊಂದಿವೆ. ಇನ್ನುಳಿದ 175 ಸಂಘಗಳು ಬಾಡಿಗೆ ಕಟ್ಟಡದಲ್ಲೇ ಕಾರ್ಯ ನಿರ್ವಹಿಸುತ್ತಿವೆ. ಹೆಚ್ಚಿನ ಸಂಘಗಳು ಸರಾಸರಿ ದಿನಕ್ಕೆ 200ರಿಂದ 250 ಲೀ. ಹಾಲು ಉತ್ಪಾದನೆ ಮಾಡುತ್ತವೆ. ಕೆಲವು ಸಂಘಗಳು ಇದಕ್ಕೂ ಹೆಚ್ಚು ಉತ್ಪಾದಿಸುವುದಿದೆ. ಎಷ್ಟೇ ಉತ್ಪಾದನೆಯಾದರೂ ಸಂಘಗಳಿಗೆ ಲಾಭ ಆಗುತ್ತಿಲ್ಲ. ಹೀಗೆ ಬಂದ ಆದಾಯದಲ್ಲಿ ಸಂಘಕ್ಕೆ ಬೇಕಾದ ಕಟ್ಟಡ ನಿರ್ಮಾಣ ಕಷ್ಟಕರ. ಹೀಗಾಗಿ, ಕಟ್ಟಡಗಳ ನಿರ್ವಣಕ್ಕೆ ಸರ್ಕಾರದ ಅನುದಾನ ಅನಿವಾರ್ಯ ಎಂಬುದು ಹೈನುಗಾರರ ನಿರೀಕ್ಷೆಯಾಗಿದೆ.
ಇಕ್ಕಟ್ಟಿನ ಸ್ಥಳಗಳೇ ಹೆಚ್ಚು: ಹಾಲಿನ ಗುಣಮಟ್ಟ ಗುರುತಿಸುವ ಯಂತ್ರಗಳು, ಕ್ಯಾನ್, ಟೇಬಲ್, ಖುರ್ಚಿ ಸೇರಿದಂತೆ ಸಾಕಷ್ಟು ಸಾಮಗ್ರಿಗಳು ಹಾಗೂ ರೈತರಿಗೆ ವಿತರಿಸುವ ಪಶು ಆಹಾರಗಳನ್ನು ಕಚೇರಿಯಲ್ಲಿ ಸಂಗ್ರಹಿಸಬೇಕು. ಬಹುತೇಕ ಬಾಡಿಗೆ ಕಟ್ಟಡಗಳು ಜಾಗದ ಕೊರತೆಯಿಂದ ಬಳಲುತ್ತಿವೆ. ಆದರೂ ಕನಿಷ್ಠ 500 ರೂ.ಗಳಿಂದ 2500 ರೂ.ವರೆಗೆ ಸಂಘಗಳು ಬಾಡಿಗೆ ನೀಡುತ್ತಿವೆ. ಹೀಗೆ ಜಿಲ್ಲೆಯಲ್ಲಿ ಬಾಡಿಗೆ ಕಟ್ಟಡದಲ್ಲಿರುವ ಸಂಘಗಳು ವಾರ್ಷಿಕ 40 ಲಕ್ಷ ರೂ.ಗಳಷ್ಟು ಮೊತ್ತವನ್ನು ಬಾಡಿಗೆ ರೂಪದಲ್ಲಿ ಪಾವತಿಸುತ್ತಿವೆ. ಆದರೂ ಕೆಲವು ಕಡೆ ಬಾಡಿಗೆ ಕಟ್ಟಡಗಳು ಮಳೆಗಾಲದಲ್ಲಿ ಸೋರುತ್ತವೆ. ಹಾಲು ನೀಡಲು ಬಂದವರಿಗೆ ನಿಲ್ಲಲಾಗದಂತಹ ಇಕ್ಕಟ್ಟಿನ ಸ್ಥಿತಿ ಹಲವೆಡೆಯಿದೆ. ಈ ಎಲ್ಲ ಸಮಸ್ಯೆ ನಿವಾರಣೆಗೆ ಹಾಲು ಸಂಘಗಳಿಗೆ ಸ್ವಂತ ಕಟ್ಟಡ ಹೊಂದುವುದು ಅನಿವಾರ್ಯ ಎಂಬುದು ಸಂಘ ನಡೆಸುವವರ ಮಾತಾಗಿದೆ.
ಲಾಭ ಮಾಡುವ ಸಂಘಗಳು ಎಂಬ ಕಾರಣಕ್ಕೆ ಹಾಲು ಉತ್ಪಾದಕ ಸಂಘಗಳಿಗೆ ಸರ್ಕಾರದಿಂದ ಅನುದಾನ ಸಿಗುತ್ತಿಲ್ಲ. ದಶಕದ ಹಿಂದೆ ಜಿಲ್ಲಾ ಪಂಚಾಯಿತಿಯಲ್ಲಿ ಹಾಲು ಸಂಘಗಳ ಮೂಲಸೌಲಭ್ಯ ಕಲ್ಪಿಸಲು ಅನುದಾನ ದೊರಕುತ್ತಿತ್ತು. ಅದನ್ನೂ ರದ್ದು ಪಡಿಸಲಾಗಿದೆ. ಹಾಲು ಸಂಘಗಳು ನಿತ್ಯ ಸರಾಸರಿ 250 ಲೀ. ಹಾಲು ಉತ್ಪಾದನೆ ಮಾಡುತ್ತವೆ. ಇದರಲ್ಲಿ ಇಬ್ಬರು ನೌಕರರಿಗೆ ವೇತನ ಕೊಟ್ಟು ಎಷ್ಟು ಲಾಭ ಮಾಡಲು ಸಾಧ್ಯ? ಹಾಗಾಗಿ ಹೈನೋದ್ಯಮ ಬೆಳೆಸುವ ದೃಷ್ಟಿಯಿಂದ ಹಾಲು ಸಂಘಗಳ ಕಟ್ಟಡ ನಿರ್ವಣಕ್ಕೆ ಶಾಸಕರ, ಜಿಲ್ಲಾ ಪಂಚಾಯಿತಿ ಅನುದಾನ ದೊರಕುವಂತಾಗಬೇಕು.| ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ,ಧಾರವಾಡ ಹಾಲು ಒಕ್ಕೂಟದ ನಿರ್ದೇಶಕ.