

ಯಳಂದೂರು: ತಾಲೂಕಿನ ಯರಿಯೂರು ಗ್ರಾಮದಲ್ಲಿ ಸಾರಿಗೆ ಬಸ್‌ಗಳನ್ನು ನಿಲ್ಲಿಸುವುದಿಲ್ಲ. ಮಹಿಳೆಯರು, ವೃದ್ಧರು, ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ ಎಂದು ಗ್ರಾಮಸ್ಥರು ಮಂಗಳವಾರ ಗ್ರಾಮದ ರಾಷ್ಟ್ರೀಯ ಹೆದ್ದಾರಿ 948ರಲ್ಲಿ ವಾಹನ ಸಂಚಾರ ತಡೆದು ಪ್ರತಿಭಟಿಸಿದರು.
ಗ್ರಾಮದಲ್ಲಿ 5 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇದೆ. ಪ್ರತಿನಿತ್ಯ ಇಲ್ಲಿಂದ ಕೂಲಿ ಕಾರ್ಮಿಕರು, ರೈತರು, ಮಹಿಳೆಯರು, ವಿದ್ಯಾರ್ಥಿಗಳು ಪಕ್ಕದ ಯಳಂದೂರು, ಕೊಳ್ಳೇಗಾಲ, ಚಾಮರಾಜನಗರ, ಮೈಸೂರಿಗೆ ನಿತ್ಯ ತೆರಳುತ್ತಾರೆ. ಗ್ರಾಮದಲ್ಲಿ ವಿಭಾಗೀಯ ನಿಯಂತ್ರಣಾಧಿಕಾರಿಗಳು ಬಸ್ ನಿಲ್ಲಿಸುವಂತೆ ಆದೇಶ ಪತ್ರ ನೀಡಿದ್ದರೂ ಸಂಬಂಧಪಟ್ಟ ಸಾರಿಗೆ ಇಲಾಖೆ ಅಧಿಕಾರಿಗಳು ಇಲ್ಲಿ ಬಸ್ ನಿಲ್ಲಿಸಲು ನಮ್ಮದು ಗುಂಡ್ಲುಪೇಟೆ, ಚಾಮರಾಜನಗರ, ಕೊಳ್ಳೇಗಾಲ ಡಿಪೋ ಎನ್ನುತ್ತಾರೆ. ನಮಗೆ ನಮ್ಮ ಡಿಸಿ ಯಾವುದೇ ಮಾಹಿತಿ ಕೊಟ್ಟಿಲ್ಲ. ಹಾಗಾಗಿ ಬಸ್ ನಿಲ್ಲಿಸುವುದಿಲ್ಲ ಎಂಬ ನೆಪವೊಡ್ಡಿ ಬಸ್ ನಿಲ್ಲಿಸುತ್ತಿಲ್ಲ. ಈ ಬಗ್ಗೆ ಶಾಸಕರು ಶಿಫಾರಸು ಪತ್ರ ನೀಡಿದ್ದರೂ ಇಲ್ಲಿ ಬಸ್ ನಿಲ್ಲಿಸಲು ಸ್ಟೇಜ್ ಇಲ್ಲ ಎಂಬ ಉಡಾಫೆ ಉತ್ತರ ನೀಡುತ್ತಾರೆ ಎಂದು ದೂರಿದರು.
ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಪ್ರತಿಭಟನೆ ನಡೆಸಿದ್ದರಿಂದ ವಾಹನ ದಟ್ಟಣೆ ಉಂಟಾಗಿತ್ತು. ಮಾಹಿತಿ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ವಾಗ್ವಾದ ನಡೆಯಿತು. ಪೊಲೀಸರು ಗುಂಪು ಚದುರಿಸಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುವಂತೆ ಸೂಚಿಸಿದರು.
ಚಾಮರಾಜನಗರ ಡಿಪೋ ವ್ಯವಸ್ಥಾಪಕ ಕುಮಾರ್‌ನಾಯಕ ಮಾತನಾಡಿ, ಗ್ರಾಮದಲ್ಲಿ ಬಸ್ ನಿಲ್ಲಿಸುವಂತೆ ನಾನು ಸಂಬಂಧಪಟ್ಟ ವಾಹನ ಚಾಲಕರಿಗೆ ಮಾಹಿತಿ ನೀಡುತ್ತೇನೆ. ಇನ್ನು ಮುಂದೆ ಇಲ್ಲಿ ಬಸ್ ನಿಲ್ಲಿಸಲಾಗುವುದು. ಪ್ರತಿಭಟನೆ ಹಿಂಪಡೆಯಬೇಕು ಎಂದು ಮನವಿ ಮಾಡಿದರು ನಂತರ ಪ್ರತಿಭಟನೆ ವಾಪಸ್ ಪಡೆಯಲಾಯಿತು.
ತಹಸೀಲ್ದಾರ್ ಜಯಪ್ರಕಾಶ್, ಸಿಪಿಐ ಶ್ರೀಕಾಂತ್ ಪಿಎಸ್‌ಐ ಹನುಮಂತ ಉಪ್ಪಾರ್, ಮುಖಂಡರಾದ ಯರಿಯೂರು ಶ್ರೀನಿವಾಸ, ಚಿಕ್ಕಮಾದಯ್ಯ, ಜೆ.ಯೋಗೇಶ್, ಪುಟ್ಟಯ್ಯ, ಜಯಣ್ಣ, ರಂಗಸ್ವಾಮಿ, ಕುಮಾರ್, ಜವರೇಗೌಡ, ಲೊಕೇಶ್ ಮೌರ್ಯ, ಚಿನ್ನಸ್ವಾಮಿ, ಪಾಪು, ಶಶಿ, ಶ್ರೀದೇವಿ, ನಾಗಮ್ಮ ಇದ್ದರು.