ಬಂಡೀಪುರ ರಾತ್ರಿ ವಾಹನ ಸಂಚಾರಕ್ಕೆ ಅವಕಾಶ ಬೇಡ

02-APR-GPT-
Published on

ಗುಂಡ್ಲುಪೇಟೆ: ಬಂಡೀಪುರ ಮಾರ್ಗದ ರಸ್ತೆಗಳಲ್ಲಿ ರಾತ್ರಿ ವೇಳೆ ವಾಹನ ಸಂಚಾರಕ್ಕೆ ಅವಕಾಶ ನೀಡಬಾರದು ಎಂದು ಒತ್ತಾಯಿಸಿ ರೈತ ಸಂಘಟನೆ ವತಿಯಿಂದ ಪ್ರಭಾರ ತಹಸೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು.

ಸಾಮೂಹಿಕ ನಾಯಕತ್ವದ ರೈತ ಸಂಘ ಹಾಗೂ ಹಸಿರು ಸೇನೆಯ ತಾಲೂಕು ಅಧ್ಯಕ್ಷ ಲೋಕೇಶ್ ನೇತೃತ್ವದಲ್ಲಿ ಪಟ್ಟಣದ ಬಸವೇಶ್ವರ ಸರ್ಕಲ್‌ನಿಂದ ತಾಲೂಕು ಕಚೇರಿಗೆ ಮೆರವಣಿಗೆ ಮೂಲಕ ಸಾಗಿ ತಾಲೂಕು ಕಚೇರಿ ಎದುರು ಸಮಾವೇಶಗೊಂಡ ರೈತ ಸಂಘದ ಪದಾಧಿಕಾರಿಗಳು ರಾಜ್ಯ ಸರ್ಕಾರ ಬಂಡೀಪುರದಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿಗಳನ್ನು ರಾತ್ರಿ ಸಂಚಾರಕ್ಕೆ ಮುಕ್ತಗೊಳಿಸಲು ಮುಂದಾಗಿರುವ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ನಾನಾ ಬೇಡಿಕೆಗಳನ್ನು ಈಡೇರಿಸುವಂತೆ ರೈತರು ಹಲವು ವರ್ಷಗಳಿಂದ ಒತ್ತಾಯಿಸುತ್ತಾ ಬಂದಿದ್ದರೂ ಅದನ್ನು ಪರಿಗಣಿಸದ ಸರ್ಕಾರ ಕಾಂಗ್ರೆಸ್ ನಾಯಕರನ್ನು ಮೆಚ್ಚಿಸಲು ಹಾಗೂ ಕೇರಳದ ಲಾಬಿಗೆ ಮಣಿದು ರಾತ್ರಿ ಸಂಚಾರ ಬಂದ್ ಸಡಿಲಗೊಳಿಸಲು ಮುಂದಾಗಿದೆ. ಇದಕ್ಕೆ ಅವಕಾಶ ನೀಡಿದ್ದಲ್ಲಿ ಈ ರಸ್ತೆಗಳಲ್ಲಿ ಹಗಲಿಗಿಂತ ರಾತ್ರಿ ವೇಳೆಯಲ್ಲಿ ಅಧಿಕ ವಾಹನಗಳು ಸಂಚರಿಸುವುದರಿಂದ ಅರಣ್ಯ ಮತ್ತು ವನ್ಯಜೀವಿಗಳಿಗೆ ಆಪತ್ತು ಕಾದಿದೆ. ಅಲ್ಲದೆ ಕಾಡಂಚಿನ ಗ್ರಾಮಗಳಲ್ಲಿ ಮಾನವ ಮತ್ತು ವನ್ಯಜೀವಿ ಸಂಘರ್ಷಕ್ಕೆ ಕಾರಣವಾಗುತ್ತದೆ. ಆದ್ದರಿಂದ ಯಾವುದೇ ಕಾರಣಕ್ಕೂ ಸರ್ಕಾರ ಇದಕ್ಕೆ ಅವಕಾಶ ನೀಡಬಾರದು ಎಂದು ಒತ್ತಾಯಿಸಿ ಪ್ರಭಾರ ತಹಸೀಲ್ದಾರ್ ಜಯಪ್ರಕಾಶ್ ಅವರಿಗೆ ಮನವಿ ಪತ್ರ ನೀಡಿದರು.

ಷಣ್ಮುಖಸ್ವಾಮಿ, ಗಣೇಶ್, ಸೋಮಶೇಖರ, ಪಾಪಣ್ಣ, ಸುದರ್ಶನ್, ಮಂಜು, ಅರಸಶೆಟ್ಟಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net