

ಕುಮಟಾ: ತಾಲೂಕಿನ ಸಂತೇಗುಳಿಯ ಬಸ್ತಿಕೇರಿಯಲ್ಲಿ ಅಂಬೇಡ್ಕರ್ ವಸತಿ ಶಾಲೆ ನಿರ್ವಣಕ್ಕೆ ನಿವೇಶನವನ್ನು ತಹಸೀಲ್ದಾರ್ ಮೇಘರಾಜ ನಾಯ್ಕ ಅವರು ವಸತಿ ಶಾಲೆಯ ಪ್ರಾಚಾರ್ಯರಿಗೆ ಹಸ್ತಾಂತರಿಸುವ ಮೂಲಕ ಶಾಲೆಯ ಜಾಗದ ಸಮಸ್ಯೆಗೆ ತೆರೆ ಎಳೆದರು.
ಪಟ್ಟಣದ ಹೊಸ ಮೀನು ಮಾರುಕಟ್ಟೆ ಬಳಿ ಬಾಡಿಗೆ ಕಟ್ಟಡದಲ್ಲಿ ಅಂಬೇಡ್ಕರ್ ವಸತಿ ಶಾಲೆ ನಡೆಸಲಾಗುತ್ತಿದ್ದು, ಸ್ವಂತ ಜಾಗಕ್ಕಾಗಿ ಸಾಕಷ್ಟು ಹುಡುಕಾಟ ನಡೆದಿತ್ತು. ಸರ್ಕಾರದ ಮಟ್ಟದಲ್ಲಿ ತೀವ್ರ ಪ್ರಯತ್ನ ಮಾಡಿ ವಸತಿ ಶಾಲೆಗೆ ಕೋಟ್ಯಂತರ ರೂ. ಅನುದಾನ ತರುವಲ್ಲಿ ಯಶಸ್ವಿಯಾಗಿದ್ದ ಶಾಸಕ ದಿನಕರ ಶೆಟ್ಟಿ ಅವರಿಗೆ ಅಂಬೇಡ್ಕರ್ ವಸತಿ ಶಾಲೆಗಾಗಿ ನಿವೇಶನ ಹುಡುಕುವುದೇ ದೊಡ್ಡ ತಲೆನೋವಾಗಿ ಪರಿಣಮಿಸಿತ್ತು. ಈ ವೇಳೆ ಸಂತೇಗುಳಿ ಪಂಚಾಯಿತಿ ವ್ಯಾಪ್ತಿಯಲ್ಲಿ ಸಾಕಷ್ಟು ಸರ್ಕಾರಿ ಭೂಮಿ ಇರುವ ಕುರಿತು ಗುರುತಿಸಿ ಶಾಸಕರ ಸಲಹೆಯಂತೆ ತಹಸೀಲ್ದಾರ್ ಮೇಘರಾಜ ನಾಯ್ಕ ಮುಂದಿನ ಕ್ರಮ ಕೈಗೊಂಡಿದ್ದರು.
ಶನಿವಾರ ವಸತಿ ಶಾಲೆಗಾಗಿ ನಿಗದಿತವಾದ ಸ್ಥಳಕ್ಕೆ ಗ್ರಾಮ ಲೆಕ್ಕಿಗ, ಕಂದಾಯ ನಿರೀಕ್ಷಕ, ಸರ್ವೆ ಅಧಿಕಾರಿಗಳೊಂದಿಗೆ ತೆರಳಿದ ತಹಸೀಲ್ದಾರ್ ಅವರು, ಅಂಬೇಡ್ಕರ್ ವಸತಿ ಶಾಲೆಯ ಪ್ರಾಚಾರ್ಯ ನಾಗರಾಜ ಹೆದ್ದಾರಿಮನೆ ಅವರಿಗೆ ಜಾಗದ ಮಾಹಿತಿ ವಿವರಿಸಿ ಭೂ ಸಂಬಂಧಿತ ದಾಖಲೆಗಳನ್ನು ಹಸ್ತಾಂತರಿಸಿದರು.
ಈ ಕುರಿತು ವಿಜಯವಾಣಿಯೊಂದಿಗೆ ಮಾತನಾಡಿದ ತಹಸೀಲ್ದಾರ್ ಮೇಘರಾಜ ನಾಯ್ಕ, ಸಂತೇಗುಳಿಯ ಬಸ್ತಿಕೇರಿಯಲ್ಲಿ ಒಟ್ಟು 9 ಎಕರೆ 34ಗುಂಟೆ ವಿಶಾಲ ಜಾಗವನ್ನು ವಸತಿ ಶಾಲೆಗಾಗಿ ಹಸ್ತಾಂತರಿಸಿದ್ದೇವೆ. ಎಲ್ಲ ಮೂಲ ಸೌಲಭ್ಯಗಳೂ ಇರುವ ಹಾಗೂ ಮುಖ್ಯ ರಸ್ತೆಯಿಂದ ಕೆಲವೇ ಮೀಟರ್ ದೂರದಲ್ಲಿರುವುರಿಂದ ಹೆಚ್ಚು ಅನುಕೂಲವೂ ಆಗಲಿದೆ. ಈಗಾಗಲೇ ಜಾಗವನ್ನು ಸಮತಟ್ಟು ಮಾಡಿ, ಗಿಡಗಂಟಿ ಸ್ವಚ್ಛಗೊಳಿಸುವ ಕಾರ್ಯ ಆರಂಭವಾಗಿದೆ ಎಂದರು.
ಲಭ್ಯ ಮಾಹಿತಿಯ ಪ್ರಕಾರ ಅಂಬೇಡ್ಕರ್ ವಸತಿ ಶಾಲೆಗಾಗಿ ಒಟ್ಟಾರೆ 34 ಕೋಟಿ ರೂ. ಯೋಜನೆಯಲ್ಲಿ ಈಗಾಗಲೇ 18.5 ಕೋಟಿ ರೂ. ಮಂಜೂರಾಗಿದ್ದು ಶೀಘ್ರದಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿ ಆರಂಭಗೊಳ್ಳಲಿದೆ.
ಸಂತೇಗುಳಿಯಂತಹ ಹಿಂದುಳಿದ ಪ್ರದೇಶದಲ್ಲಿ ವಸತಿ ಶಾಲೆ ಬೇಕು ಎಂಬ ಬಹುಕಾಲದ ಬೇಡಿಕೆ ಈಡೇರುತ್ತಿದೆ. ಅಂಬೇಡ್ಕರ್ ವಸತಿ ಶಾಲೆಯಿಂದ ಈ ಭಾಗದ ತಳವರ್ಗದ ಶೈಕ್ಷಣಿಕ ಮತ್ತು ಸಾಮಾಜಿಕ ಉನ್ನತಿಗೆ ಸಹಕಾರಿಯಾಗಲಿದೆ. ಊರಿನ ಅಭಿವೃದ್ಧಿಗೂ ಪೂರಕವಾಗಲಿದೆ. ವಸತಿ ಶಾಲೆಗಾಗಿ ಜಾಗದ ಸಮಸ್ಯೆಯನ್ನು ಸರಿಯಾಗಿ ಬಗೆಹರಿಸಿದ್ದಕ್ಕೆ ಶಾಸಕರು ಹಾಗೂ ಅಧಿಕಾರಿಗಳಿಗೆ ಕೃತಜ್ಞತೆ. | ವಿನಾಯಕ ಭಟ್ ಸಂತೇಗುಳಿ ಪಂಚಾಯಿತಿ ಮಾಜಿ ಅಧ್ಯಕ್ಷ