

ವಿಜಯವಾಣಿ ಸುದ್ದಿಜಾಲ ಕಾರವಾರ
ಜಿಲ್ಲೆಯ ಕರಾವಳಿಯ ವಿವಿಧ ತಾಲೂಕುಗಳಲ್ಲಿ ಅನಧಿಕೃತ ಕೆಂಪುಗಲ್ಲು (ಲ್ಯಾಟರೈಟ್ ಸ್ಟೋನ್)ಗಣಿಗಾರಿಕೆ ಅವ್ಯಾಹತವಾಗಿ ಸಾಗಿದೆ. ಆಡಳಿತ ಅದನ್ನು ಕಂಡೂ ಕಾಣದಂತೆ ನಟಿಸಿ ಅಕ್ರಮಕ್ಕೆ ಆಶ್ರಯ ನೀಡುತ್ತಿದೆ.
ಕರ್ನಾಟಕ ಉಪ ಖನಿಜ ನಿಯಮಾವಳಿಗಳ ಪ್ರಕಾರ ಶೇ. 20 ಕ್ಕಿಂತ ಹೆಚ್ಚು ಅಲ್ಯುಮೀನಿಯಂ ಅಂಶವಿರುವ ಲ್ಯಾಟರೈಟ್ ಕಲ್ಲನ್ನು ಗಣಿಗಾರಿಕೆಗೆ ಮಾಡಿ ಮಾರಾಟ ಮಾಡಲು ಅವಕಾಶವಿಲ್ಲ. ಉತ್ತರ ಕನ್ನಡ ಜಿಲ್ಲೆಯ ಬಹುತೇಕ ಎಲ್ಲ ಕಡೆ ಸಿಗುವ ಲ್ಯಾಟರೈಟ್ ಕಲ್ಲಿನಲ್ಲಿ ಶೇ. 30 ಕ್ಕಿಂತ ಹೆಚ್ಚು ಅಲ್ಯುಮೀನಿಯಂ ಅಂಶಗಳು ಪತ್ತೆಯಾಗಿವೆ. ಇದರಿಂದ ಯಾವುದೇ ಲ್ಯಾಟರೈಟ್ ಗಣಿಗಳಿಗೆ ಅಧಿಕೃತವಾಗಿ ಅನುಮತಿ ನೀಡಲು ಸಾಧ್ಯವಿಲ್ಲ ಎನ್ನುತ್ತಾರೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು. ಆದರೆ, ಹೆಚ್ಚು ಮಳೆ ಬೀಳುವ ಜಿಲ್ಲೆಯಲ್ಲಿ ಕಟ್ಟಡ ನಿರ್ಮಾಣಕ್ಕೆ ಘಟ್ಟಿಯಾದ ಕೆಂಪುಗಲ್ಲು ಹೆಚ್ಚು ಬಳಕೆಯಾಗಲಿದ್ದು, ಜನರ ಅನುಕೂಲದ ದೃಷ್ಟಿಯಿಂದ ಅಲ್ಯುಮೀನಿಯಂ ಮಿತಿಯನ್ನು ಹೆಚ್ಚಿಸಬೇಕು ಎಂದು ಗಣಿ ಇಲಾಖೆ ಅಧಿಕಾರಿಗಳು ಇಲಾಖೆಯ ಹಿರಿಯರಿಗೆ ಪ್ರಸ್ತಾವನೆ ಸಲ್ಲಿಸಿದ್ದಾರೆ.
ತಾಂತ್ರಿಕ ಗೊಂದಲದಿಂದ ಜಿಲ್ಲೆಯಲ್ಲಿ ಸದ್ಯಕ್ಕೆ ಯಾವುದೇ ಕೆಂಪುಗಲ್ಲು ಗಣಿಗಳು ಸರ್ಕಾರದ ಅಧಿಕೃತ ಅನುಮತಿ ಪಡೆದಿಲ್ಲ. ಹಾಗೆಂದು ಗಣಿಗಾರಿಕೆ ನಿಂತಿಲ್ಲ. ನಿಯಮ ಮೀರಿಯೂ ಜಿಲ್ಲೆಯ ವಿವಿಧೆಡೆ ಕೆಂಪುಗಲ್ಲು ಗಣಿಗಾರಿಕೆ ರಾಜಾರೋಶವಾಗಿ ನಡೆಯುತ್ತಿದೆ. ಇದರಿಂದ ಸರ್ಕಾರಕ್ಕೆ ಕೋಟ್ಯಂತರ ರೂ. ರಾಜಧನ ನಷ್ಟವಾಗುತ್ತಿದೆ. ಈ ಹಣ ಅನಧಿಕೃತವಾಗಿ ಅಧಿಕಾರಿಗಳು, ರಾಜಕಾರಣಿಗಳ ಜೇಬು ತುಂಬುತ್ತಿರುವ ಆರೋಪವಿದೆ. ಇನ್ನೊಂದೆಡೆ ಸಾಮಾನ್ಯ ಜನರಿಗೂ ಕಟ್ಟಡ ನಿರ್ಮಾಣಕ್ಕೆ ಸುಲಭದಲ್ಲಿ ಕಲ್ಲು ಸಿಗುತ್ತಿಲ್ಲ.
ಬಳ್ಳಾರಿ ಗಣಿ ನೆನಪು:
ಅಂಕೋಲಾ ತಾಲೂಕಿನ ಹಿಚ್ಕಡ, ಕಣಗಿಲ್ ಭಾಗದಲ್ಲಿ ಕೆಂಪು ಕಲ್ಲು ಕ್ವಾರಿಗಳು ನೂರಾರು ಎಕರೆ ಗುಡ್ಡಗಳಲ್ಲಿ ವ್ಯಾಪಿಸಿದ್ದು, ಇಡೀ ಗುಡ್ಡವನ್ನೇ ಬರಿದು ಮಾಡಲಾಗಿದೆ. 30 ರಿಂದ 50 ಅಡಿವರೆಗೂ ಆಳ ತೋಡಿ ಪ್ರಾಕೃತಿಕ ಗುಡ್ಡಗಳನ್ನು ಖಾಲಿ ಮಾಡಲಾಗುತ್ತಿದೆ. ಮೇಲಿನಿಂದ ನೋಡಿದರೆ ದೊಡ್ಡ ಬಳ್ಳಾರಿ ಗಣಿಯಂತೆ ಭಾಸವಾಗುತ್ತದೆ. ಇದು ಅಂಕೋಲಾ ತಾಲೂಕಿಗೆ ಸೀಮಿತವಾಗಿಲ್ಲ. ಹೊನ್ನಾವರ ತಾಲೂಕಿನ ಮುಗಳಿ, ಮಂಕಿ, ಕೆಕ್ಕಾರು, ಹಡಿನಬಾಳ, ನವಿಲಗೋಣ, ಭಟ್ಕಳ ತಾಲೂಕಿನ ಶಿರಾಲಿ, ಮಾವಳ್ಳಿ, ಬೆಳಸೆ, ಕುಮಟಾ ತಾಲೂಕಿನ ಮೂರೂರು, ಮಿರ್ಜಾನ್ ಮುಂತಾದೆಡೆ ಗಣಿಗಳು ನಿರಂತರವಾಗಿ ನಡೆದಿವೆ.
ಭಟ್ಕಳದಲ್ಲಿ ದುರಂತ
ಭಟ್ಕಳದ ಮುಟ್ಟಳ್ಳಿಯಲ್ಲಿ ಮನೆಯ ಮೇಲೆ ಧರೆ ಕುಸಿದು ನಾಲ್ವರು ಮೃತಪಟ್ಟಿದ್ದರು. ಈ ಹಿಂದೆ ಈ ಭಾಗದಲ್ಲಿ ನಡೆದ ಕೆಂಪುಗಲ್ಲು ಗಣಿಗಾರಿಕೆಯೇ ಇದಕ್ಕೆ ಕಾರಣ ಎಂದು ಆರೋಪಿಸಲಾಗಿತ್ತು. ಇದೇ ಆತಂಕದಲ್ಲಿ ಹೊನ್ನಾವರದ ಅಪ್ಸರಕೊಂಡದಲ್ಲಿ ಹಲವು ಕುಟುಂಬಗಳನ್ನು ಸ್ಥಳಾಂತರಿಸಲಾಗಿತ್ತು. ಯಾವುದೇ ಸುರಕ್ಷತೆ ಇಲ್ಲದೇ ನಡೆಯುತ್ತಿರುವ ಗಣಿಗಾರಿಕೆ ನೋಡಿದರೆ, ಜಿಲ್ಲೆಯ ಇತರ ಕೆಲವೆಡೆಯೂ ಅಂಥದ್ದೇ ಅವಗಢ ಸಂಭವಿಸುವ ದಿನ ದೂರವಿಲ್ಲ ಎಂಬುದು ಜನರ ಆತಂಕ.
....
ಜಿಲ್ಲೆಯ ವಿವಿಧ ಗಣಿಗಳ ಮೇಲೆ ಈಗಾಗಲೇ ದಾಳಿ ನಡೆಸಿ ಪ್ರಕರಣ ದಾಖಲಿಸಲಾಗಿದೆ. ಅಂಕೋಲಾ ತಾಲೂಕಿನ ಗಣಿಯೊಂದರ ಮೇಲೆ ಐದಾರು ಬಾರಿ ದಾಳಿ ಮಾಡಲಾಗಿದೆ. ಇನ್ನೂ ದಾಳಿ ಮುಂದುವರಿಸಲಾಗುವುದು.
ಆಶಾ ಎಂ.
ಹಿರಿಯ ಭೂ ವಿಜ್ಞಾನಿ
ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಕಾರವಾರ