

ಸುಭಾಸ ಧೂಪದಹೊಂಡ ಕಾರವಾರ
ಕೋಟಿ ರೂಪಾಯಿ ಖರ್ಚು ಮಾಡಿ ಇಲ್ಲಿನ ಬೈತಖೋಲ್ ವಾಣಿಜ್ಯ ಬಂದರಿನಲ್ಲಿ ವರ್ಷದ ಹಿಂದೆ ನಿರ್ಮಾಣ ಮಾಡಿದ ನೈಟ್ ನೇವಿಗೇಶನ್ (ಹಡಗುಗಳ ರಾತ್ರಿ ಸಂಚಾರ ವ್ಯವಸ್ಥೆ) ನಿರೀಕ್ಷೆಯಷ್ಟು ಬಳಕೆಯಾಗುತ್ತಿಲ್ಲ.
ಒಂದು ಕೋಟಿ ರೂಪಾಯಿ ಖರ್ಚು ಮಾಡಿ ಇಲ್ಲಿನ ವಾಣಿಜ್ಯ ಬಂದರಿನಿಂದ ಅರಬ್ಬಿ ಸಮುದ್ರದೆಡೆಗೆ ಸಾಗುವ ಮಾರ್ಗದಲ್ಲಿ ರಾತ್ರಿಯೂ ಕಾಣುವಂತಹ 10ಕ್ಕೂ ಹೆಚ್ಚು ಬೋಯ್ (ತೇಲುವ ಗೂಡು) ಅಳವಡಿಸಿ ಮಾರ್ಗ ಗುರುತಿಸಲಾಗಿತ್ತು. 2019ರ ಮೇ 6ರಂದು ಎಂ.ವಿ.ಬಿಸ್ಕಿನ್ ಲೈಟ್ ಎಂಬ ಹಡಗು ರಾತ್ರಿ ಹೊರಡುವ ಮೂಲಕ ಹಡಗುಗಳ ರಾತ್ರಿ ಸಂಚಾರಕ್ಕೆ ಚಾಲನೆ ದೊರೆತಿತ್ತು.
ಇದಾಗಿ ವರ್ಷ ಕಳೆದಿದೆ. ಇದುವರೆಗೂ ನೂರಕ್ಕೂ ಅಧಿಕ ಹಡಗುಗಳು ಕಾರವಾರ ಬಂದರಿಗೆ ಬಂದು ಹೋಗಿವೆ. ಆದರೆ, ಇದುವರೆಗೂ ಎರಡು ಹಡಗುಗಳು ಮಾತ್ರ ರಾತ್ರಿ ಕಾರ್ಯಾಚರಣೆ ಮಾಡಿವೆ ಎಂಬ ಮಾಹಿತಿ ಲಭ್ಯವಾಗಿದೆ.
ಏಕೆ ಸಮಸ್ಯೆ?: ರಾತ್ರಿ ಸಂಚಾರ ಮಾರ್ಗ ಗುರುತಿಸಿದರೂ ಮಳೆಗಾಲದಲ್ಲಿ ಹೆಚ್ಚಿನ ಅಲೆಗಳ ಪ್ರಭಾವ ಹಾಗೂ ಗಾಳಿಯ ಕಾರಣದಿಂದ ರಾತ್ರಿ ಹಡಗುಗಳನ್ನು ದಕ್ಕೆಗೆ ತರುವುದು ಹಾಗೂ ಕಳಿಸಿಕೊಡುವುದು ಸುರಕ್ಷಿತವಲ್ಲ. ಅಪಾಯ ಸಂಭವಿಸುವ ಸಾಧ್ಯತೆ ಇದೆ. ಇದರಿಂದಾಗಿ ಇರುಳು ಅನುವು ಮಾಡಿಕೊಟ್ಟಿಲ್ಲ. ಮಂಗಳೂರು ಬಂದರಿನಂತೆ 24 ಗಂಟೆಯೂ ಹಡಗುಗಳ ಆಗಮನ ಹಾಗೂ ನಿರ್ಗಮನಕ್ಕೆ ಅವಕಾಶ ನೀಡಬೇಕು ಎಂದರೆ, ಅಲೆ ತಡೆಗೋಡೆ ನಿರ್ವಿುಸಬೇಕು ಎನ್ನುತ್ತಾರೆ ಬಂದರು ಇಲಾಖೆ ನಿರ್ದೇಶಕ ಕ್ಯಾಪ್ಟನ್ ಸಿ. ಸ್ವಾಮಿ.
ವಾಪಸಾದ ವಿಟಿಎಂಎಸ್ ಹಣ: ಕೇಂದ್ರ ಸರ್ಕಾರವು ಕಾರವಾರ ಬಂದರಿಗೆ ಮಂಜೂರಾಗಿದ್ದ ವೆಸೆಲ್ಸ್ ಟ್ರಾಫಿಕ್ ಮ್ಯಾನೇಜ್ವೆುಂಟ್ ಸಿಸ್ಟಂ (ವಿಟಿಎಂಎಸ್)ಯೋಜನೆಯನ್ನು ಹೆಚ್ಚಿನ ಹಡಗುಗಳ ಕಾರ್ಯಾಚರಣೆ ಇಲ್ಲ ಎಂಬ ಕಾರಣ ನೀಡಿ ರದ್ದು ಮಾಡಿದೆ. ಕೇಂದ್ರ ಸರ್ಕಾರ ಕೆಲವು ವರ್ಷಗಳ ಹಿಂದೆಯೇ 11.8 ಕೋಟಿ ರೂ. ವೆಚ್ಚದ ವಿಟಿಎಂಎಸ್ ಯೋಜನೆಯನ್ನು ಕಾರವಾರಕ್ಕೆ ಮಂಜೂರು ಮಾಡಿತ್ತು. ವಾಣಿಜ್ಯ ಬಂದರಿಗೆ ಬರುವ ಹಡಗುಗಳ ಸಂಚಾರ ನಿಯಂತ್ರಣಕ್ಕೆ ಗೋಪುರ ನಿರ್ಮಾಣ ಮಾಡಲು ಉದ್ದೇಶಿಸಲಾಗಿತ್ತು. ಹೆಚ್ಚಿನ ಹಡಗುಗಳ ಓಡಾಟವಿದ್ದರೆ ಅದನ್ನು ಈ ಗೋಪುರದಲ್ಲಿ ಕುಳಿತು ನಿಯಂತ್ರಿಸುವ ವ್ಯವಸ್ಥೆ ಇಲ್ಲಿ ಆಗುತ್ತಿತ್ತು. ಕಡಲ ತೀರದಲ್ಲಿ ಅದಕ್ಕಾಗಿ ಜಾಗವನ್ನೂ ಗುರುತಿಸಲಾಗಿತ್ತು. ಡೈರೆಕ್ಟರ್ ಜನರಲ್ ಆಫ್ ಲೈಟ್ ಹೌಸ್ ಆಂಡ್ ಲೈಟ್ಶಿಪ್ಸ್ (ಡಿಜಿಎಲ್ಎಲ್ಎಲ್) ಎಂಬ ಸಂಸ್ಥೆ ಈ ಯೋಜನೆ ಕಾರ್ಯರೂಪಕ್ಕೆ ತರಬೇಕಿತ್ತು. ಆದರೆ, ಕಾರವಾರದಲ್ಲಿ ವಿಟಿಎಂಎಸ್ ಯೋಜನೆ ವ್ಯವಸ್ಥೆ ಜಾರಿ ಮಾಡುವಷ್ಟು ಹಡಗುಗಳ ಸಂಚಾರವಿಲ್ಲ ಎಂಬ ಕಾರಣ ನೀಡಿ ಯೋಜನೆಯನ್ನು ರದ್ದು ಮಾಡಿ ಹಣವನ್ನು ಕೇಂದ್ರ ಸರ್ಕಾರಕ್ಕೆ ವಾಪಸ್ ಕಳಿಸುತ್ತಿರುವುದಾಗಿ ಡಿಜಿಎಲ್ಎಲ್ 2019 ರಲ್ಲೇ ಮಾಹಿತಿ ನೀಡಿದೆ.
ಬಂದರಿಗೆ ಬರುವ ಹಡಗುಗಳ ಕ್ಯಾಪ್ಟನ್ಗಳು ರಾತ್ರಿ ಹೊರಡುವ ಹಾಗೂ ದಕ್ಕೆಗೆ ಬರುವ ಬಗ್ಗೆ ನಮಗೆ ಪ್ರಸ್ತಾವನೆ ಸಲ್ಲಿಸಿದರೆ, ನಾವು ವ್ಯವಸ್ಥೆ ಮಾಡಿಕೊಡಲು ಸಿದ್ಧರಿದ್ದೇವೆ. ಆದರೆ, ಹಡಗುಗಳು ಇಲಾಖೆಗೆ 24 ಗಂಟೆಯ ಶುಲ್ಕ ಕಟ್ಟಬೇಕಾಗಿರುವ ಕಾರಣ ಒಂದೆರಡು ತಾಸು ಮುಂಚೇ ಹೋದರೂ ಅವರಿಗೆ ಯಾವುದೇ ಲಾಭವಿಲ್ಲ. ಕಾರಣ ರಾತ್ರಿ ಹೊರಡಲು ಅಥವಾ ದಕ್ಕೆಗೆ ಬರಲು ಹೆಚ್ಚಿನ ಹಡಗುಗಳ ಕ್ಯಾಪ್ಟನ್ಗಳು ಮತ್ತು ಅವರಿಗೆ ಸಹಕಾರ ನೀಡುವ ಮರೈನ್ ಏಜೆಂಟಗಳು ಮುಂದಾಗುವುದಿಲ್ಲ. ಕ್ಯಾ.ಸಿ.ಸ್ವಾಮಿ ಬಂದರು ಇಲಾಖೆ ನಿರ್ದೇಶಕ