ಬಂಡಳ್ಳಿ ಗ್ರಾಮದಲ್ಲೇ ವಿದ್ಯಾರ್ಥಿ ನಿಲಯ ಸ್ಥಾಪಿಸಿ

28 HANUR 1
?????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????
Published on

ಹನೂರು: ಹನೂರಿಗೆ ಸ್ಥಳಾಂತರಿಸಿರುವ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ನಿಲಯವನ್ನು ಬಂಡಳ್ಳಿ ಗ್ರಾಮದಲ್ಲೇ ಸ್ಥಾಪಿಸಬೇಕು, ಇಲ್ಲವಾದಲ್ಲಿ ಸಮುದಾಯದ ವತಿಯಿಂದ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಕೊಳ್ಳೇಗಾಲ ಹಾಗೂ ಹನೂರು ತಾಲೂಕು ನಾಯಕರ ಸಂಘದ ಅಧ್ಯಕ್ಷ ಜಗದೀಶ್‌ನಾಯ್ಕ ಎಚ್ಚರಿಸಿದರು.

ಪಟ್ಟಣದ ಲೋಕೋಪಯೋಗಿ ಇಲಾಖೆಯ ವಸತಿ ಗೃಹದ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ನಾಯಕ ಸಮುದಾಯದ ಮುಖಂಡರ ಸಭೆಯಲ್ಲಿ ಮಾತನಾಡಿದರು.

ಬಂಡಳ್ಳಿ ಸೇರಿದಂತೆ ಮಣಗಳ್ಳಿ, ತೆಳ್ಳನೂರು, ಕೊತ್ತನೂರು ಹಾಗೂ ಶಾಗ್ಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಯಕ ಹಾಗೂ ಗಿರಿಜನರ ಮಕ್ಕಳಿಗೆ ಅನುಕೂಲ ಕಲ್ಪಿಸುವ ಸಲುವಾಗಿ ಈ ಹಿಂದೆ ಶಾಸಕರಾಗಿದ್ದ ಆರ್.ನರೇಂದ್ರ ಅವರು 4.5 ಕೋಟಿ ರೂ.ವೆಚ್ಚದಲ್ಲಿ ಕ್ರಿಯಾಯೋಜನೆ ತಯಾರಿಸಿ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ ಬಂಡಳ್ಳಿ ಗ್ರಾಮಕ್ಕೆ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯವನ್ನು ಮಂಜೂರು ಮಾಡಿಸಿದ್ದರು. ಆದರೆ ಇದೀಗ ಶಾಸಕ ಎಂ.ಆರ್. ಮಂಜುನಾಥ್ ಅವರು ಬಂಡಳ್ಳಿ ಗ್ರಾಮಕ್ಕೆ ಮಂಜೂರಾಗಿದ್ದ ಹಾಸ್ಟೆಲನ್ನು ಹನೂರಿಗೆ ಸ್ಥಳಾಂತರಿಸಿ ಕಟ್ಟಡ ನಿರ್ಮಿಸಲು ನಿರ್ಧರಿಸಿದ್ದಾರೆ. ಇಲ್ಲಿ ವಿದ್ಯಾರ್ಥಿ ನಿಲಯ ಸ್ಥಾಪನೆಯಾದರೆ 5 ಗ್ರಾಪಂ ವ್ಯಾಪ್ತಿಯ ಎಸ್ಟಿ ವಿದ್ಯಾರ್ಥಿಗಳಿಗೆ ಅನನುಕೂಲವಾಗಲಿದೆ. ಆದ್ದರಿಂದ ಶಾಸಕರು ಈ ಬಗ್ಗೆ ಮನದಟ್ಟು ಮಾಡಿಕೊಂಡು ಬಂಡಳ್ಳಿಯಲ್ಲೇ ಹಾಸ್ಟೆಲ್ ಸ್ಥಾಪಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಉಪಾಧ್ಯಕ್ಷ ಉದ್ದನೂರು ಸಿದ್ದರಾಜು ಮಾತನಾಡಿ, ಕ್ಷೇತ್ರ ವ್ಯಾಪ್ತಿಯಲ್ಲಿ ಸುಮಾರು 45 ಸಾವಿರಕ್ಕೂ ಹೆಚ್ಚು ನಾಯಕ ಸಮುದಾಯದ ಜನರಿದ್ದಾರೆ. ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ. ಆದ್ದರಿಂದ ಶಾಸಕ ಎಂ.ಆರ್.ಮಂಜುನಾಥ್ ಅವರು ಸರ್ಕಾರದಿಂದ ಅನುದಾನ ತಂದು ತಾಲೂಕು ಕೇಂದ್ರ ಹನೂರಿನಲ್ಲಿ ಹಾಸ್ಟೆಲ್ ಸ್ಥಾಪಿಸಲಿ. ಇದಕ್ಕೆ ಸಮುದಾಯದ ವತಿಯಿಂದ ಸಂಪೂರ್ಣ ಸಹಕಾರ ನೀಡಲಾಗುವುದು. ಆದರೆ ಮಂಜೂರಾಗಿರುವ ಹಾಸ್ಟೆಲ್ ಬಂಡಳ್ಳಿ ಗ್ರಾಮದಲ್ಲೇ ಸ್ಥಾಪನೆಯಾಗಬೇಕು ಎಂದು ಒತ್ತಾಯಿಸಿದರು.

ಸಭೆಯಲ್ಲಿ ಪರಿಶಿಷ್ಟ ಪಂಗಡ ಜಿಲ್ಲಾಧ್ಯಕ್ಷ ನಾಗರಾಜು, ಮುಖಂಡರಾದ ಪಾಳ್ಯ ಕೃಷ್ಣ, ಕುನ್ನನಾಯಕ, ಮಲೆಯಪ್ಪನಾಯ್ಕ, ಶ್ರೀನಿವಾಸ್, ರಂಗಸ್ವಾಮಿನಾಯ್ಕ, ನಾಗರಾಜುನಾಯ್ಕ, ಗೋವಿಂದನಾಯ್ಕ, ಮಹದೇವನಾಯ್ಕ, ಮೂರ್ತಿನಾಯ್ಕ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net