

ಬಾಗಲಕೋಟೆ: ನೂತನ ತಾಂತ್ರಿಕ ವೃತ್ತಿ ಬದುಕಿನಲ್ಲಿ ಸಾಂಪ್ರದಾಯಿಕ ತಂತ್ರಜ್ಞಾನದೊಂದಿಗೆ ಆಧುನಿಕ ಆರ್ಟಿಫಿಸಿಯಲ್ ಇಂಟಲಿಜೆನ್ಸ್ (ಎಐಎಮ್‌ಎಲ್) ಅಥವಾ ಡೀಪ್ ಲರ್ನಿಂಗ್ ನಂತಹ ವೃತ್ತಿ ಕೌಶಲ್ಯಗಳು ಹಾಗೂ ಬದುಕಿನ ಕೌಶಲ್ಯಗಳನ್ನು ಯುವ ಪದವಿದರರು ರೂಡಿಸಿಕೊಳ್ಳಬೇಕೆಂದು ಐಐಟಿ ಧಾರವಾಡದ ನಿರ್ದೇಶಕರಾದ ಪ್ರೊ. ವಿ. ಆರ್. ದೇಸಾಯಿ ಅವರು ಹೇಳಿದರು.
ಅವರು ಬಸವೇಶ್ವರ ಇಂಜಿನಿಯರಿಂಗ್ ಕಾಲೇಜಿನ ನೂತನ ಸಭಾಭವನದಲ್ಲಿ ಶನಿವಾರ ಜರುಗಿದ ೧೪ನೆಯ ಪದವಿ ಪ್ರಧಾನ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ನೂತನ ಪದವೀಧರರಿಗೆ ಪದವಿ ಪ್ರಧಾನ ಮಾಡಿ ಮಾತನಾಡಿದರು.
ಭಾರತೀಯ ಮೂಲ ಜ್ಞಾನದ ಸಹಾಯದಿಂದ ನಿಮ್ಮನ್ನು ಸರ್ವತೋಮುಖವಾಗಿ ಅಭಿವೃದ್ಧಿಪಡಿಸಿಕೊಂಡು ಹೊಸ ವೃತ್ತಿ ಬದುಕಿನಡೆಗೆ ಹೆಜ್ಜೆ ಹಾಕುವ ನಿಮ್ಮ ಪ್ರತಿ ಹಂತಗಳಲ್ಲಿ ಆತ್ಮ ವಿಶ್ವಾಸದೊಂದಿಗೆ, ಉನ್ನತ ಅಧ್ಯಯನದ ಜೊತೆಗೆ ಹೆಚ್ಚಿನ ಪ್ರಗತಿಯನ್ನು ನೀವು ಸಾಧಿಸಬೇಕೆಂದರು. ಭಾರತದಲ್ಲಿ ನಳಂದಾ ವಿಶ್ವವಿದ್ಯಾಲಯದಂತಹ ಶ್ರೇಷ್ಠ ಜ್ಞಾನ ನೀಡುವ ಜಾಗತಿಕ ಮಟ್ಟದ ವಿಶ್ವ ವಿದ್ಯಾಲಯಗಳಿದ್ದವು, ಭಾರತೀಯ ವೈದ್ಯಕೀಯ (ಆರ್ಯುವೇಧ) ಪದ್ದತಿ ಬಹಳ ಶ್ರೇಷ್ಠವಾದದ್ದು. ವಿಶ್ವಕ್ಕೆ ಭಾರತೀಯ ಯೋಗ ಒಂದು ಅಮೂಲ್ಯ ಕೊಡುಗೆ, ಯೋಗದ ವಿವಿಧ ಭಂಗಿಯ ಮೂಲ ಕಾರಣ, ಹಿನ್ನೆಲೆಯನ್ನು ಪುನರ್ ಅಧ್ಯಯನ ಮಾಡಿ ತಾಂತ್ರಿಕ ಹಾಗೂ ವೈಜ್ಞಾನಿಕ ದೃಷ್ಠಿಕೋನದಿಂದ ವಿಶ್ಲೇಷಿಸಿ ತಿಳಿದುಕೊಳ್ಳುವುದು ಅವಶ್ಯ ಎಂದ ಅವರು, ಕೊನಾರ್ಕ ಸೂರ್ಯ ದೇವಾಲಯದ ರಥಚಕ್ರದ ಕಡ್ಡಿಗಳು ಆರು ನಿಮಿಷದ ನಿಖರತೆಯನ್ನು ತೋರಿಸುವುದು, ಬ್ರಹದೀಶ್ವರ ದೇವಾಲಯದ ಭೂ ಕಂಪನ ನೀರೋದಕ ತಂತ್ರಜ್ಞಾನ ಭಾರತೀಯರ ಆ ಕಾಲದ ಉನ್ನತ ತಾಂತ್ರಿಕತೆಗೆ ಸಾಕ್ಷಿಯಾಗಿವೆ. ಬದುಕಿನ ಎಲ್ಲ ಹಂತಗಳಲ್ಲಿ ಕನಿಷ್ಟ ಒತ್ತಡ ಗರಿಷ್ಟ ನೆಮ್ಮದಿ ಹಾಗೂ ಜ್ಞಾನದೊಂದಿಗೆ ಸುಸ್ಥಿರತೆಯನ್ನು ಕಾಯ್ದುಕೊಂಡು ಸಾಧನೆ ಮಾಡಬೇಕು. ವೈಯಕ್ತಿಕ, ಸಾಮಾಜಿಕ ಹಾಗೂ ರಾಷ್ಟ್ರೀಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡು ಮುಕ್ತತೆಯನ್ನು ಸಾಧಿಸುವುದು ಮುಖ್ಯ ಎಂದರು.
ಇನ್ನೋರ್ವ ಗೌರವಾನ್ವಿತ ಅತಿಥಿಗಳಾದ ಬೆಂಗಳೂರಿನ ಇನ್‌ಟೆಲ್ ಟೆಕ್ನಾಲಜಿ ಪ್ರೈಂ ಲಿಮಿಟೆಡ್‌ನ ಇಂಜನೀಯರಿಂಗ್ ಮ್ಯಾನೇಜರ್ ವಿನಯ್ ಕುಮಾರ್ ತೇಲಸಂಗ ಮಾತನಾಡಿ ವೈಯಕ್ತಿಕ ಸಾಮಾಜಿಕ ಮತ್ತು ವೃತ್ತಿಯ ಜವಾಬ್ದಾರಿಗಳನ್ನು ಸರಿಯಾಗಿ ನಿಭಾಯಿಸಬೇಕು. ಉತ್ತಮ ಆರೋಗ್ಯ, ಓದುವ ಹವ್ಯಾಸ, ನಿರಂತರ ಕಲಿಕೆ ಇವುಗಳನ್ನು ರೂಡಿಸಿಕೊಂಡು ನಿಮಗೆ ಮತ್ತು ಕುಟುಂಬಕ್ಕೆ ಸಮಾಜಕ್ಕೆ ಒಳ್ಳೆಯ ಹೆಸರು ತರುವಂತಹ ವ್ಯಕ್ತಿಗಳಾಗಿರಿ ಎಂದು ಸಲಹೆ ನೀಡಿದರು.
ಬಿ. ವಿ .ವಿ ಸಂಘದ ಕಾರ್ಯಾಧ್ಯಕ್ಷರಾದ ಡಾ. ವೀರಣ್ಣ ಚರಂತಿಮಠ ಅವರು ಅಧ್ಯಕ್ಷತೆಯನ್ನು ವಹಿಸಿ ಪದವಿದರರನ್ನು ಮತ್ತು ಅವರ ಪಾಲಕರನ್ನು ಅಭಿನಂದಿಸಿ ನೀವು ಸಾವಲಂಬಿ ಬದುಕನ್ನು ರೂಪಿಸಿಕೊಂಡು ಸದಾ ಹೊಸತನ್ನು ಕಲಿಯುತ್ತಾ ಉನ್ನತ ವ್ಯಾಸಂಗ ಮಾಡಿ ಸಂಶೋಧನೆಯಲ್ಲಿ ತೊಡಗಿ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕೆಂದರು.
ಬಿ. ವಿ .ವಿ ಸಂಘದ ಗ್ವರವ ಕಾರ್ಯದರ್ಶಿಗಳಾದ ಮಹೇಶ ಅಥಣಿ ಅವರು ವೇದಿಕೆ ಮೇಲೆ ಉಪಸ್ಥಿತರಿದ್ದರು. ಬಿ.ವ್ಹಿ.ವ್ಹಿ. ಎಸ್. ಸಂಘದ ತಾಂತ್ರಿಕ ಶಿಕ್ಷಣ ಸಂಸ್ಥೆಗಳ ನಿರ್ದೇಶಕರಾದ ಡಾ. ಆರ್. ಎನ್. ಹೆರಕಲ್ ಅವರು ಅತಿಥಿಗಳನ್ನು ಸ್ವಾಗತಿಸಿ ಕಾಲೇಜಿನ ಸಾಧನೆ ಮತ್ತು ಅಭಿವೃದ್ಧಿಯ ಮೈಲುಗಳನ್ನು ಮೇಲುಕು ಹಾಕಿದರು. ಕಾಲೇಜಿನ ಪ್ರಾಚಾರ್ಯರಾದ ವೀಣಾ ಸೋರಗಾಂವಿ ಅವರು ಅತಿಥಿಗಳನ್ನು ಪರಿಚಯಿಸಿದರು. ಪರೀಕ್ಷಾ ನಿಯಂತ್ರಣಾಧಿಕಾರಿಗಳದ
ಡಾ. ಕೆ. ಚಂದ್ರಶೇಖರ ಅವರು ವಂದನಾರ್ಪಣೆ ಮಾಡಿದರು. ಡಾ. ಎಸ್. ಜಿ. ಕಂಬಾಳಿಮಠ ಮತ್ತು ಡಾ. ವಿಜಯಲಕ್ಷ್ಮಿ ಜಿಗಜಿನ್ನಿ ಅವರು ಕಾರ್ಯಕ್ರಮ ನಿರೂಪಿಸಿದರು. ಬಿಇಸಿ ಸ್ವರ ತಂಡದವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಪ್ರಥಮ ರ‍್ಯಾಂಕ್ ಪಡೆದ ೬ ಜನ ಪದವೀಧರರಿಗೆ ಚಿನ್ನದ ಪದಕ ಹಾಗೂ ೨೨೭ ಪದವೀಧರರಿಗೆ ಪದವೀ ಪ್ರಧಾನ ಮಾಡಲಾಯಿತು.
ಬಿ. ವಿ .ವಿ ಸಂಘದ ಸದಸ್ಯರುಗಳಾದ ಮಹಾಂತೇಶ ಶೆಟ್ಟರ, ಸುರೇಶಬಾಬು ನಿಡಗುಂದಿ, ರುದ್ರಣ್ಣ ಅಕ್ಕಿಮರಡಿ, ರಾಜೇಂದ್ರ ತಪಶೆಟ್ಟಿ, ಪ್ರಭುಸ್ವಾಮಿ ಸರಗಣಾಚಾರಿ, ಕುಮಾರ ಯಳ್ಳಿಗುತ್ತಿ, ಬಿ. ವಿ. ವಿ ಸಂಘದ ಆಡಳಿತಾಧಿಕಾರಿಗಳಾದ ಡಾ ವಿಜಯಕುಮಾರ ಕಟಗಿಹಳ್ಳಿಮಠ, ಆಯ್.ಆಯ್.ಟಿ. ಮದ್ರಾಸ್‌ನ ಪ್ರಾಧ್ಯಾಪಕರಾದ ಪ್ರೋ ಜಿ. ಆರ್. ದೊಡ್ಡಗೌಡರ,ಪ್ರೋ.ಅಮ್ಲನ್ ಸೇನ್ ಗುಪ್ತಾ, ಆಯ್.ಆಯ್.ಟಿ ಮುಂಬೈನ ಪ್ರೊ. ರವೀಂದ್ರ ಗುಡಿ, ಎನ್.ಐ.ಟಿ.ಕೆ ಪ್ರೊ, ವಿಜಯಕುಮಾರ ದೇಸಾಯಿ, ಪಿಲೀಪ್ಸ್ ಕಂಪನಿಯ ಡಾ. ಟಿ.ವಿ.ರವಿ ಕಾಲೇಜಿನ ಡೀನವರುಗಳು, ವಿಭಾಗೀಯ ಮುಖ್ಯಸ್ಥರುಗಳು, ಪ್ರಾಧ್ಯಾಪಕರುಗಳು, ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿಗಳು, ಪಾಲಕರುಗಳು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.