

| ಪ್ರಕಾಶ ಎಸ್. ಶೇಟ್ ಹುಬ್ಬಳ್ಳಿ
ಎಂಟನೇ ಬಾರಿ ಗೆಲುವು ಸಾಧಿಸಿ ಹೊಸ ದಾಖಲೆ ಬರೆಯುವ ಹುಮ್ಮಸ್ಸು ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ. ಹೊರಟ್ಟಿ ಮುಖೇನ ಕ್ಷೇತ್ರದಲ್ಲಿ ಖಾತೆ ತೆರೆಯುವ ತವಕ ಬಿಜೆಪಿಗೆ. ಚುನಾವಣೆ ಘೊಷಣೆಗೂ ಆರು ತಿಂಗಳ ಮುನ್ನವೇ ಅಭ್ಯರ್ಥಿ ಘೊಷಿಸಿರುವ ಕಾಂಗ್ರೆಸ್ಗೆ ಎಲ್ಲ ದಾಖಲೆ ಅಳಿಸಿ ಹಾಕಬೇಕೆನ್ನುವ ಛಲ. ಶಿಷ್ಯನಿಂದಲೇ ಹೊರಟ್ಟಿಗೆ ತಿರುಗೇಟು ಕೊಡಿಸಬೇಕೆನ್ನುವ ತಂತ್ರ ಜೆಡಿಎಸ್ನದ್ದು. ಇವು ವಿಧಾನ ಪರಿಷತ್ ಪಶ್ಚಿಮ ಶಿಕ್ಷಕರ ಮತ ಕ್ಷೇತ್ರದಲ್ಲಿ ನಡೆದಿರುವ ರಾಜಕೀಯ ಮೇಲಾಟಗಳು.
ಈ ಕ್ಷೇತ್ರ ಹೆಚ್ಚು ಗಮನ ಸೆಳೆದಿರುವುದು ಬಸವರಾಜ ಹೊರಟ್ಟಿ ಮುಖೇನ. 1980ರಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಅವರು ಪ್ರಭಾವಿ ಅಭ್ಯರ್ಥಿಯಾಗಿದ್ದ ಎಸ್.ಐ. ಶೆಟ್ಟರ್ ಅವರನ್ನು ಸೋಲಿಸಿ ಗೆಲುವಿನ ಕುದುರೆಯನ್ನೇರಿದರು. ಆ ಬಳಿಕ ಹಿಂದಿರುಗಿ ನೋಡಿದ್ದೇ ಇಲ್ಲ. ಸತತ ಏಳನೇ ಬಾರಿಗೆ ಗೆಲುವು ಸಾಧಿಸಿ ದಾಖಲೆ ಸೃಷ್ಟಿಸಿದರು. ಹೊರಟ್ಟಿ ಯಾವುದೇ ಕಾರಣಕ್ಕೂ ಪಕ್ಷ ನೆಚ್ಚಿಕೊಂಡು ಗೆದ್ದವರಲ್ಲ. ಅವರು ಪ್ರತಿನಿಧಿಸುವ ಕ್ಷೇತ್ರದಲ್ಲಿ ಜೆಡಿಎಸ್ಗೆ ನೆಲೆಯೇ ಇದ್ದಿರಲಿಲ್ಲ ಎನ್ನುವುದು ಗಮನಾರ್ಹ. ಶಿಕ್ಷಕರೊಂದಿಗೆ ಹೊಂದಿದ್ದ ನಿಕಟ ಸಂಪರ್ಕದಿಂದಾಗಿಯೇ ಅವರು ಗೆಲುವಿನ ದಡ ಸೇರುತ್ತಿದ್ದರು. ಪ್ರಸ್ತುತ ಚುನಾವಣೆಯ ಸಂದರ್ಭದಲ್ಲೇ ಪಕ್ಷಾಂತರ ಮಾಡಿದ್ದಾರೆ. ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಈ ಚುನಾವಣೆಯಲ್ಲಿ ಅವರು ಗೆಲುವು ಸಾಧಿಸಿದರೆ ಎಂಟು ಬಾರಿ ಗೆದ್ದ ಹೊಸ ದಾಖಲೆ ಸೃಷ್ಟಿಯಾಗಲಿದೆ. ಇದರೊಟ್ಟಿಗೆ ಕ್ಷೇತ್ರದಲ್ಲಿ ಬಿಜೆಪಿಯೂ ಖಾತೆ ತೆರೆದಂತಾಗಲಿದೆ. ಕ್ಷೇತ್ರದಲ್ಲಿ ಹೊರಟ್ಟಿ ಭರ್ಜರಿ ಪ್ರಚಾರ ನಡೆಸಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷರು, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಮಾಜಿ ಸಿಎಂ ಜಗದೀಶ ಶೆಟ್ಟರ್ ಕ್ಷೇತ್ರದಲ್ಲಿ ಹೊರಟ್ಟಿ ಪರ ಭರ್ಜರಿ ಪ್ರಚಾರ ಮಾಡಿದ್ದಾರೆ. ಬಿಜೆಪಿ ಹವಾ ಜೋರಾಗಿಯೇ ಬೀಸುತ್ತಿದೆ. ಆದರೆ, ಪಕ್ಷದ ನಾಯಕರ ತೊಡಗಿಸಿಕೊಳ್ಳುವಿಕೆ ಕಾಣಿಸುತ್ತಿದೆಯಾದರೂ ಕಾರ್ಯಕರ್ತರ ಓಡಾಟ ಅಷ್ಟಕ್ಕಷ್ಟೇ.
ಗುರುವಿಗೆ ಶಿಷ್ಯನ ಸವಾಲು: ಬಸವರಾಜ ಹೊರಟ್ಟಿ ಪಕ್ಷ ತ್ಯಜಿಸಿದ್ದರಿಂದ ಜೆಡಿಎಸ್ ಅನಾಥವಾಗಿತ್ತು. ಹಾಗಂತ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಸುಮ್ಮನೇ ಕುಳಿತುಕೊಳ್ಳಲಿಲ್ಲ. ಪಕ್ಷದ ಅಭ್ಯರ್ಥಿ ಗೆಲ್ಲದೇ ಹೋದರೂ ಪರವಾಗಿಲ್ಲ ಆಡಿ ಕೆಡಿಸೋಣ ಎನ್ನುವ ತಂತ್ರ ಹೆಣೆದಿದ್ದಾರೆ. ಒಂದು ಕಾಲದಲ್ಲಿ ಹೊರಟ್ಟಿ ಅವರ ಆಪ್ತ ಬಣದಲ್ಲಿದ್ದ ಹಾಗೂ ಅವರ ಗೆಲುವಿಗೆ ಶ್ರಮಿಸುತ್ತಿದ್ದ ಶ್ರೀಶೈಲ ಗಡದಿನ್ನಿ ಅವರನ್ನು ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿಸಿದ್ದಾರೆ. ಇದರಿಂದಾಗಿ ಹೊರಟ್ಟಿ ಪಾಲಾಗುತ್ತಿದ್ದ ಒಂದಿಷ್ಟು ಮತಗಳು ಗಡದಿನ್ನಿ ಅವರಿಗೆ ಲಭಿಸಲಿದೆ ಎನ್ನುವುದು ಲೆಕ್ಕಾಚಾರ ಇದೆ. ಈ ಮೂಲಕ ಹೊರಟ್ಟಿ ನಾಗಾಲೋಟಕ್ಕೆ ಬ್ರೇಕ್ ಹಾಕುವ ರಾಜಕೀಯ ತಂತ್ರವನ್ನು ಕುಮಾರಸ್ವಾಮಿ ರೂಪಿಸಿದ್ದಾರೆ. ಆದರೆ, ಇದು ಎಷ್ಟರ ಪಟ್ಟಿಗೆ ಫಲಪ್ರದವಾಗುತ್ತದೆ ಎನ್ನುವುದನ್ನು ಕಾದು ನೋಡಬೇಕು.
ಏಳು ಅಭ್ಯರ್ಥಿಗಳು ಕಣದಲ್ಲಿ: ಬಿಜೆಪಿಯ ಬಸವರಾಜ ಹೊರಟ್ಟಿ, ಕಾಂಗ್ರೆಸ್ನ ಬಸವರಾಜ ಗುರಿಕಾರ, ಜೆಡಿಎಸ್ನ ಶ್ರೀಶೈಲ ಗಡದಿನ್ನಿ, ಪಕ್ಷೇತರ ಅಭ್ಯರ್ಥಿಗಳಾದ ಕರಬಸಪ್ಪ ಮಧ್ಯಾನ್ನದ, ಕೃಷ್ಣವಾಣಿ ಶ್ರೀನಿವಾಸಗೌಡ, ಫಕೀರಗೌಡ ಕಲ್ಲನಗೌಡರ, ಆಮ್ ಆದ್ಮಿ ಪಾರ್ಟಿ ಬೆಂಬಲಿತ ವೆಂಕನಗೌಡ ಗೋವಿಂದಗೌಡರ ಕಣದಲ್ಲಿದ್ದಾರೆ.