

ಸಿದ್ದಾಪುರ: ತಾಲೂಕಿನ ವಾಜಗೋಡ ಗ್ರಾಪಂ ವ್ಯಾಪ್ತಿಯ ದಾನಮಾವ ಕಣಬೆಕುಳಿಯ ಕನ್ನೆ ದ್ಯಾವಾ ಹಸ್ಲರ್ ಇವಳಿಗೆ ತಹಸೀಲ್ದಾರ ಮಂಜುಳಾ ಎಸ್.ಭಜಂತ್ರಿ ಅವರು ಪಡಿತರ ಚೀಟಿ ಪಡೆಯುವವರೆಗೆ ಲಂಬಾಪುರ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ನೀಡುವಂತೆ ಸೂಚನೆ ನೀಡಿ ಜನರ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಬಡ ವಿಧವೆಗೆ ಬೇಕು ಸರ್ಕಾರಿ ಸೌಲಭ್ಯ ಶೀರ್ಷಿಕೆಯಡಿ ಜೂ. 26ರಂದು ವಿಜಯವಾಣಿ ಸಮಗ್ರ ವರದಿ ಮಾಡಿತ್ತು. ಇದಕ್ಕೆ ಸ್ಪಂದಿಸಿದ ತಹಸೀಲ್ದಾರ್ ಮಂಜುಳಾ ಎಸ್. ಭಜಂತ್ರಿ, ಪಡಿತರ ವ್ಯವಸ್ಥೆ ಮಾಡಿದ್ದಲ್ಲದೆ ಅವಳಿಂದ ಬಿಪಿಎಲ್ ಕಾರ್ಡಿಗಾಗಿ ಅರ್ಜಿ ಪಡೆದು ಮಾನವೀಯತೆ ಮೆರೆದಿದ್ದಾರೆ.
ಅಧಿಕಾರಿಗಳು ಕ್ರಿಯಾಶೀಲರಾಗಿದ್ದರೆ ಸಮಸ್ಯೆಗಳಿಗೆ ತಕ್ಷಣ ಸ್ಪಂದನೆ ಸಿಗುತ್ತದೆ ಎನ್ನುವುದಕ್ಕೆ ಇದೊಂದು ಉತ್ತಮ ಉದಾಹರಣೆ ಆಗಿದೆ. ವಿಧವೆಗೆ ಪಡಿತರ ವ್ಯವಸ್ಥೆ ಮಾಡಿಕೊಟ್ಟಿರುವ ಕುರಿತು ಸ್ಥಳೀಯರು ಹರ್ಷ ವ್ಯಕ್ತಪಡಿಸಿದ್ದಾರೆ.