ಬಜೆಟ್‌ನಲ್ಲಿ ಮದ್ದೂರು ಕ್ಷೇತ್ರಕ್ಕೆ ಆದ್ಯತೆ

oppo_2
oppo_2
Published on

ಮದ್ದೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡನೆ ಮಾಡಲಿರುವ ಬಜೆಟ್‌ನಲ್ಲಿ ತಾಲೂಕಿನಗೆ ವಿಶೇಷ ಅನುದಾನ ನೀಡುವ ಭರವಸೆ ಇದೆ ಎಂದು ಶಾಸಕ ಕೆ.ಎಂ.ಉದಯ್ ವಿಶ್ವಾಸ ವ್ಯಕ್ತಪಡಿಸಿದರು.

ತಾಲೂಕಿನ ಬೆಸಗರಹಳ್ಳಿ ಅಡ್ಡರಸ್ತೆಯಲ್ಲಿ 4.99 ಕೋಟಿ ರೂ.ವೆಚ್ಚದ ಕೆರಗೋಡು ಶಾಖಾ ನಾಲೆಯಡಿ ಬರುವ 24ನೇ ವಿತರಣಾ ನಾಲೆಯ 4ನೇ ಮೈನರ್ ಮತ್ತು ರಸ್ತೆ ಅಭಿವೃದ್ಧಿ ಕಾಮಗಾರಿಗೆ ಗುರುವಾರ ಚಾಲನೆ ನೀಡಿ ಅವರು ಮಾತನಾಡಿದರು. ಪಟ್ಟಣದ ಪೇಟೆ ಬೀದಿ ವಿಸ್ತರಣೆ, ಕೆಮ್ಮಣ್ಣು ನಾಲೆ ಅಭಿವೃದ್ಧಿ, ವಿದ್ಯುತ್ ವಿತರಣಾ ಕೇಂದ್ರಗಳು, ನೂತನ ನ್ಯಾಯಾಲಯ ಕಟ್ಟಡ ನಿರ್ಮಾಣ ಸೇರಿದಂತೆ ಹಲವಾರು ಅಭಿವೃದ್ಧಿ ಕಾರ್ಯಗಳಿಗೆ ಬಜೆಟ್‌ನಲ್ಲಿ ವಿಶೇಷ ಅನುದಾನ ನೀಡುವ ವಿಶ್ವಾಸವಿದೆ ಎಂದರು.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ಬಿಜೆಪಿ ಮುಖಂಡರು ಶೋಕಿಗಾಗಿ ನಾಟಿ ಮಾಡುವ ಮೂಲಕ ಪ್ರಚಾರ ಪಡೆದಿದ್ದಾರೆ. ಇವರಿಗೆ ರೈತರ ಬಗ್ಗೆ ಕಾಳಜಿಯಿಲ್ಲ. ಪ್ರಚಾರ ಪಡೆಯುವ ಉದ್ದೇಶಕ್ಕಾಗಿ ನಾಟಿ ಮಾಡಿದ್ದಾರೆ. ಪಕ್ಷದಲ್ಲೇ ಪರಸ್ಪರ ಕಿತ್ತಾಡಿಕೊಳ್ಳುತ್ತಿದ್ದಾರೆ. ಹೀಗಿರುವಾಗ ನಮ್ಮ ಪಕ್ಷದ, ಸರ್ಕಾರದ ಯೋಜನೆಗಳ ಬಗ್ಗೆ ಇಲ್ಲದ ಸಲ್ಲದ ಆರೋಪ ಮಾಡುವ ನೈತಿಕತೆ ಇವರಿಗೆ ಏನಿದೆ. ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ಧಿ ಕೆಲಸಗಳಾಗುತ್ತಿಲ್ಲ ಎಂದು ವಿರೋಧ ಪಕ್ಷದವರು ಅನಗತ್ಯವಾಗಿ ಅಪಪ್ರಚಾರ ಮಾಡುತ್ತಿದ್ದಾರೆ. ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ಜಾರಿಗೆ ತರುವ ಜತೆಗೆ ಅಭಿವೃದ್ಧಿ ಕಾರ್ಯಕ್ರಮಗಳು ನಡೆಯುತ್ತಿವೆ ಎಂದು ಹೇಳಿದರು.

ಬಿಜೆಪಿ ಸರ್ಕಾರವಿದ್ದಾಗ ಶೇ.40 ಕಮಿಷನ್ ತೆಗೆದುಕೊಳ್ಳುತ್ತಿದ್ದರು. ಈಗ ಅವರು ನಿರುದ್ಯೋಗಿಗಳಾಗಿರುವುದರಿಂದ ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ಮಾತನಾಡುತ್ತಾರೆ. ಇದಕ್ಕೆ ಮಹತ್ವ ನೀಡುವ ಅವಶ್ಯಕತೆ ಇಲ್ಲ ಎಂದರು.

ಮನ್‌ಮುಲ್ ನಿರ್ದೇಶಕ ಹರೀಶ್, ಗ್ರಾಪಂ ಉಪಾಧ್ಯಕ್ಷೆ ಶಾಹಿನಾ ತಾಜ್, ಸದಸ್ಯೆ ಶೋಭಾ, ಮುಖಂಡರಾದ ಗೋಪಿ, ಪ್ರತಿಭಾ ತಿಮ್ಮೇಗೌಡ, ಬಾಬು, ಸುಧಾಕರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net