

ಬಾಗಲಕೋಟೆ: ನಾಡಿನ ಶಕ್ತಿಪೀಠಗಳಲ್ಲಿ ಒಂದಾದ ಸುಪ್ರಸಿದ್ಧ ಬಾದಾಮಿ ತಾಲೂಕಿನ ಬನಶಂಕರಿ ದೇವಿ ಅವತರಿಸಿದ ದಿನವಾದ ಸೋಮವಾರ ದೇವಸ್ಥಾನದಲ್ಲಿ ನಸುಕಿನ ಜಾವದಿಂದಲೇ ವಿಶೇಷ ಪೂಜೆ, ಅಭಿಷೇಕ, ಅಲಂಕಾರ ನಡೆಯಿತು.
ನಸುಕಿನ ಜಾವ ೪ ಗಂಟೆಗೆ ಪ್ರಾರಂಭವಾದ ವಿಶೇಷ ಅಭಿಷೇಕ ಮೂರುವರೆ ಗಂಟೆ ಕಾಲ ನಡೆಯಿತು. ಸ್ವರ್ಣ ಅಭಿಷೇಕ, ರಜತ ಅಭಿಷೇಕ, ಎಳೆನೀರು ಅಭಿಷೇಕ ಸೇರಿದಂತೆ ಒಟ್ಟು ೧೬ ದ್ರವ್ಯಗಳನ್ನು ಒಳಗೊಂಡ ಸೋಡಸ್ ದ್ರವ್ಯ ಅಭಿಷೇಕ ಬೆಳಗ್ಗೆ ೪ ರಿಂದ ೭.೩೦ರ ವರೆಗೆ ನಡೆಯಿತು. ಬಳಿಕ ದೇವಿಗೆ ವಿಶೇಷ ಅಲಂಕಾರ ಹಾಗೂ ಪ್ರತಿದಿನದಂತೆ ಪೂಜಾ ಕೈಂಕರ್ಯಗಳು ಜರುಗಿದವು.
ದೇವಿ ಅವತರಿಸಿದ ದಿನವಾಗಿದ್ದರಿಂದ ಸೋಮವಾರ ರಾಜ್ಯ ಮತ್ತು ಹೊರರಾಜ್ಯದ ಭಕ್ತರು ದೇವಸ್ಥಾನಕ್ಕೆ ಆಗಮಿಸಿ ದರ್ಶನ ಪಡೆದರು. ಇನ್ನು ಭಕ್ತರಿಗೆ ದೇವಸ್ಥಾನದಿಂದ ವಿಶೇಷ ಪ್ರಸಾದ ವ್ಯವಸ್ಥೆಯನ್ನು ಸಹ ಮಾಡಲಾಗಿತ್ತು. ೭೫ ಕೆಜಿ ಗೋಽಯಿಂದ ತಯಾರಿಸಿದ್ದ ಗೋಽ ಹುಗ್ಗಿ, ೪ ಸಾವಿರ ಮಾವಿನ ಹಣ್ಣುಗಳ ಸೀಕರಣಿ, ೫ ಕ್ವಿಂಟಲ್ ಅನ್ನ ಮಾಡಲಾಗಿತ್ತು. ಬೆಳಗ್ಗೆಯಿಂದ ಅಂದಾಜು ೬ ರಿಂದ ೭ ಸಾವಿರ ಭಕ್ತರು ಪ್ರಸಾದ ಪಡೆದರು ಎಂದು ದೇವಸ್ಥಾನದವರು ತಿಳಿಸಿದರು.