‘ಬಂಡೀಪುರ’ ಪಾದಯಾತ್ರೆಗೆ ಸಿದ್ಧತೆ

Published on

ಗುಂಡ್ಲುಪೇಟೆ: ಬಂಡೀಪುರದಲ್ಲಿ ರಾತ್ರಿ ಸಂಚಾರಕ್ಕೆ ಅವಕಾಶ ನೀಡಬಾರದು ಎಂದು ಒತ್ತಾಯಿಸಿ ಪರಿಸರವಾದಿಗಳು ಹಾಗೂ ಸಂಘ, ಸಂಸ್ಥೆಗಳು ಏ.6ರಂದು ಹಮ್ಮಿಕೊಂಡಿರುವ ಪಾದಯಾತ್ರೆಗೆ ಸಿದ್ಧತೆ ನಡೆದಿದೆ.

ಇದೇ ವಿಷಯಕ್ಕೆ ಸಂಬಂಧಿಸಿದಂತೆ 2018ರಲ್ಲಿ ಸೇವ್ ಬಂಡೀಪುರ ಹೆಸರಿನಲ್ಲಿ ಕೈಗೊಂಡಿದ್ದ ಹೋರಾಟದ ಮಾದರಿಯನ್ನೇ ಈ ಬಾರಿಯೂ ಅನುಸರಿಸಲಾಗುತ್ತಿದೆ. ಕಾಡಂಚಿನ ಗ್ರಾಮಗಳ ಜನರು, ಸ್ಥಳೀಯರು ಹಾಗೂ ಹೊರಗಿನ ಪರಿಸರ ಪ್ರೇಮಿಗಳು, ವಿದ್ಯಾರ್ಥಿಗಳು, ರೈತ ಹಾಗೂ ಕನ್ನಡ ಸಂಘಟನೆಗಳ ಮುಖಂಡರು, ಸ್ವಯಂ ಸೇವಾ ಸಂಸ್ಥೆಗಳು, ಹೆಸರಾಂತ ಪರಿಸರವಾದಿಗಳು ಹೋರಾಟಕ್ಕೆ ಬೆಂಬಲ ಸೂಚಿಸಿ ತಾವೂ ಪಾಲ್ಗೊಳ್ಳುವುದಾಗಿ ತಿಳಿಸಿದ್ದಾರೆ. ಸುಮಾರು 300 ಜನರು ಭಾಗವಹಿಸುವ ನಿರೀಕ್ಷೆಯಿದೆ.

ಅಂದು ಸುಲ್ತಾನ್ ಭತ್ತೇರಿ ರಸ್ತೆಯಲ್ಲಿರುವ ಕಗ್ಗಳದಹುಂಡಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ 2.5 ಕಿಮೀ ಅಂತರದಲ್ಲಿರುವ ಮದ್ದೂರು ಚೆಕ್ ಪೋಸ್ಟ್‌ಗೆ ಪಾದಯಾತ್ರೆ ಮೂಲಕ ಸಾಗಿ ಸಾರ್ವಜನಿಕರಿಗೆ ಅರಿವು ಮೂಡಿಸಲಾಗುವುದು. ಬಂಡೀಪುರ ಹುಲಿ ಯೋಜನೆಯ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಪ್ರಭಾಕರನ್ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು. ಬಿಸಿಲಿನ ತಾಪ ಹೆಚ್ಚಾಗಿರುವುದರಿಂದ ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವವರಿಗೆ ಕುಡಿಯುವ ನೀರು, ಮಜ್ಜಿಗೆ, ಮಧ್ಯಾಹ್ನ ಊಟದ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ ಎಂದು ಸಂಘಟಕರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net