

ಬೇಲೂರು: ಸಮಾಜದಲ್ಲಿ ಅಡಗಿದ್ದ ಮೌಢ್ಯ, ಅಂಕು ಡೊಂಕುಗಳನ್ನು ಹೋಗಲಾಡಿಸುವ ನಿಟ್ಟಿನಲ್ಲಿ 12ನೇ ಶತಮಾನದಲ್ಲಿ ಅನುಭವ ಮಂಟಪ ನಿರ್ಮಿಸಿ ಸಮ ಸಮಾಜಕ್ಕೆ ಬುನಾದಿ ಹಾಕಿ ಎಲ್ಲರಿಗೂ ಸಮಾನ ಅವಕಾಶವನ್ನು ಕಲ್ಪಿಸಿದವರು ಬಸವಣ್ಣನವರು ಎಂದು ಶ್ರೀ ವಿದ್ಯಾ ವಿಕಾಸ್ ಪದವಿ ಪೂರ್ವ ಕಾಲೇಜು ಅಧ್ಯಕ್ಷ ಬಿ.ಎಂ.ರಂಗನಾಥ್ ಹೇಳಿದರು.
ಶ್ರೀ ಬಸವೇಶ್ವರ ಜಯಂತಿ ಅಂಗವಾಗಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ತಾಲೂಕು ಘಟಕ, ಕದಳಿ ಮಹಿಳಾ ವೇದಿಕೆ, ಶ್ರೀ ವಿದ್ಯಾ ವಿಕಾಸ್ ಪದವಿ ಪೂರ್ವ ಕಾಲೇಜು ಸಹಯೋಗದೊಂದಿಗೆ ಪಟ್ಟಣದ ಶ್ರೀ ವಿದ್ಯಾ ವಿಕಾಸ್ ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಿದ್ದ ಬಸವ ಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ದೀಪದಿಂದ ದೀಪ ಹಚ್ಚ ಬಹುದೇ ಹೊರತು, ವಿದ್ಯುತ್ ಬಲ್ಬ್‌ನಿಂದ ಮತ್ತೊಂದು ಬಲ್ಬ್ ಹಚ್ಚಲು ಸಾಧ್ಯವಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಬಸವಣ್ಣನವರಂತೆ ದೀಪವಾಗಿ ಇನ್ನೊಬ್ಬರ ಬದುಕಲ್ಲಿ ಬೆಳಕಾಗಬೇಕು ಎಂದರು.
ಬಸವಣ್ಣನವರ ತತ್ವ, ಆದರ್ಶಗಳು ಇಂದಿನ ಯುವ ಪೀಳಿಗೆಗೆ ಅವಶ್ಯಕವಾಗಿದೆ. ಅವರು ಅನುಭವ ಮಂಟಪದ ಮೂಲಕ ಸರ್ವ ಜನಾಂಗಕ್ಕೂ ಸಮಾನ ಅವಕಾಶ ಕಲ್ಪಿಸಿದವರು. ಅವರಂತೆಯೇ ಸ್ಥಳೀಯವಾಗಿ ಶಿಕ್ಷಣ ಪಡೆದು ನಂತರ ವಿದೇಶಗಳಲ್ಲಿ ವಿದ್ಯಾಭ್ಯಾಸ ಮಾಡಿ ತಾನು ವಿದ್ಯಾಭ್ಯಾಸ ಮಾಡಿದ ಊರಿನಲ್ಲೆ ಬಡ ವಿದ್ಯಾರ್ಥಿಗಳ ಭವಿಷ್ಯ ರೂಪಿಸುತ್ತಿರುವ ಕಾಲೇಜಿನ ಕಾರ್ಯದರ್ಶಿ ಡಾ.ಎಂ.ಎಂ.ರಮೇಶ್ ಅವರಿಗೆ ಪ್ರಶಸ್ತಿ ನೀಡುತ್ತಿರುವುದು ಹೆಮ್ಮೆಯ ಸಂಗತಿ ಎಂದರು.
ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಪ್ರಧಾನ ಕಾರ್ಯದರ್ಶಿ ಕಟ್ಟಾಯ ಶಿವಕುಮಾರ್ ಮಾತನಾಡಿ, ಸುತ್ತೂರು ಶ್ರೀಗಳು ತಮ್ಮ ಜನ್ಮದಿನದ ನೆನಪಿಗೆ ಶರಣ ಸಾಹಿತ್ಯ ಪರಿಷತ್ತು ಸ್ಥಾಪಿಸಿದ್ದಾರೆ. ಅಂದಿನಿಂದ ದೇಶ ವಿದೇಶದಲ್ಲೂ ಸಂಸ್ಥೆ ಕೆಲಸ ಮಾಡುತ್ತಿದೆ. ಬೇಲೂರಿನಲ್ಲಿ ಅತ್ಯಂತ ಸಕ್ರಿಯವಾಗಿದೆ. ಆದರೆ ಯುವ ಮತ್ತು ಮಹಿಳಾ ಘಟಕ ಕೆಲಸ ಮಡಬೇಕು ಎಂದು ಸಲಹೆ ನೀಡಿದರು.
ಶರಣ ಸಾಹಿತ್ಯ ಪರಿಷತ್ತು ತಾಲೂಕು ಅಧ್ಯಕ್ಷ ಹಾಲಪ್ಪ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಎಲ್ಲಿ ನೋಡಿದರೂ ಭಯೋತ್ಪಾದನೆ, ಕೋಮುಗಲಭೆಗಳು ನಡೆಯುತ್ತಿರುವುದು ಬೇಸರದ ಸಂಗತಿ. ಇದನ್ನು ಹೋಗಲಾಡಿಸಲು ಬುದ್ಧ, ಬಸವ, ಅಂಬೇಡ್ಕರ್ ಚಿಂತನೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ವಿದ್ಯಾ ವಿಕಾಸ್ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಡಾ.ಎಂ.ಎಂ.ರಮೇಶ್ ಅವರಿಗೆ ಬಸವ ಶ್ರೀ ಪ್ರಶಸ್ತಿ ಹಾಗೂ ಪಿಯು ಪರೀಕ್ಷೆಯಲ್ಲಿ ವಾಣಿಜ್ಯ ಮತ್ತು ವಿಜ್ಞಾನ ವಿಷಯದಲ್ಲಿ ಪ್ರಥಮ ಸ್ಥಾನ ಪಡೆದ ಕಾಲೇಜಿನ ವಿದ್ಯಾರ್ಥಿಗಳಾದ ಪ್ರಾರ್ಥನಾ, ಫಾತಿಮಾ ಸಪೀರಾಗೆ ಬಸವ ಪುರಸ್ಕಾರ ನೀಡಲಾಯಿತು.
ಸಾಹಿತಿ ಟಿ.ಡಿ.ತಮ್ಮಣ್ಣಗೌಡ, ಪತ್ರಕರ್ತರ ಸಂಘದ ಕಾರ್ಯದರ್ಶಿ ಶಿವರಾಜ್, ವೀರಶೈವ ಲಿಂಗಾಯತ ಸಮಾಜದ ರಾಜ್ಯ ಕಾರ್ಯದರ್ಶಿ ವಿಕ್ರಮೌ ಕೌರಿ, ಪ್ರಧಾನ ಕಾರ್ಯದರ್ಶಿ ಮದನ್, ಶಶಿರೇಖಾ, ಆರ್.ಎಸ್.ಮಹೇಶ್ ಇತರರಿದ್ದರು.