

ಬಾಗಲಕೋಟೆ: ಆಮೆಗತಿಯಲ್ಲಿ ಸಾಗಿರುವ ಬಾಗಲಕೋಟೆ-ಕುಡಚಿ ರೈಲು ಹಳಿ ನಿರ್ಮಾಣ ಕಾರ್ಯಕ್ಕೆ ಇದೀಗ ರೈತರು ತಡೆಯೊಡ್ಡಿದ್ದಾರೆ. ಯೋಜನೆಗೆ ಜಮೀನು ಕಳೆದುಕೊಂಡ ರೈತ ಕುಟುಂಬಕ್ಕೆ ಇಲಾಖೆಯಲ್ಲಿ ಡಿ ಗ್ರುಪ್ ನೌಕರಿ ಕೊಡುವ ಭರವಸೆ ಈಡೇರದ ಹಿನ್ನಲೆಯಲ್ಲಿ ರೈತರು ಪ್ರತಿಭಟನೆಗೆ ಇಳಿದಿದ್ದರೇ.
ಬಾಗಲಕೋಟೆ ತಾಲೂಕಿನ ಸಿಕ್ಕೇರಿ ಮೇಲ್ಸೇತುವೆ ಬಳಿ ಜಮೀನು ಕಳೆದುಕೊಂಡ ರೈತರು ನಿರ್ಮಾಣ ಆಗಿರುವ ರೈಲು ಹಳಿ ಮೇಲೆ ಕುಳಿತು ಗುರುವಾರ ಪ್ರತಿಭಟನೆ ನಡೆಸಿದರು.
ರೈತರ ಪ್ರತಿಭಟನೆಗೆ ವಿವಿಧ ರೈತ ಸಂಘಟನೆ ಮುಖಂಡರು, ಆಮ್ ಆದ್ಮಿ ಸೇರಿದಂತೆ ಅನೇಕರು ಬೆಂಬಲ ವ್ಯಕ್ತಪಡಿಸಿ ಹೋರಾಟದಲ್ಲಿ ಪಾಲ್ಗೊಂಡರು. ರೈತರು ಹಳಿಯ ಮೇಲೆ ಕುಳಿತು ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಸಾಕಷ್ಟು ಸಂಖ್ಯೆಯ ಪೊಲೀಸರನ್ನು ಭದ್ರತೆ ನಿಯೋಜಿಸಲಾಗಿತ್ತು.
೨೦೧೦ರಲ್ಲಿ ಯೋಜನೆಗಾಗಿ ಜಮೀನು ಸ್ವಾಧೀನ ಪಡಿಸಿಕೊಳ್ಳುವ ವೇಳೆ ಇಲಾಖೆ ಅಧಿಕಾರಿಗಳು ಹಾಗೂ ಈ ಭಾಗದ ಜನಪ್ರತಿನಿಧಿಗಳು ಸಂತ್ರಸ್ತ ರೈತ ಕುಟುಂಬಗಳಲ್ಲಿ ಒಬ್ಬರಿಗೆ ರೈಲ್ವೆ ಇಲಾಖೆಯಲ್ಲಿ ಡಿ ಗ್ರುಪ್ ಹುದ್ದೆ ನೀಡಲಾಗುವುದು ಎಂದು ಭರವಸೆ ನೀಡಿದರು. ೧೨ ವರ್ಷಗಳು ಕಳೆದರೂ ಈ ವರೆಗೂ ಒಂದೇ ಒಂದು ಕುಟುಂಬದವರಿಗೆ ಸರ್ಕಾರಿ ನೌಕರಿ ಸಿಕ್ಕಿಲ್ಲ. ಒಂದು ಕಡೆಗೆ ರೈಲು ಯೋಜನೆಗೆ ಜಮೀನು ಕಳೆದುಕೊಂಡಿದ್ದೇವೆ. ಮತ್ತೊಂದೆಡೆ ಆಲಮಟ್ಟಿ ಜಲಾಶಯ ನಿರ್ಮಾಣಕ್ಕೆ ಮನೆಗಳನ್ನು ಕಳೆದುಕೊಂಡಿದ್ದೇವೆ. ಆದರೆ, ನೌಕರಿ ಬಗ್ಗೆ ಕೊಟ್ಟ ಭರವಸೆ ಮಾತ್ರ ಈಡೇರಿಸಿಲ್ಲ ಎಂದು ಪ್ರತಿಭಟನಾಕಾರರ ಆಕ್ರೋಶ ವ್ಯಕ್ತಪಡಿಸಿದರು.
ರೈತರ ಪ್ರತಿಭಟನೆ ಹಿನ್ನಲೆಯಲ್ಲಿ ಸ್ಥಳಕ್ಕೆ ಬಾಗಲಕೋಟೆ ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ, ತಹಸೀಲ್ದಾರ ವಿನಯ ಪಾಟೀಲ ಹಾಗೂ ಹುಬ್ಬಳ್ಳಿ ರೈಲ್ವೆ ಇಲಾಖೆಯ ಸೂಪರಿಡೆಂಟ್ ಡಿ.ಡಿ.ನಾಗ್ಪುರ ಹಾಗೂ ಸಿಬ್ಬಂದಿ ಭೇಟಿ ನೀಡಿ ರೈತರ ಮನವೊಲಿಸುವ ಪ್ರಯತ್ನ ನಡೆಸಿದರು. ಆದರೆ, ತಮ್ಮ ಬೇಡಿಕೆ ಈಡೇರುವವರೆಗೂ ಯಾವುದೇ ಕಾರಣಕ್ಕೂ ಕಾಮಗಾರಿ ಆರಂಭಿಸಬಾರದು ಎಂದು ಬಿಗಿಪಟ್ಟು ಹಿಡಿದರು.
ಬಾಗಲಕೋಟೆ-ಕುಡಚಿ ಡಬಲ್ ಮಾರ್ಗದಲ್ಲಿ ಒಂದುವರೆ ಕಿ.ಮೀ. ಕಾಮಗಾರಿ ಆರಂಭಕ್ಕೆ ಇಲಾಖೆ ಎಲ್ಲ ಸಿದ್ದತೆ ಮಾಡಿಕೊಂಡಿದ್ದು, ಕಾಮಗಾರಿಗೆ ಅವಕಾಶ ಕೊಡುವಂತೆ ಕೋರಿದರಾದರೂ ಅದಕ್ಕೆ ಪ್ರತಿಭಟನಾಕಾರರು ಒಪ್ಪಲಿಲ್ಲ. ಕೊನೆಗೆ ತಮ್ಮ ಬೇಡಿಕೆ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತಂದು ಕ್ರಮ ತೆಗೆದುಕೊಳ್ಳಲಾಗುವುದು. ಅಲ್ಲಿವರೆಗೂ ಕಾಮಗಾರಿ ಬಂದ ಇಡಲಾಗುವುದು ಎಂದು ಹೇಳಿದ ಬಳಿಕ ರೈತರು ಪ್ರತಿಭಟನೆ ಕೈಬಿಟ್ಟರು.
ಸಂತ್ರಸ್ತರಾದ ದುರುಗಪ್ಪ ಕಟ್ಟಿಮನಿ, ಮಂಜು ಕೊಪ್ಪದ, ನಾಗೇಶ ಚವ್ಹಾಣ, ಶಿವಕುಮಾರ ಚವ್ಹಾಣ, ದಲಿತ ಸಂಘಟನೆ ಮುಖಂಡ ಸತೀಶ ಮಾದರ, ಆಮ್ ಆದ್ಮಿ ಪಕ್ಷದ ರಮೇಶ ಬದ್ನೂರ, ಉದ್ಯಮಿ ರವಿ ಕುಮಟಗಿ ಸೇರಿದಂತೆ ಅನೇಕ ಮುಖಂಡರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ರೈತರ ಬೇಡಿಕೆ ವಿಚಾರವಾಗಿ ಈಗಾಗಲೇ ಎರಡು ಮೂರು ಸಲ ಸಭೆ ನಡೆಸಿದ್ದೇನೆ. ಶಿಕ್ಕೇರಿ ಭಾಗದಲ್ಲಿ ಡಬ್ಲಿಂಗ್ ರೈಲು ಹಳಿ ಕಾಮಗಾರಿ ನಡೆಯಬೇಕಿದೆ. ೨೦೧೨ರಲ್ಲಿ ಭೂಸ್ವಾಧೀನ ಮಾಡಿಕೊಳ್ಳಲಾಗಿದೆ. ರೈತರು ತಮಗೆ ನೌಕರಿ ಸಿಕ್ಕಿಲ್ಲ ಎಂದು ಪ್ರತಿಭಟನೆ ನಡೆಸಿದ್ದರೆ. ರೈಲು ಇಲಾಖೆ ಅಧಿಕಾರಿಗಳು ತಮ್ಮ ಹಂತದಲ್ಲಿ ಕ್ರಮ ತೆಗೆದುಕೊಳ್ಳಬೇಕಿದೆ.
ಶ್ವೇತಾ ಬೀಡಿಕರ ಉಪವಿಭಾಗಾಧಿಕಾರಿ, ಬಾಗಲಕೋಟೆ.