ಬಾಚೇನಹಳ್ಳಿ ಸರ್ಕಾರಿ ಶಾಲೆಗೆ ಹೊಸ ರೂಪ

29 GANDASI .. 2
Published on

ಗಂಡಸಿ: ದುಸ್ಥಿತಿಗೆ ತಲುಪಿದ್ದ ಹೋಬಳಿಯ ಬಾಚೇನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಶಾಲೆಯ ಹಿರಿಯ ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ಹೊಸ ರೂಪ ನೀಡಿದ್ದಾರೆ.

ಮಳೆಗಾಲ ಬಂದರೆ ಸಾಕು ಗೋಡೆಗಳ ಬಿರುಕಿನಿಂದ ಮಳೆ ನೀರು ಶಾಲಾ ಕೊಠಡಿಯೊಳಗೆ ತುಂಬಿಕೊಳ್ಳುತ್ತಿತ್ತು. ಕಿಟಕಿ, ಬಾಗಿಲು, ಛಾವಣಿ ಗೆದ್ದಲು ತಿಂದಿದ್ದವು. ಸುಣ್ಣ-ಬಣ್ಣ ಕಂಡು ಹಲವು ವರ್ಷಗಳಾಗಿದ್ದವು. ಶಾಲೆಯ ಸ್ಥಿತಿ ಕಂಡ ಹಿರಿಯ ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು 2025ರ ಜನವರಿಯಲ್ಲಿ ಸಭೆ ಸೇರಿ ಶಾಲೆ ದುರಸ್ತಿಗೆ ನಿರ್ಣಯ ತೆಗೆದುಕೊಂಡರು.

ಅದರಂತೆ ಹಿರಿಯ ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ದೇಣಿಗೆ ನೀಡಿದರು. ಒಟ್ಟು 10 ಲಕ್ಷ ರೂ.ವೆಚ್ಚದಲ್ಲಿ ಶಾಲೆಗೆ ಕಬ್ಬಿಣದ ಛಾವಣಿ, ಕಿಟಕಿ, ಬಾಗಿಲು, ನೆಲಕ್ಕೆ ಟೈಲ್ಸ್, ಕುಡಿಯುವ ನೀರು, ಶೌಚಗೃಹ ವ್ಯವಸ್ಥೆ ಮಾಡಿದ್ದಾರೆ. ಶಾಲೆಯ ಕೊಠಡಿಗಳು ಮತ್ತು ಕಾಂಪೌಂಡ್‌ಗೆ ಬಣ್ಣ ಹೊಡೆಸಿದ್ದಾರೆ. ಹೀಗೆ ಹೊಸ ರೂಪ ಪಡೆದ ಶಾಲೆಯನ್ನು ಭಾನುವಾರ ಹೆಗ್ಗಟ್ಟ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂಜಪ್ಪ ಉದ್ಘಾಟಿಸಿದರು.

ಶಾಲೆಯ ಹಿರಿಯ ವಿದ್ಯಾರ್ಥಿ ಪರಮೇಶ್ ಮಾತನಾಡಿ, ಗ್ರಾಮದ ಶಾಲೆಯನ್ನು ಉಳಿಸುವ ಸಲುವಾಗಿ ಹಿರಿಯ ವಿದ್ಯಾರ್ಥಿಗಳು, ಗ್ರಾಮಸ್ಥರು ತುಂಬಾ ಸಹಕಾರ ನೀಡಿದ್ದಾರೆ. ಮಕ್ಕಳನ್ನು ಮರಳಿ ನಮ್ಮ ಶಾಲೆಗೆ ಕರೆತಂದು ದಾಖಲಾತಿಯತ್ತ ಗಮನಹರಿಸುವುದು ಮುಖ್ಯವಾಗಿದೆ. ಪಕ್ಕದ ಗ್ರಾಮಗಳಿಂದ ನಮ್ಮ ಶಾಲೆಗೆ ಬರುವ ಮಕ್ಕಳಿಗೆ ಸದ್ಯಕ್ಕೆ ಉಚಿತ ಆಟೋ ವ್ಯವಸ್ಥೆ ಮಾಡಲಾಗಿದ್ದು ಮುಂದಿನ ದಿನಗಳಲ್ಲಿ ಹಿರಿಯ ವಿದ್ಯಾರ್ಥಿಗಳಿಂದ ಮಿನಿ ಬಸ್ ವ್ಯವಸ್ಥೆ ಮಾಡಲಾಗುವುದು ಎಂದರು.

ಹೆಗ್ಗಟ್ಟ ಗ್ರಾಪಂ ಮಾಜಿ ಅಧ್ಯಕ್ಷ ಮಂಜೇಗೌಡ, ಹಿರಿಯ ವಿದ್ಯಾರ್ಥಿಗಳು, ಎಸ್‌ಡಿಎಂಸಿ ಸದಸ್ಯರು, ಪಾಲಕರು, ಗ್ರಾಮಸ್ಥರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net