ಬಳ್ಳಿಯಲ್ಲೇ ಒಣಗುತ್ತಿವೆ ವೀಳ್ಯದೆಲೆ

02 svr 01 a
Published on

ಸವಣೂರ: ದೇಶಾದ್ಯಂತ ಲಾಕ್​ಡೌನ್ ಘೊಷಣೆ ಹಿನ್ನೆಲೆಯಲ್ಲಿ ಸವಣೂರಿನ ಪ್ರಖ್ಯಾತ ವೀಳ್ಯದೆಲೆ ಮಾರಾಟ ಸಂಪೂರ್ಣ ನಿಂತು ಹೋಗಿದ್ದು, ಬೆಳೆಗಾರರು ತೀವ್ರ ಸಂಕಷ್ಟ ಎದುರಿಸುವಂತಾಗಿದೆ.

ಪಟ್ಟಣದ ಎಪಿಎಂಸಿ ಆವರಣದಲ್ಲಿ ವಾರದ ಮೂರು ದಿನ (ಸೋಮವಾರ, ಬುಧವಾರ ಹಾಗೂ ಶುಕ್ರವಾರ) ಜರುಗುತ್ತಿದ್ದ ಎಲೆಪೇಟೆಯನ್ನು ಕರೊನಾ ಭೀತಿಯಿಂದ ಬಂದ್ ಮಾಡಲಾಗಿದೆ. ಆದ್ದರಿಂದ, ರೈತರು ತೋಟಗಳಲ್ಲಿ ಬೆಳೆದ ಎಲೆ ಕಟಾವು ನಿಲ್ಲಿಸಿದ್ದಾರೆ.

ಸವಣೂರಿನಿಂದ ಗೋವಾ, ಕೊಲ್ಕತಾ, ದಾಂಡೇಲಿ, ಧಾರವಾಡ, ಗದಗ, ಹುಬ್ಬಳ್ಳಿ ಸೇರಿ ವಿವಿಧ ಸ್ಥಳಗಳಿಗೆ ಎಲೆ ಸರಬರಾಜು ಸಂಪೂರ್ಣ ಸ್ಥಗಿತಗೊಂಡಿದೆ. ರೈತರು ಪ್ರತಿ ಎಕರೆ ತೋಟದಲ್ಲಿ 10 ಸಾವಿರ ಎಲೆಬಳ್ಳಿ ಹಚ್ಚಿ ವಾರಕ್ಕೆ ಅಂದಾಜು ಒಂದು ಅಂಡಿಗೆ (12 ಸಾವಿರ ವೀಳ್ಯೆದೆಲೆ) ಎಲೆ ಮಾರಾಟ ಮಾಡುತ್ತಿದ್ದರು. ಕರೊನಾ ವೈರಸ್ ಹರಡುವ ಮೊದಲು ಪ್ರತಿ ಅಂಡಿಗೆ 16 ಸಾವಿರ ರೂ.ಗೆ ಮಾರಾಟವಾಗಿತ್ತು. ಈಗ 3 ಸಾವಿರ ರೂಪಾಯಿಗೂ ಕೇಳುವವರಿಲ್ಲ. ಕಾರಣ ತೋಟಗಳಲ್ಲಿನ ಎಲೆ ಕಟಾವುಗೊಳಿಸುವುದನ್ನು ರೈತರು ನಿಲ್ಲಿಸಿದ್ದಾರೆ.

ಬಳ್ಳಿಯಲ್ಲಿನ ಎಲೆ ಕೊಯ್ಯದ ಕಾರಣ ಎಲೆ ಒಣಗಿ ಹಾಳಾಗುವ ಹಂತಕ್ಕೆ ತಲುಪಿದೆ. ವೀಳ್ಯದೆಲೆ ಮಾರಾಟ ಹಾಗೂ ಸಾಗಾಟಕ್ಕೆ ಸರ್ಕಾರ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು ಎಂದು ರೈತರು ಒತ್ತಾಯಿಸಿದ್ದಾರೆ.

ವೀಳ್ಯದೆಲೆ ಬೆಳೆಗಾರರು ನಿರಂತರ ಸಂಕಷ್ಟ ಎದುರಿಸುವಂತಾಗಿದೆ. ನೆರೆ ಹಾವಳಿ ಹಾಗೂ ಕರೊನಾ ಲಾಕ್​ಡೌನ್​ನಿಂದಾಗಿ ಲಕ್ಷಾಂತರ ರೂ.ಗಳ ಎಲೆಬಳ್ಳಿ ಸಂಪೂರ್ಣ ಒಣಗಿ ಉದುರುವಂತಾಗಿದೆ. ಸರ್ಕಾರ ಪರಿಹಾರ ಘೊಷಣೆ ಮಾಡಿ, ಎಲೆ ಮಾರಾಟಕ್ಕೆ ವಿಶೇಷ ಅವಕಾಶ ಕಲ್ಪಿಸಬೇಕು. | ರೆಹಮಾನಬೇಗ್ ವಕೀಲ, ಸವಣೂರ ವೀಳ್ಯದೆಲೆ ತೋಟದ ಮಾಲೀಕ ಲಾಕ್​ಡೌನ್ ಹಿನ್ನೆಲೆಯಲ್ಲಿ ಎಪಿಎಂಸಿ ವ್ಯವಹಾರ ಸಂಪೂರ್ಣ ಸ್ಥಗಿತಗೊಳಿಸಲಾಗಿತ್ತು. ಸರ್ಕಾರದ ಮರುಆದೇಶದ ಮೇರೆಗೆ ರೈತರ ವೀಳ್ಯದೆಲೆ ಹಾಗೂ ಇತರ ಕೃಷಿ ಉತ್ಪನ್ನಗಳ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ಆದರೆ, ಮಾರಾಟಗಾರರು ಹಾಗೂ ಖರೀದಿಗಾರರು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಇತರ ರಾಜ್ಯ, ಜಿಲ್ಲೆಗಳಿಗೆ ಬೆಳೆ ರಪ್ತು ಮಾಡುವ ಕುರಿತು ಸಂಬಂಧಪಟ್ಟ ಇಲಾಖೆಗಳ ಮೇಲಧಿಕಾರಿಗಳ ಪರವಾನಗಿ ಪಡೆಯಲು ವ್ಯಾಪಾರಸ್ಥರಿಗೆ ಸೂಚಿಸಲಾಗಿದೆ. | ವೀರೇಂದ್ರಗೌಡ ಪಾಟೀಲ, ಎಪಿಎಂಸಿ ಕಾರ್ಯದರ್ಶಿ ಸವಣೂರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net