ಬರ ಪರಿಹಾರ ಕಾಮಗಾರಿ ಶುರು ಮಾಡಿ

2610Klb01
Published on

ಕಲಬುರಗಿ: ಜಿಲ್ಲೆಯಲ್ಲಿ ಬರ ಪರಿಹಾರ ಕಾಮಗಾರಿ ಕೈಗೊಳ್ಳುವುದು ಸೇರಿ ನಾನಾ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆ (ಎಐಕೆಕೆಎಂಎಸ್) ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿದರು.

ರಾತ್ರಿ ಕರೆಂಟ್ ನೀಡಿದರೆ ರೈತರಿಗೆ ತೊಂದರೆಯಾಗಲಿದೆ. ಹೀಗಾಗಿ ಕೃಷಿ ಪಂಪ್‌ಸೆಟ್‌ಗಳಿಗೆ ಹಗಲಲ್ಲಿ ಎಂಟು ತಾಸು ವಿದ್ಯುತ್ ಪೂರೈಸಬೇಕು. ಕಾರ್ಖಾನೆಗಳಿಗೆ ಸಮರ್ಪಕ ವಿದ್ಯುತ್ ಒದಗಿಸುವ ಜೆಸ್ಕಾಂ ರೈತರಿಗೆ ನೀಡಲು ಹಿಂದೇಟು ಹಾಕುತ್ತಿದೆ ಎಂದು ದೂರಿದರು.

ಮಳೆ ಕೊರತೆಯಿಂದ ಬೆಳೆಗಳು ಕೈಕೊಟ್ಟಿವೆ. ಕೆರೆ, ಬಾವಿಯಲ್ಲಿ ನೀರಿಲ್ಲ. ಉದ್ಯೋಗ ಖಾತ್ರಿ ಯೋಜನೆ ವರ್ಷವಿಡೀ ವಿಸ್ತರಿಸಿ ರೈತರು ಗುಳೆ ಹೋಗುವುದನ್ನು ತಪ್ಪಿಸಬೇಕು. ಬರಪೀಡಿತ ಗ್ರಾಮಗಳಲ್ಲಿ ಉಚಿತ ಶುದ್ಧ ಕುಡಿಯುವ ನೀರು ಮತ್ತು ಜಾನುವಾರುಗಳಿಗೆ ಮೇವು ಒದಗಿಸಬೇಕು. ಒಣಗಿರುವ ಕೆರೆ ಹೂಳೆತ್ತಿಸಿ ಸರಿಯಾದ ರೀತಿಯಲ್ಲಿ ನಿರ್ವಹಿಸಬೇಕು. ಅಗತ್ಯವಿದ್ದಲ್ಲಿ ಕೃತಕ ಕೆರೆ ಆರಂಭಿಸಲು ಯೋಜಿಸಿ ಕೆಲಸ ತಕ್ಷಣ ಕೈಗೊಳ್ಳಬೇಕು. ಕೆರೆ ಜೋಡಣೆ ಯೋಜನೆ ಜಾರಿಗೊಳಿಸಬೇಕು. ನೀರಿನ ಸಮಸ್ಯೆ ನಿವಾರಣೆಗೆ ಶಾಶ್ವತ ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಿದರು.
ಜಿಲ್ಲಾಧ್ಯಕ್ಷ ಗಣಪತರಾವ್ ಮಾನೆ, ಕಾರ್ಯದರ್ಶಿ ಮಹೇಶ ಎಸ್.ಬಿ. ಇತರರಿದ್ದರು. ಸಿಎಂಗೆ ಬರೆದ ಮನವಿಪತ್ರವನ್ನು ಜಿಲ್ಲಾಧಿಕಾರಿ ಕಚೇರಿ ಅಧಿಕಾರಿಗೆ ಸಲ್ಲಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net