ಬಾಗಲಕೋಟೆಯಲ್ಲಿ ೧೩೪ ಕೋಟಿ ರೂ. ಕಾಮಗಾರಿ ರದ್ದು

bkt-09-11
Published on

ಬಾಗಲಕೋಟೆ: ಬಾಗಲಕೋಟೆ ಕ್ಷೇತ್ರದಲ್ಲಿ ಬಿಜೆಪಿ ಸರ್ಕಾರ ಇದ್ದಾಗ ಮಂಜೂರಿ ಮಾಡಿಸಿದ್ದ ೧೩೪ ಕೋಟಿ ರೂ.ಗಳ ವಿವಿಧ ಕಾಮಗಾರಿಗಳು ರದ್ದಾಗಿವೆ ಎಂದು ಮಾಜಿ ಶಾಸಕ ವೀರಣ್ಣ ಚರಂತಿಮಠ ಆರೋಪಿಸಿದ್ದಾರೆ.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಟಿಡಿಎನಲ್ಲಿ ನಾವು ಇದ್ದಾಗ ೩೮೪ ಕೋಟಿ ರೂ. ಕಾರ್ಪಸ್ ಫಂಡ್ ಸಂಗ್ರಹಿಸಿ ಇಟ್ಟಿದ್ದೇವು. ಸರ್ಕಾರ ಅದನ್ನು ಪಡೆದುಕೊಂಡಿದ್ದು, ಈ ವರೆಗೂ ಈಗಿನ ಶಾಸಕರಿಗೆ ಆ ಹಣವನ್ನು ವಾಪಸ್ಸು ತರಲು ಆಗಿಲ್ಲ ಎಂದರು.

ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿದ್ದ ಕಾಮಗಾರಿಗಳಷ್ಟೆ ನಡೆದಿವೆ. ಇವರು ಯಾವುದೇ ಹೊಸ ಕಾಮಗಾರಿ ತಂದಿಲ್ಲ. ಇನ್ನು ಬಾಗಲಕೋಟೆಗೆ ಸರ್ಕಾರಿ ಮೆಡಿಕಲ್ ಕಾಲೇಜ್ ಆರಂಭಿಸುತ್ತಿಲ್ಲ ಎಂದು ನಮ್ಮ ವಿರುದ್ಧ ಆರೋಪ ಮಾಡಿ ಹೋರಾಟ ಮಾಡುತ್ತಿದ್ದರಲ್ಲ. ಈಗ ಕಾಂಗ್ರೆಸ್ ಸರ್ಕಾರ ಬಂದಿದೆಯಲ್ಲ. ಮೆಡಿಕಲ್ ಕಾಲೇಜ್ ತಂದರಾ? ಇತ್ತೀಚಿಗೆ ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ ಪಾಟೀಲ ಏನು ಹೇಳಿದ್ದಾರೆ? ಮತ್ತೆ ಬಿಜೆಪಿ ಸರ್ಕಾರ ಇದ್ದಾಗ ಮೆಡಿಕಲ್ ಕಾಲೇಜ್ ಎಂದು ನಮ್ಮ ವಿರುದ್ಧ ಬಡಬಡಿಸುತ್ತಿದ್ದವರು ಈಗ ಏಕೆ ಹೋರಾಟ ಮಾಡುತ್ತಿಲ್ಲ ಎಂದು ಚುಚ್ಚಿದರು.

ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡುವುದು, ಮೆಡಿಕಲ್ ಕಾಲೇಜ್ ತರುವುದನ್ನು ಬಿಟ್ಟು ಬರೀ ಬಿವಿವಿ ಸಂಘದ ವಿರುದ್ಧ ಕೆಲಸ ಮಾಡುತ್ತಾರೆ ಎಂದು ಶಾಸಕ ಎಚ್.ವೈ.ಮೇಟಿ ವಿರುದ್ಧ ಹರಿಹಾಯ್ದರು. ಬಾಗಲಕೋಟೆ ಶಾಸಕರ ಅಳಿಯ ಆರೋಗ್ಯ ಇಲಾಖೆಯಲ್ಲಿ ೯೨ ಹುದ್ದೆಗಳನ್ನು ನಿಯಮ ಮೀರಿ ತುಂಬಿಕೊಂಡು ೩೦-೪೦ ಕೋಟಿ ರೂ. ದುಡ್ಡು ಹೊಡೆದಿದ್ದಾರೆ. ಅದೆಲ್ಲ ಬಡವರ ದುಡ್ಡು. ಜೊತೆಗೆ ಪ್ರವಾಸೋದ್ಯಮ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಹಗರಣಗಳು ನಡೆದಿವೆ. ಎಲ್ಲೆಲ್ಲಿ ದುಡ್ಡು ಸಿಗುತ್ತದೆಯೋ ಅಲ್ಲೆಲ್ಲ ಹೊಡೆಯಲು ಸಜ್ಜಾಗಿದ್ದಾರೆ. ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ ಎಂದು ದೂರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net