ಬನವಾಸಿ ದೇವಾಲಯದಲ್ಲಿ ವಸ್ತ್ರ ಸಂಹಿತೆ ಜಾರಿಗೆ ಒತ್ತಾಯ

7sirsi7
Published on

ವಿಜಯವಾಣಿ ಸುದ್ದಿಜಾಲ ಶಿರಸಿ:

ತಾಲೂಕಿನ ಬನವಾಸಿಯ ಶ್ರೀ ಮಧುಕೇಶ್ವರ ದೇವಸ್ಥಾನದಲ್ಲಿ ಸಾತ್ವಿಕ ಉಡುಪುಗಳನ್ನು ಧರಿಸಿ ಬರುವ ದೃಷ್ಟಿಯಿಂದ ದೇವಾಲಯದಲ್ಲಿ ವಸ್ತ್ರಸಂಹಿತೆ ಜಾರಿಗೆ ತರಬೇಕು ಎಂದು ಒತ್ತಾಯಿಸಿ ಹಿಂದೂ ಜನಜಾಗೃತಿ ಸಮಿತಿ ಹಾಗೂ ಸಮಸ್ತ ಹಿಂದೂ ಸಂಘಟನೆ ಸದಸ್ಯರು ಬುಧವಾರ ಮಧುಕೇಶ್ವರ ದೇವಸ್ಥಾನದ ಆಡಳಿತ ವರ್ಗದವರಿಗೆ ಮನವಿಯನ್ನು ಸಲ್ಲಿಸಿದರು.

ಮಧುಕೇಶ್ವರ ದೇವಸ್ಥಾನವು ಉತ್ತರಕನ್ನಡ ಜಿಲ್ಲೆಯ ಪ್ರಮುಖ ಮತ್ತು ಐತಿಹಾಸಿಕ ದೇವಾಲಯಗಳಲ್ಲೊಂದಾಗಿದೆ. ಭಕ್ತರು ಬೇಡಿದ್ದನ್ನು ನೀಡುತ್ತಾನೆಂಬ ನಂಬಿಕೆ ಇರುವ ಮಧುಕೇಶ್ವರ ದೇವಸ್ಥಾನವು ಒಂದು ಕಾರಣಿಕ ಸ್ಥಳವಾಗಿದ್ದು ಅತ್ಯಂತ ಪವಿತ್ರ ಹಾಗೂ ಸಮಾಜಕ್ಕೆ ಚೈತನ್ಯವನ್ನು ನೀಡುವ ಪುಣ್ಯಕ್ಷೇತ್ರವಾಗಿದೆ. ಮಧುಕೇಶ್ವರನ ಅಸ್ತಿತ್ವದಿಂದ ಬನವಾಸಿ ನಗರ ಪಾವನವಾಗಿದೆ. ದೇವಸ್ಥಾನದ ಪಾವಿತ್ರ್ಯವನ್ನು ಜೋಪಾಸನೆ ಮಾಡಿದರೆ ಮಾತ್ರ ಅಲ್ಲಿರುವ ದೇವತ್ವದ ಅನುಭವವನ್ನು ಪಡೆಯಬಹುದು. ಹಿಂದೂ ಸಂಸ್ಕೃತಿಯ ಪ್ರಕಾರ ಉಡುಪುಗಳನ್ನು ಧರಿಸುವುದರಿಂದ ಈಶ್ವರಿ ಚೈತನ್ಯದ ಲಾಭವಾಗುತ್ತದೆ ಮತ್ತು ದೇವತೆಯ ತತ್ವದ ಅನೂಭೂತಿ ಬರುತ್ತದೆ. ಪಾಶ್ಚಾತ್ಯ ಉಡುಪುಗಳನ್ನು ಧರಿಸುವುದರಿಂದ ಮತ್ತು ಕೂದಲೂ ಬಿಚ್ಚಿಟ್ಟುಕೊಳ್ಳುವುದರಿಂದ ಕೆಟ್ಟ ಶಕ್ತಿಗಳಿಗೆ ಆಮಂತ್ರಣ ನೀಡಿದಂತಾಗುತ್ತದೆ. ವಿದೇಶಿ ಸಂಸ್ಕೃತಿಯ ರಜ-ತಮ ಪ್ರಧಾನ ಉಡುಪುಗಳಿಂದ ದೇವಸ್ಥಾನದ ಸಾತ್ವಿಕತೆಗೆ  ಭಂಗ ಉಂಟಾಗಿ ಭಾವಿಕ ಭಕ್ತರು ದೈವಿ ಚೈತನ್ಯದ ಪೂರ್ಣ ಲಾಭ ಪಡೆಯುವುದರಿಂದ ವಂಚಿತರಾಗುತ್ತಾರೆ.

ಅತ್ಯಂತ ಪವಿತ್ರ ಹಾಗೂ ಚೈತನ್ಯಮಯ ನಮ್ಮ ದೇವಸ್ಥಾನಗಳಲ್ಲಿ ಅವುಗಳ ಪಾವಿತ್ರ್ಯ ಮತ್ತು ಆಧ್ಯಾತ್ಮಿಕ ಸೌಂದರ್ಯವನ್ನು ಕಾಪಾಡುವುದು ಪ್ರತಿಯೊಬ್ಬ ಭಕ್ತರ ಆದ್ಯಕರ್ತವ್ಯವೇ ಆಗಿದೆ. ಆದುದರಿಂದ ಮಧುಕೇಶ್ವರ ದೇವಸ್ಥಾನದಲ್ಲಿ ಭಕ್ತರು ಸಾತ್ವಿಕ ಉಡುಪುಗಳನ್ನು ಧರಿಸಿ ಬರಬೇಕೆಂಬ ನಿಯಮವನ್ನು ಹಾಕಿ ಅದರ ಪಾವಿತ್ರ್ಯವನ್ನು ಕಾಪಾಡಬೇಕಾಗಿ ಈ ಮೂಲಕ ಎಲ್ಲಾ ಶ್ರದ್ಧಾಳು ಮತ್ತು ಮಹಿಳೆಯರಿಗೆ ವಿನಂತಿಸಿಕೊಳ್ಳುತ್ತಿದ್ದೇವೆ. ಇಂತಹ ಧರ್ಮಜಾಗೃತಿಯ ಪ್ರಯತ್ನದಿಂದ  ಶ್ರೀ ಮಧುಕೇಶ್ವರ ದೇವರ ಕೃಪೆಯು ನಿಶ್ಚಿತವಾಗಿಯೂ ನಮ್ಮೆಲ್ಲರ ಮೇಲಾಗುವುದು ಎಂದು ಮನವಿ ಯಲ್ಲಿ ಉಲ್ಲೇಖಿಸಲಾಗಿದೆ.

ಈ ಸಂಧರ್ಭದಲ್ಲಿ ಹಿಂದೂ ಸಂಘಟನೆಯ ಪ್ರಮುಖರಾದ  ಹಾಲೇಶ ಕೆರೋಡಿ,  ಚಂದ್ರಶೇಖರ ಗೌಡರ,  ಅರವಿಂದ ಶೆಟ್ಟಿ,  ಆರ್ ಜಿ ಭಟ್ಟ,  ಸಚಿನ ಮಾಳವದೆ,  ಮಯೂರ್ ಭೊಂಗಳೆ,  ಶ್ರೀಧರ ಶೆಟ್ಟಿ, ಹಿಂದೂ ಮಹಾಸಭಾದ  ಪ್ರವೀಣ ರಾಮನಬೈಲ್,  ಪ್ರಕಾಶ ಸೂಗಿ, ಅರವಿಂದ ಬಳಗಾರ, ಮಹಿಳಾ ಮುಖಂಡರಾದ  ಮಂಗಳಾ ದಾವಣಗೆರೆ, ಉಮಾ ಸಂಗೀತಗಾರ, ಶಾಂತಾ ಬನವಡಿ, ರೂಪ ಬಂದೇರ್ ಹಿಂದೂ ಜನಜಾಗೃತಿ ಸಮಿತಿಯ ಜಿಲ್ಲಾ ಸಮನ್ವಯಕರಾದ  ಶರತ ಕುಮಾರ ನಾಯ್ಕ ಮುಂತಾದವರು ಉಪಸ್ಥಿತರಿದ್ದರು. ಮನವಿಯನ್ನು  ಮಧುಕೇಶ್ವರ ದೇವಸ್ಥಾನದ ಧರ್ಮದರ್ಶಿಗಳಾದ  ರಾಜಶೇಖರ ಒಡೆಯರ ಅವರು  ಸ್ವೀಕರಿಸಿ ಇದರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net