ಬಸವಣ್ಣನ ತತ್ವ ಸಿದ್ದಾಂತ ಗುಣಗಾನ ಮಾಡಿದ ರಾಗಾ

IMG-20230423-WA0068
Published on

ಬಾಗಲಕೋಟೆ: ಪ್ರಸಕ್ತ ವಿಧಾನಸಭೆ ಚುನಾವಣೆಯಲ್ಲಿ ಅಧಿಕಾರ ಗದ್ದುಗೆ ಹಿಡಿಯಲು ತಮ್ಮಿಂದ ದೂರವಾಗಿರುವ ವೀರಶೈವ ಲಿಂಗಾಯತ ಮತಗಳ ಮೇಲೆ ಕಣ್ಣಿಟ್ಟಿರುವ ಕಾಂಗ್ರೆಸ್ ಪಕ್ಷ ಸಮುದಾಯವನ್ನು ತಮ್ಮತ್ತ ಸೆಳೆಯಲು ನಾನಾ ರೀತಿಯ ತಂತ್ರಗಳನ್ನು ಹೂಡುತ್ತಿದೆ.

ಲಿಂಗಾಯತರ ಶ್ರದ್ಧಾಕೇಂದ್ರವಾಗಿರುವ ಕೂಡಲಸಂಗಮದಲ್ಲಿ ಬಸವ ಧರ್ಮ ಪೀಠದ ವತಿಯಿಂದ ಸಭಾ ಭವನದಲ್ಲಿ ಏರ್ಪಡಿಸಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ರಾಷ್ಟ್ರೀಯ ಮುಖಂಡ ರಾಹುಲ್ ಗಾಂಧಿ ಭಾಗವಹಿಸುವ ಮೂಲಕ ಗಮನ ಸೆಳೆದರು.

ರಾಹುಲ್ ಗಾಂಧಿ ಜೊತೆ ಮಾಜಿ ಸಿಎಂ ಸಿದ್ದರಾಮಯ್ಯ, ಕೈ ಮುಖಂಡ ಕೆ.ಸಿ.ವೇಣುಗೋಪಾಲ, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ, ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಸೇರಿ ಹಲವು ಕಾಂಗ್ರೆಸ್ ಪಕ್ಷದ ಲಿಂಗಾಯತ ಮುಖಂಡರು ಕಾರ್ಯಕ್ರಮದಲ್ಲಿ ಉಪಸ್ಥಿತಿ ಇರುವ ಮೂಲಕ ಪ್ರಸಕ್ತ ಚುನಾವಣೆಯಲ್ಲಿ ಲಿಂಗಾಯತ ಮತಗಳಿಗೆ ಗಾಳ ಬೀಸಿದ್ದಾರೆ.

ಬಿಜೆಪಿಯಲ್ಲಿ ಲಿಂಗಾಯತರನ್ನು ಕಡೆಗಣನೆ ಮಾಡುತ್ತಿದ್ದಾರೆ ಎನ್ನುವ ಆರೋಪಗಳು ಕೇಳು ಬರುತ್ತಿರುವಾಗಲೇ ಆ ಮತದಾರರನ್ನು ತಮ್ಮತ್ತ ಸೆಳೆಯಲು ಹಲವು ಅಸöಗಳನ್ನು ಪ್ರಯೋಗ ಮಾಡುತ್ತಿದ್ದಾರೆ. ಹೀಗಾಗಿ ಭಾನುವಾರ ಕೂಡಲಸಂಗಮದಲ್ಲಿ ನಡೆದ ಬಸವ ಜಯಂತಿ ಕಾರ್ಯಕ್ರಮ ಕಾಂಗ್ರೆಸ್ ಪಕ್ಷದ ಕಾರ್ಯಕ್ರಮ ಅಲ್ಲ ಎಂದು ಮುಖಂಡರು ಒತ್ತಿ ಒತ್ತಿ ಹೇಳುತ್ತಿದ್ದರೂ ಪಕ್ಷದ ಇಲ್ಲದೇ ಇರಲಿಲ್ಲ.

ಇನ್ನು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ರಾಹುಲ್ ಗಾಂಧಿ
ಅವರು, ವಿಶ್ವಗುರು ಬಸವಣ್ಣನ ತತ್ವ ಸಿದ್ದಾಂತ ಗುಣಗಾನ ಮಾಡಿದರು. ಭಾರತ ಹಾಗೂ ಪ್ರಪಂಚಕ್ಕೆ ಲೋಕತಂತ್ರದ ದಾರಿಯನ್ನು ಪರಿಚಯಿಸಿದ ಕೀರ್ತಿ ಬಸವಣ್ಣನವರಿಗೆ ಸಲ್ಲುತ್ತದೆ. ಸಮಾಜದಲ್ಲಿನ ಜಾತಿ, ಶೋಷಣೆ, ಸಮಾಜ, ಪ್ರಜಾಪ್ರಭುತ್ವದ ಬಗ್ಗೆ ತಮ್ಮನ್ನು ತಾವೇ ಪ್ರಶ್ನೆ ಮಾಡಿಕೊಂಡು ಯಾರಿಗೂ ಹೆದರದೇ ಸತ್ಯವನ್ನು ಸಮಾಜಕ್ಕೆ ತಿಳಿಸಿ, ನುಡಿದಂತೆ ಅದನ್ನು ಪಾಲನೆ ಮಾಡುತ್ತಿದ್ದರು ಎಂದರು.

ಬಸವಣ್ಣನವರ ಜಯಂತಿಯ ದಿನದಂದು ನಾನು ಇಲ್ಲಿಗೆ ಬಂದಿದ್ದು ಬಹಳ ಖಷಿ ತಂದಿದೆ. ಸ್ವಾಮೀಜಿಗಳು ತಮ್ಮ ಭಾಷಣವನ್ನು ಹಿಂದಿಯಲ್ಲಿ ಮಾತನಾಡಿ ನನಗೆ ಮಾಹಿತಿ ನೀಡಿ, ಎಲ್ಲವನ್ನು ಅರ್ಥ ಮಾಡಿಸಿಕೊಟ್ಟರು. ಪ್ರಜಾಪ್ರಭುತ್ವವನ್ನು ಬಸವಣ್ಣ ಸದೃಢಗೊಳಿಸಿದ್ದಾರೆ. ಸಂಸದೀಯ ವ್ಯವಸ್ಥೆ ಬರಲು ಅನುಭವ ಮಂಟಪ ಕಾರಣ. ಈ ಸತ್ಯವನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ಎಲ್ಲಿ ನಿಮಗೆ ಕತ್ತಲು ಕಾಣುತ್ತದೆಯೋ ಅಲ್ಲಿ ಒಂದು ಕಡೆಗೆ ಬೆಳಕು ಸಿಗುತ್ತದೆ. ಅದೇ ರೀತಿ ಸಮಾಜದಲ್ಲಿನ ಕತ್ತಲಿಗೆ ಬಸವಣ್ಣ ಬೆಳಕು ತಂದುಕೊಟ್ಟರು ಎಂದು ಬಣ್ಣಿಸಿದರು.

ಇದಕ್ಕೂ ಮೊದಲು ಗದುಗಿನ ತೋಂಟದಾರ್ಯ ಮಠದ ಸಿದ್ದರಾಮ ಸ್ವಾಮೀಜಿ ಬಸವಾದಿ ಶರಣರು, ಕಾಯಕ, ದಾಸೋಹ, ಬಸವಣ್ಣ ಹುಟ್ಟು, ಬಾಲ್ಯದ ಜೀವನ, ಸಾಮಾಜಿಕ ಹೋರಾಟದ ಕುರಿತು ಕನ್ನಡದ ಜೊತೆಗೆ ರಾಹುಲ್ ಗಾಂಽ ಅವರಿಗೆ ತಿಳಿಸಲು ಹಿಂದಿ ಭಾಷೆಯಲ್ಲೂ ಮಾತನಾಡಿದರು.
ವೇದಿಕೆಯಲ್ಲಿ ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ, ಕೂಡಲಸಂಗಮ ಬಸವ ಧರ್ಮ ಪೀಠದ ಮಾದೇಶ್ವರ ಸ್ವಾಮೀಜಿ, ವಿಜಯಪುರ ಜ್ಞಾನಯೋಗಾಶ್ರಮದ ಬಸವಲಿಂಗ ಸ್ವಾಮೀಜಿ, ವಿಜಯಪುರ ವನಶ್ರೀಮಠದ ಜಯಬಸವಕುಮಾರ ಸ್ವಾಮೀಜಿ, ಅಥಣಿ ಗಚ್ಚಿನಮಠದ ಶಿವಬಸವ ಸ್ವಾಮೀಜಿ, ಯರನಾಳ ವಿರಕ್ತಮಠದ ಸಂಗನಬಸವ ಸ್ವಾಮೀಜಿ, ಮಮದಾಪುರ ವಿರಕ್ತಮಠದ ಅಭಿನವ ಮುರುಘೇಂದ್ರ ಸ್ವಾಮೀಜಿ, ಕಲಬುರಗಿ ಸಾಲಮಠದ ಮಹಾಂತ ಶಿವಾಚಾರ್ಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net