ಬನ್ನೂರು ಪಟ್ಟಣವನ್ನು ತಾಲೂಕು ಕೇಂದ್ರವಾಗಿ ಘೋಷಿಸಿ

Published on

ತಿ.ನರಸೀಪುರ: ಬನ್ನೂರು ಪಟ್ಟಣವನ್ನು ತಾಲೂಕು ಕೇಂದ್ರವಾಗಿ ಘೋಷಣೆ ಮಾಡಬೇಕೆಂಬ ಜನರ ಬೇಡಿಕೆಯ ಧ್ವನಿಗೆ ನನ್ನ ಧ್ವನಿಗೂಡಿಸಿ ಸರ್ಕಾರಕ್ಕೆ ಒತ್ತಾಯ ಮಾಡುತ್ತೇನೆ ಎಂದು ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಭರವಸೆ ನೀಡಿದರು.

ಮೈಸೂರು ನಗರದ ಸರ್ಕಾರಿ ಭವನದಲ್ಲಿ ಶನಿವಾರ ಬನ್ನೂರು ಪಟ್ಟಣವನ್ನು ತಾಲೂಕು ಕೇಂದ್ರವಾಗಿ ಘೋಷಣೆ ಮಾಡುವಂತೆ ತಾಲೂಕು ರಚನಾ ಕ್ರಿಯಾ ಸಮಿತಿ ಸಲ್ಲಿಸಿದ ಮನವಿ ಪತ್ರವನ್ನು ಸ್ವೀಕರಿಸಿ ಮಾತನಾಡಿದ ಅವರು, ನಿಮ್ಮೆಲ್ಲರ ಬೇಡಿಕೆ ಧ್ವನಿಗೆ ನನ್ನ ಧ್ವನಿ ಸೇರಿಸಿ ಸರ್ಕಾರಕ್ಕೆ ಒತ್ತಾಯ ಮಾಡುತ್ತೇನೆ ಎಂದರು.

ಪಕ್ಷಾತೀತವಾಗಿ ಕಳೆದ 30 ವರ್ಷಗಳಿಂದಲೂ ತಾಲೂಕು ಕೇಂದ್ರ ಘೋಷಣೆಗೆ ಹೋರಾಟ ಮಾಡಿದ್ದೀರಿ. ಈ ಹಿಂದೆ ಅತಿರಥ ಮಹಾರಥರು ಇದ್ದರೂ ತಾಲೂಕು ಮಾಡಿಲ್ಲ. ಸಮಸ್ತ ಬನ್ನೂರು ಭಾಗದ, ವಿವಿಧ ಪಕ್ಷಗಳ ಮುಖಂಡರು, ಜನಪ್ರತಿನಿಧಿಗಳು ಹಾಗೂ ಜನರ ಅಭಿಪ್ರಾಯವನ್ನು ಸರ್ಕಾರಕ್ಕೆ ಸಲ್ಲಿಸಿ, ತಾಲೂಕು ರಚನೆ ಮಾಡಲು ತೀವ್ರವಾಗಿ ಒತ್ತಾಯ ಮಾಡುತ್ತೇನೆ ಎಂದು ಮಹದೇವಪ್ಪ ತಿಳಿಸಿದರು.

ಮಾಜಿ ಶಾಸಕ ಎಸ್.ಕೃಷ್ಣಪ್ಪ ಮಾತನಾಡಿ, ಬನ್ನೂರು ಭಾಗದಲ್ಲಿ ಶಾಸಕರಾಗಿ ಆಯ್ಕೆಗೊಳ್ಳುತ್ತಿದ್ದವರಿಗೆ ಸರ್ಕಾರದಲ್ಲಿ ಸಚಿವರಾಗುವ ಅವಕಾಶ ಸಿಕ್ಕಿರಲಿಲ್ಲ. ಈಗ ನೀವು ಎರಡು ಬಾರಿ ಸಚಿವರಾಗಿದ್ದೀರಿ. ವಿಧಾನಸಭಾ ಕ್ಷೇತ್ರವೊಂದರಲ್ಲಿ ಎರಡು ಮೂರು ತಾಲೂಕುಗಳಿರುವ ಉದಾಹರಣೆಗಳಿವೆ. ನಾವು ಸರ್ಕಾರಕ್ಕೆ ಮನವಿ ಸಲ್ಲಿಸಲು ಬಂದಿದ್ದೇವೆ. ಕ್ಷೇತ್ರ ಮರು ವಿಂಗಡನೆ ಹಾಗೂ ತಾಲೂಕು ರಚನೆಗೆ ಯಾವುದೇ ಸಂಬಂಧವಿಲ್ಲವಾದ್ದರಿಂದ ಕೂಡಲೇ ಬನ್ನೂರು ಪಟ್ಟಣವನ್ನು ತಾಲೂಕು ಕೇಂದ್ರವನ್ನಾಗಿ ಘೋಷಣೆ ಮಾಡಬೇಕೆಂದು ಒತ್ತಾಯಿಸಿದರು.

ಮಾಜಿ ಶಾಸಕಿ ಜೆ.ಸುನೀತಾ ವೀರಪ್ಪಗೌಡ, ತಾಲೂಕು ರಚನಾ ಸಮಿತಿಯ ಸಂಚಾಲಕರಾದ ಎನ್.ಎಂ.ರಾಮಚಂದ್ರ, ವೈ.ಎಸ್.ರಾಮಸ್ವಾಮಿ, ತಾ.ಪಂ ಮಾಜಿ ಅಧ್ಯಕ್ಷ ಸಿ.ಚಾಮೇಗೌಡ, ಪುರಸಭೆ ಮಾಜಿ ಅಧ್ಯಕ್ಷ ಡಿ.ಪದ್ಮನಾಭ, ಸಹಾಯಕ ಪ್ರಾಧ್ಯಾಪಕ ಡಾ.ಬಿ.ಕೆ. ಜ್ಞಾನಪ್ರಕಾಶ್, ಮಾಜಿ ಉಪಾಧ್ಯಕ್ಷ ರಾಮಲಿಂಗೇಗೌಡ, ಪ್ರಥಮ ದರ್ಜೆ ಗುತ್ತಿಗೆದಾರ ಎ.ಎನ್.ಸ್ವಾಮಿ, ಮಹೇಂದ್ರ, ನಾಡಗೌಡರಾದ ವೈ.ಎಚ್. ಹನುಮಂತೇಗೌಡ, ಪುರಸಭೆ ಸದಸ್ಯರಾದ ಮೂರ್ತಿ, ಶಿವಣ್ಣ, ಕಾರ್ ಮಹೇಶ್, ಮುಖಂಡರಾದ ಕೃಷ್ಣೇಗೌಡ, ಚನ್ನೇಗೌಡ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net