

ರಾಮನಗರ: ಬಡವರ ಅನ್ನ ಕೀಳುವುದು ಪಾಪದ ಕೆಲಸ. ಎಸಿ ರೂಮಿನಲ್ಲಿ ಕುಳಿತು ಗುಡಿಸಲಲ್ಲಿ ಇರುವವರ ಕಾರ್ಡ್ ಕಿತ್ತು ಹಾಕುತ್ತಿದ್ದೀರಿ ಯಾಕೆ? ಬಡವರ ಬಗ್ಗೆ ಕಾಳಜಿ ಇಲ್ಲದವರು ನೀವು ಎಂದು ಖಾರವಾಗಿಯೇ ಶಾಸಕ ಇಕ್ಬಾಲ್ ಹುಸೇನ್ ಕೆಡಿಪಿ ಸಭೆಯಲ್ಲಿ ಪಡಿತರ ಮತ್ತು ಆಹಾರ ಇಲಾಖೆ ಅಧಿಕಾರಿಗಳ ಮೇಲೆ ಹರಿಹಾಯ್ದರು.
ರಾಮನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ತಾಲೂಕು ಕೆಡಿಪಿ ಸಭೆಯಲ್ಲಿ ಬಿಪಿಎಲ್ ಕಾರ್ಡ್ ತೆಗೆದುಹಾಕುತ್ತಿರುವ ಬಗ್ಗೆ ಅಧಿಕಾರಿಗಳ ಜತೆ ಚರ್ಚಿಸುವ ವೇಳೆಯಲ್ಲಿ ಸಭೆಯಲ್ಲಿ ಗರಂ ಆಗಿ ಮಾತನಾಡಿದರು.
ಯಾವ ಮಾನದಂಡದಲ್ಲಿ ಬಿಪಿಎಲ್ ಕಾರ್ಡ್ ರದ್ದು ಪಡಿಸುತ್ತಿದ್ದೀರಿ. ಇವತ್ತು ಬಡ ಕುಟುಂಬಗಳು ಪಡಿತರದಲ್ಲೇ ಜೀವನ ಕಟ್ಟಿಕೊಂಡಿವೆ. ಯಾವುದೇ ಸರ್ವೇ ಮಾಡದೆ ಏಕಾಏಕಿ ಏಸಿ ರೂಮಿನಲ್ಲಿ ಕುಳಿತು ನಿಮ್ಮ ಅಧಿಕಾರಿ ಹೇಳಿದರೆಂದು, ಟಾರ್ಗೆಟ್ ಇದೆ ಎಂದು ಬೇಕಾಬಿಟ್ಟಿ ಬಡವರ ಕಾರ್ಡ್ ರದ್ದು ಮಾಡುತ್ತಿದ್ದೀರಿ. ಸ್ಥಳ ಪರಿಶೀಲನೆ ನಡೆಸಿದ್ದೀರಾ... ಕುಟುಂಬದಲ್ಲಿ ಯಾರೋ ಒಬ್ಬರು ಲೋನ್ ಪಡೆದರೆ ಅವರ ಬಿಪಿಎಲ್ ಕಾರ್ಡ್ ಯಾಕೆ ರದ್ದು ಮಾಡುತ್ತಿದ್ದೀರಾ .. ಅವರು ಬದುಕಬೇಡವೇ. ತಿನ್ನುವ ಅನ್ನ ಕಿತ್ತುಕೊಳ್ಳುತ್ತಿದ್ದೀರಾ, ಯಾವ ಸರ್ಕಾರವೂ ಮಾಡದ್ದನ್ನು ನೀವು ಮಾಡುತ್ತಿದ್ದೀರಿ. ಪೂರ್ವಾಪರ ಯೋಚಿಸದೆ ಕಾರ್ಡ್ ರದ್ದು ಮಾಡುತ್ತಿದ್ದೀರಿ ಎಂದು ಅಧಿಕಾರಿಗಳ ಮೇಲೆ ಶಾಸಕರು ಆಕ್ರೋಶ ಹೊರಹಾಕಿದರು.
ಶಾಸಕರ ಪ್ರಶ್ನೆಗೆ ಉತ್ತರಿಸಿದ ಅಧಿಕಾರಿಗಳು, ಸರ್ಕಾರದ ನಿರ್ದೇಶನ ಹಾಗೂ ತೆರಿಗೆದಾರರು ಮತ್ತು ಜಿಎಸ್ಟಿ ಹೊಂದಿರುವ ಕುಟುಂಬವನ್ನು ಬಿಪಿಎಲ್‌ನಿಂದ ಕೈ ಬಿಡಲಾಗುತ್ತಿದೆ ಎಂದರು. ಆಗ ಶಾಸಕರು ಮಧ್ಯ ಪ್ರವೇಶಿಸಿ ಕನಕಪುರ ಕ್ಷೇತ್ರದಲ್ಲಿ ಎಷ್ಟು ಕಾರ್ಡ್ ರದ್ದು ಮಾಡಿದ್ದೀರಾ ಎಂದು ಪ್ರಶ್ನಿಸಿದರು. ಕನಕಪುರದಲ್ಲಿ 200 ಕಾರ್ಡ್ ರದ್ದು ಪಡಿಸಲಾಗಿದೆ ಎಂದು ಅಧಿಕಾರಿ ಹೇಳಿದ ತಕ್ಷಣವೇ ಮತ್ತೊಮ್ಮೆ ಸಿಟ್ಟಾದ ಶಾಸಕರು ಡಿಸಿಎಂ ಕ್ಷೇತ್ರ ಎಂದು ಕೇವಲ 200 ಕಾರ್ಡ್ ರದ್ದುಪಡಿಸಿದ್ದಿರಿ. ಸಾಮಾನ್ಯ ಕ್ಷೇತ್ರ ಎಂದು ರಾಮನಗರದಲ್ಲಿ 900 ಕಾರ್ಡ್ ರದ್ದು ಪಡಿಸಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇನ್ನು ಮುಂದೆ ಬಡವರ ಕಾರ್ಡ್ ಕೀಳಬಾರದು, ಮಂತ್ರಿಗಳು, ಕಮಿಷನರ್ ಬಳಿ ನಾನೇ ಮಾತನಾಡುತ್ತೇನೆ. ಮನೆ ಮನೆ ಭೇಟಿ ನೀಡಿ ನೈಜತೆ ಪರಿಶೀಲನೆ ಮಾಡಿ ಎಂದು ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದರು.
ಕಚೇರಿ ಬಿಟ್ಟು ಗ್ರಾಮಗಳ ಕಡೆ ಹೆಜ್ಜೆ ಹಾಕಿ: ತಾಲೂಕಿನಲ್ಲಿ ನಿರೀಕ್ಷೆಯಂತೆ ಮಳೆಯಾಗಿಲ್ಲ. ರೈತರ ನೆರವಿಗೆ ಕೃಷಿ ಇಲಾಖೆ ಸೇರಿ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಧಾವಿಸಬೇಕು. 15 ದಿನದಲ್ಲಿ ಉತ್ತಮ ಮಳೆಯಾಗದಿದ್ದರೆ ಜಿಲ್ಲೆಯನ್ನು ಮತ್ತೊಮ್ಮೆ ಬರಪೀಡಿತ ಎಂದು ಘೋಷಣೆ ಮಾಡಬೇಕಾಗುತ್ತದೆ. ಅಧಿಕಾರಿಗಳು ಕಚೇರಿಗಳನ್ನು ಬಿಟ್ಟು ರೈತರ ಕಷ್ಟ ಕೇಳಬೇಕು ಎಂದರು.