ಬಸವೇಶ್ವರ ದೇವಸ್ಥಾನ ಜೀರ್ಣೋದ್ದಾರಕ್ಕೆ ನೆರವು

ಬಸವೇಶ್ವರ ದೇವಸ್ಥಾನ ಜೀರ್ಣೋದ್ದಾರಕ್ಕೆ ನೆರವು
Published on

ಸೋಮವಾರಪೇಟೆ: ತಾಲೂಕಿನ ಶಿರಂಗಾಲ ವಿಭಾಗದ ನಲ್ಲೂರಮ್ಮ ಹಾಗೂ ಬಸವೇಶ್ವರ ದೇವಸ್ಥಾನದ ಜೀರ್ಣೋದ್ದಾರಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಯೋಜನೆ ವತಿಯಿಂದ ಮಂಜೂರಾದ 2 ಲಕ್ಷ ರೂ.ಗಳ ಡಿ.ಡಿ.ಯ ಮಂಜೂರಾತಿ ಪತ್ರವನ್ನು ಕೊಡಗು ಜಿಲ್ಲಾ ನಿರ್ದೇಶಕಿ ಲೀಲಾವತಿ ಅವರು ಗ್ರಾಮಸ್ಥರಿಗೆ ಶುಕ್ರವಾರ ನೀಡಿದರು.

ನಂತರ ಅವರು ಮಾತನಾಡಿ, ಶ್ರೀ ಕ್ಷೇತ್ರದಿಂದ ಸಮಾಜಮುಖಿಯಾಗಿ ಕೈಗೊಂಡ ಕಾರ್ಯಕ್ರಮಗಳಾದ ಶಾಲೆಗಳಿಗೆ ಪೀಠೋಪಕರಣ, ಜ್ಞಾನದೀಪ ಶಿಕ್ಷಕರ ನೇಮಕ ಮಾಡುವುದು, ಉನ್ನತ ಶಿಕ್ಷಣ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಸುಜ್ಞಾನನಿಧಿ ನೀಡುವುದರ ಮೂಲಕ ಬಡ ವಿದ್ಯಾರ್ಥಿಗಳಿಗೆ ಆರ್ಥಿಕವಾಗಿ ನೆರವಾಗುತ್ತಿದ್ದಾರೆ ಎಂದರು.

ಸಾರ್ವಜನಿಕ ಹಿಂದು ರುದ್ರಭೂಮಿ ಅಭಿವೃದ್ಧಿ, ಗ್ರಾಮೀಣ ರೈತರಿಗೆ ಅನುಕೂಲವಾಗುವಂತೆ ಹಾಲು ಉತ್ಪಾದಕರ ಸಂಘಗಳಿಗೆ ಅನುದಾನ, ನಿರ್ಗತಿಕರಿಗೆ ಮಾಶಾಸನ, ವಿಶೇಷಚೇತನರಿಗೆ ಪರಿಕರಗಳ ವಿತರಣೆ ಸೇರಿದಂತೆ ಕಾರ್ಯಕ್ರಮಗಳ ಮಾಹಿತಿ ನೀಡಿದರು.

ಈ ಸಂದರ್ಭ ಶಿರಂಗಾಲ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ.ಎಂ.ಚೇತನ್, ಕಾರ್ಯದರ್ಶಿ ರವಿ, ಒಕ್ಕೂಟದ ಅಧ್ಯಕ್ಷೆ ಮಂಜುಳಾ, ತಾಲೂಕು ಯೋಜನಾಧಿಕಾರಿ ಹನುಮಂತಪ್ಪ ಅಂಗಡಿ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net