

ಮದ್ದೂರು: ತಾಲೂಕಿನ ಕೆಸ್ತೂರು ಸಮೀಪದ ಮಾಚಹಳ್ಳಿ ಬಳಿ ಶುಕ್ರವಾರ ಮಧ್ಯಾಹ್ನ ಸರ್ಕಾರಿ ಬಸ್ ಹಾಗೂ ಕಾರಿನ ನಡುವೆ ಮುಖಾಮುಖಿ ಅಪಘಾತ ಸಂಭವಿಸಿ ಕಾರಿನ ಚಾಲಕ ಸ್ಥಳದಲ್ಲೇ ಮೃತಪಟ್ಟು, ಕಾರಿನಲ್ಲಿದ್ದ ಒಬ್ಬ ಮಹಿಳೆ ಹಾಗೂ ಬಸ್ಸಿನಲ್ಲಿದ್ದ 20 ಪ್ರಯಾಣಿಕರು ಗಾಯಗೊಂಡಿದ್ದಾರೆ.
ಘಟನೆಯಲ್ಲಿ ಕಾರಿನ ಚಾಲಕ ಬೆಂಗಳೂರಿನ ಜಯನಗರ ನಿವಾಸಿ ಶಿವಕುಮಾರ್ (45) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯ ತಲೆಗೆ ಪೆಟ್ಟುಬಿದ್ದು ಗಂಭೀರ ಗಾಯಗೊಂಡಿರುವ ಹಿನ್ನೆಲೆಯಲ್ಲಿ ಬೆಂಗಳೂರಿನ ಬಿಜಿಎಸ್ ಅಪೋಲೋ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಸರ್ಕಾರಿ ಸಾರಿಗೆಯಲ್ಲಿ ಸಂಚಾರ ಮಾಡುತ್ತಿದ್ದ ಬಿ.ಎಸ್.ರೇಷ್ಮಾ, ಲೋಕೇಶ್, ಸೌಭಾಗ್ಯ, ಜಯಲಕ್ಷಮ್ಮ, ಭಾಗ್ಯಾ, ರಜನಿ, ಜಯಮ್ಮ, ಮಮತಾ, ಯಶೋದಮ್ಮ, ಲಕ್ಷ್ಮೀ, ಚೆನ್ನಮ್ಮ, ಭಾಗ್ಯಾ, ರತ್ನಮ್ಮ, ಶೋಭಾ, ತಾಯಮ್ಮ, ಸಹನಾ, ಶಿವಕುಮಾರ್, ಜಯಮ್ಮ, ರಾಮಲಿಂಗ, ಚಿಕ್ಕಮ್ಮ ಎಂಬುವರಿಗೆ ಗಾಯಗಳಾಗಿ ನಗರದ ಗುರುಶಾಂತಪ್ಪ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.
ಘಟನೆ ವಿವರ: ಚನ್ನಪಟ್ಟಣ ತಾಲೂಕಿನ ಪ್ರಸಿದ್ಧ ಯಾತ್ರಾ ಸ್ಥಳ ಶ್ರೀ ಚಾಮುಂಡೇಶ್ವರಿ ದೇವಾಲಯದಿಂದ ನೂರಕ್ಕೂ ಹೆಚ್ಚು ಭಕ್ತರು ಮದ್ದೂರು ನಗರಕ್ಕೆ ಕರೆತರುತ್ತಿದ್ದ ಸರ್ಕಾರಿ ಬಸ್ ಮಾಚಹಳ್ಳಿ ಸಮೀಪಕ್ಕೆ ಬರುತ್ತಿದ್ದಂತೆ ಮದ್ದೂರಿನಿಂದ ತುಮಕೂರು ಕಡೆಗೆ ಹೋಗುತ್ತಿದ್ದ ಕಾರಿಗೆ ಚಾಲಕನ ನಿಯಂತ್ರಣ ತಪ್ಪಿ ಡಿಕ್ಕಿ ಹೊಡೆದ ಪರಿಣಾಮ ಈ ಘಟನೆ ನಡೆದಿದೆ.
ಸ್ಥಳಕ್ಕೆ ಆಗಮಿಸಿದ ಕೆಸ್ತೂರು ಪಿಎಸ್‌ಐ ಶರಣ್ ರೆಡ್ಡಿ ಹಾಗೂ ಸಿಬ್ಬಂದಿ ಗಾಯಗೊಂಡವರನ್ನು ಖಾಸಗಿ ವಾಹನಗಳ ಮೂಲಕ ಆಸ್ಪತ್ರೆಗೆ ರವಾನಿಸಿದರು. ಕೆಸ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆದ್ದಾರಿ ಸಂಚಾರ ಪ್ರತಿಭಟನೆ: ಅಪಘಾತ ಸಂಭವಿಸಿ ಒಂದು ಗಂಟೆಯಾದರೂ ಆಂಬುಲೆನ್ಸ್ ಸ್ಥಳಕ್ಕೆ ಬಾರದ ಕಾರಣ ನಿಗದಿತ ಸಮಯಕ್ಕೆ ಗಾಯಾಳುಗಳನ್ನು ಆಸ್ಪತ್ರೆ ಸಾಗಿಸಲು ಪರದಾಡಬೇಕಾಯಿತು ಎಂದು ಆರೋಪಿಸಿ ರೈತ ಮುಖಂಡ ವಿನೋದ್‌ಬಾಬು ನೇತೃತ್ವದಲ್ಲಿ ಸ್ಥಳೀಯರು ಮದ್ದೂರು ತುಮಕೂರು ರಾಷ್ಟ್ರೀಯ ಹೆದ್ದಾರಿ ಸಂಚಾರ ತಡೆದು ಪ್ರತಿಭಟನೆ ಮಾಡಿದರು.
ಅಪಘಾತದಲ್ಲಿ ಸಾಕಷ್ಟು ಜನ ಗಾಯಗೊಂಡಿದ್ದರು. ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸುವುದಕ್ಕಾಗಿ ಆಂಬುಲೆನ್ಸ್‌ಗೆ ಕರೆ ಮಾಡಿದರೂ ಸರಿಯಾದ ಸಮಯಕ್ಕೆ ಆಂಬುಲೆನ್ಸ್‌ಗಳು ಬರಲಿಲ್ಲ. ಇಂತಹ ಸಮಯದಲ್ಲಿ ದಾರಿಹೋಕರ ಬೈಕುಗಳನ್ನು ಅಡ್ಡಗಟ್ಟಿ ಗಾಯಾಳುಗಳನ್ನು ಆಸ್ಪತ್ರೆಗೆ ಕಳುಹಿಸಿದೆವು. 1 ಗಂಟೆಯ ನಂತರ ಆಂಬುಲೆನ್ಸ್ ಆಗಮಿಸಿತು ಎಂದು ವಿನೋದ್‌ಬಾಬು ಕಿಡಿಕಾರಿದರು.
ಆಂಬುಲೆನ್ಸ್ ಇಲ್ಲದೆ ಗಂಟೆಗಟ್ಟಲೇ ಗಾಯಾಳುಗಳ ನರಳಾಡಿದ್ದರಿಂದ ಆಕ್ರೋಶಗೊಂಡ ಸ್ಥಳೀಯರು ಶವವನ್ನು ಹೆದ್ದಾರಿಯಲ್ಲಿಟ್ಟು ಪ್ರತಿಭಟನೆ ನಡೆಸಿದರು. ಅಲ್ಲದೆ ಕೆಸ್ತೂರು ಆಸ್ಪತ್ರೆಗೆ ಮುತ್ತಿಗೆ ಹಾಕಿ ಆಕ್ರೋಶ ಹೊರಹಾಕಿದರು.
ಕೆಸ್ತೂರು ಆಸ್ಪತ್ರೆಗೆ ಆಂಬುಲೆನ್ಸ್ ವ್ಯವಸ್ಥೆ ಮಾಡಿ, ಕಾಯಂ ವೈದ್ಯರನ್ನು ನೇಮಕ ಮಾಡಿ ಎಂದು ಹಲವಾರು ಬಾರಿ ತಾಲೂಕು ಆರೋಗ್ಯಾಧಿಕಾರಿ ಹಾಗೂ ಜಿಲ್ಲಾ ವೈದ್ಯಾಧಿಕಾರಿಗಳಿಗೆ ಹಲವಾರು ಬಾರಿ ಮನವಿ ಮಾಡಿದರೂ ಕ್ರಮ ಕೈಗೊಂಡಿಲ್ಲ. ಮನವಿ ಕೊಟ್ಟ ನಂತರ ಈ ಭಾಗದಲ್ಲಿ ಇದು ಮೂರನೇ ಅಪಘಾತವಾಗಿ ಸಾವು, ನೋವುಗಳು ಸಂಭವಿಸುತ್ತಿವೆ ಎಂದು ಆರೋಪಿಸಿದರು.
ಶೀಘ್ರವಾಗಿ ಆಂಬುಲೆನ್ಸ್ ಹಾಗೂ ಕಾಯಂ ವೈದ್ಯರನ್ನು ನೇಮಿಸದಿದ್ದರೆ ಉಗ್ರ ಹೋರಾಟ ರೂಪಿಸಲಾಗುವುದು ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಮುಖಂಡರಾದ ವಿನೋದ್‌ಬಾಬು, ಸಂಜಯ್, ವೆಂಕಟೇಗೌಡ, ನವಿನೀತ್, ರಾಜೇಶ್, ನವೀನ್ ಇದ್ದರು.