ಬಯಲಲ್ಲಿ ನಿತ್ಯ ಪಾಠ

29sdp2
Published on

ಸಿದ್ದಾಪುರ: ಶಾಲೆ ಆರಂಭವಾಗದಿದ್ದರೂ ತಾಲೂಕಿನ ಶೇ. 50ರಷ್ಟು ಶಾಲೆಯ ಶಿಕ್ಷಕರು ಮಕ್ಕಳಿಗೆ ಶಿಕ್ಷಣ ನೀಡಲು ಮುಂದಾಗಿದ್ದಾರೆ.

ಿದ್ದಾಪುರ: ಶಾಲೆ ಆರಂಭವಾಗದಿದ್ದರೂ ತಾಲೂಕಿನ ಶೇ. 50ರಷ್ಟು ಶಾಲೆಯ ಶಿಕ್ಷಕರು ಮಕ್ಕಳಿಗೆ ಶಿಕ್ಷಣ ನೀಡಲು ಮುಂದಾಗಿದ್ದಾರೆ.

ತಾಲೂಕಿನ ಗ್ರಾಮೀಣ ಪ್ರದೇಶವಾಗಿರುವ ಕೊಡ್ಗಿಬೈಲ್ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಗೆ ಬಯಲು ಶಾಲೆ ಆರಂಭಿಸಿ ಶಿಕ್ಷಣ ನೀಡಲು ಶಿಕ್ಷಕರು ಮುಂದಾಗಿದ್ದಾರೆ.

ತಾಲೂಕಿನ ಎಲ್ಲ ಗ್ರಾಮೀಣ ಪ್ರದೇಶಗಳಿಗೆ ಮೊಬೈಲ್ ನೆಟ್​ವರ್ಕ್ ಇಲ್ಲದಿರುವುದರಿಂದ ಕೆಲವು ಶಿಕ್ಷಕರು ಮನೆ, ಮನೆ ಭೇಟಿ ನೀಡಿ ಪಾಠ ಹೇಳಿಕೊಡುವುದರ ಜತೆಗೆ ಹೋಂ ವರ್ಕ್ ನೀಡುತ್ತಿದ್ದಾರೆ. ನೆಟ್​ವರ್ಕ್ ಸಂಪರ್ಕ ಇರುವ ಮಕ್ಕಳಿಗೆ ಆನ್​ಲೈನ್ ನಲ್ಲಿ ಪಾಠ ಹೇಳುತ್ತ ಹೋಂ ವರ್ಕ್ ನೀಡಿ ಮಕ್ಕಳು ಕ್ರಿಯಾತ್ಮಕವಾಗಿರುವುದಕ್ಕೆ ಎಲ್ಲ ರೀತಿಯ ಪ್ರಯತ್ನ ಮಾಡುತ್ತಿದ್ದಾರೆ.

ತಾಲೂಕಿನ ಬಿದ್ರಕಾನ ಗ್ರಾಪಂ ವ್ಯಾಪ್ತಿಯ ಕೊಡ್ಗಿಬೈಲ್ ಸಕಿಪ್ರಾ ಶಾಲೆಯ ಶಿಕ್ಷಕ ಆರ್.ಜಿ. ಗೌಡ ಅವರು ಜು. 21ರಿಂದ ಮಕ್ಕಳಿಗೆ ಬಯಲು ಶಾಲೆ ಮೂಲಕ ನಿತ್ಯ ಪಾಠ ಮಾಡುವುದಕ್ಕೆ ಮುಂದಾಗಿದ್ದಾರೆ. ಕೇವಲ ಈ ಶಾಲೆಯ ಮಕ್ಕಳು ಮಾತ್ರ ಅಲ್ಲ ಅಜ್ಜನ ಮನೆಗೆ ಬಂದ ಬಳೂರು, ಕಿಲವಳ್ಳಿ ಹಾಗೂ ಶಿರಸಿ ತಾಲೂಕಿನ ಕೋಣನಬಿಡಕಿ ಊರಿನ 25 ಮಕ್ಕಳು ಇದ್ದಾರೆ. ಒಂದನೇ ತರಗತಿಯಿಂದ ಐದನೇ ತರಗತಿಯವರೆಗೆ ನಿತ್ಯ ಎಲ್ಲ ವಿಷಯಗಳ ಕುರಿತು ಮಕ್ಕಳನ್ನು ಪರಸ್ಪರ ಅಂತರದಲ್ಲಿ ಕೂಡ್ರಿಸುವ ಮೂಲಕ ಪಾಠ ಮಾಡಲಾಗುತ್ತಿದೆ. ಮಕ್ಕಳು ಮಾಸ್ಕ್ ಧರಿಸಿಯೇ ಶಾಲೆಗೆ ಬರುತ್ತಿರುವುದು ಸ್ವಾಗತಾರ್ಹವಾಗಿದೆ ಎಂದು ಶಾಲಾ ಶಿಕ್ಷಕ ಆರ್.ಜಿ. ಗೌಡ ಹಾಗೂ ಸಮೂಹ ಸಂಪನ್ಮೂಲ ವ್ಯಕ್ತಿ ಎಂ.ಎಸ್. ಹೆಗಡೆ ಹೇಳುತ್ತಾರೆ.

ಸಿದ್ದಾಪುರ ತಾಲೂಕಿನಲ್ಲಿ ಮಕ್ಕಳು ಹಾಗೂ ಶಿಕ್ಷಕರು ಕ್ರಿಯಾಶೀಲರಾಗಿದ್ದಾರೆ. ಮಕ್ಕಳಿಗೆ ಶಿಕ್ಷಣ ನೀಡಲು ಏನೆಲ್ಲ ಪ್ರಯತ್ನ ಮಾಡಬೇಕೋ ಅದೆಲ್ಲವನ್ನೂ ಶಿಕ್ಷಕರು ಮಾಡುತ್ತಿದ್ದಾರೆ. ಇದಕ್ಕೆ ಎಲ್ಲ ಪಾಲಕರು, ಪೋಷಕರು, ಎಸ್​ಡಿಎಂಸಿ ಸದಸ್ಯರು, ಸ್ಥಳೀಯ ಜನತೆ ಸಹಕರಿಸುತ್ತಿದ್ದಾರೆ.ವಾಹನದ ತೊಂದರೆ ಇದ್ದರೂ ಕೆಲವು ಶಿಕ್ಷಕರು ಮನೆ, ಮನೆಗೆ ಭೇಟಿ ನೀಡಿ ಪಾಠ ಮಾಡುತ್ತ ಹೋಂ ವರ್ಕ್ ನೀಡುತ್ತಿದ್ದಾರೆ. | ಸದಾನಂದ ಸ್ವಾಮಿ ಬಿಇಒ ಸಿದ್ದಾಪುರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net