ಬರ ನಿರ್ವಹಣೆಗೆ ಅನುದಾನ ಬಿಡುಗಡೆ

bkt-12-8
ಶಶಿಧರ ಕುರೇರ
Published on

ಬಾಗಲಕೋಟೆ: ರಾಜ್ಯ ಸರ್ಕಾರ ಪ್ರತಿ ತಾಲ್ಲೂಕಿಗೆ ₹25 ಲಕ್ಷ ಬರ ನಿರ್ವಹಣೆಗೆ ಅನುದಾನ ಬಿಡುಗಡೆ ಮಾಡಿದೆ. ಕುಡಿಯುವ ನೀರು ಪೂರೈಸುವುದು ಸೇರಿದಂತೆ ಅವಶ್ಯಕ ಕಾಮಗಾರಿಗಳಿಗೆ ಬಳಕೆ ಮಾಡಿಕೊಳ್ಳಲಾಗುವುದು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ ಹೇಳಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ₹1.54 ಕೋಟಿ ಮೊತ್ತವನ್ನು ಕೊಳವೆಬಾವಿಗಳ ಪುನರುಜ್ಜೀವಗೊಳಿಸಲು ಬಳಸಲಾಗುತ್ತಿದೆ. 172 ಗ್ರಾಮಗಳನ್ನು ಕುಡಿಯುವ ನೀರಿನ ಸಮಸ್ಯೆ ಎದುರಾಗಬಹುದೆಂದು ಗುರುತಿಸಲಾಗಿದೆ. ಇಲ್ಲಿಯವರೆಗೆ ಯಾವುದೇ ಗ್ರಾಮಕ್ಕೂ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುತ್ತಿಲ್ಲ ಎಂದರು.

725 ಖಾಸಗಿ ಕೊಳವೆಬಾವಿಗಳ ಮಾಲೀಕರೊಂದಿಗೆ ಕುಡಿಯುವ ನೀರು ಸರಬರಾಜಿಗೆ ಸಂಬಂಧಿಸಿದಂತೆ ಒಪ್ಪಂದ ಮಾಡಿಕೊಳ್ಳಲಾಗಿದೆ. 14 ಕೊಳವೆಬಾವಿಗಳನ್ನು ಈಗಾಗಲೇ ಬಳಸಿಕೊಳ್ಳಲಾಗುತ್ತಿದೆ ಎಂದು ಹೇಳಿದರು.

ಬರ ನಿರ್ವಹಣೆಗೆ ₹2 ಕೋಟಿ ಹೆಚ್ಚುವರಿ ಅನುದಾನ ನೀಡುವ ಭರವಸೆ ಈಗಾಗಲೇ ಸಿಕ್ಕಿದೆ. ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ತೊಂದರೆಯಾಗದಂತೆ ಕ್ರಮವಹಿಸಲಾಗುವುದು ಎಂದರು.

ಜಿಲ್ಲಾಧಿಕಾರಿ ಕೆ.ಎಂ. ಜಾನಕಿ ಮಾತನಾಡಿ, ಜಿಲ್ಲೆಯ ಎಲ್ಲ ತಹಶೀಲ್ದಾರ್‌ಗಳ ಬಳಿ ₹50 ಲಕ್ಷ ಅನುದಾನ ಲಭ್ಯವಿದೆ. ಮೇವು ಖರೀದಿಗೆ ಸಂಬಂಧಿಸಿದಂತೆ ಟೆಂಡರ್ ಕರೆಯಲಾಗಿದೆ. ಪಶು ಸಂಗೋಪನಾ ಇಲಾಖೆ ಪ್ರಕಾರ 26 ವಾರಗಳಿಗೆ ಆಗುವಷ್ಟು ಮೇವಿದೆ. ಅವಶ್ಯವಿದ್ದರೆ, ಗೋಶಾಲೆಗಳಿಗೆ ಮೇವು ನೀಡಲಾಗುವುದು ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net