

ಬಾಗಲಕೋಟೆ: ಬಂಜಾರಾ ಅಭಿವೃದ್ಧಿ ನಿಗಮದ ಅಧ್ಯಕ್ಷ, ಕುಡಚಿ ಶಾಸಕ ಪಿ.ರಾಜೀವ್ ಬಂಜಾರಾ ಸಮುದಾಯದ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ತಮ್ಮ ಸ್ವಾರ್ಥಕ್ಕಾಗಿ ಸಮಾಜವನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಸಮುದಾಯದ ನಿರ್ಲಕ್ಷ್ಯ ಸಲ್ಲ ಎಂದು ಜಿಲ್ಲಾ ಬಂಜಾರಾ ಸಮುದಾಯದ ಮುಖಂಡ ರಾಜು ಲಮಾಣಿ ಆರೋಪಿಸಿದರು.
ಶಾಸಕ ಪಿ.ರಾಜೀವ ಈಚೆಗೆ ಜಿಲ್ಲೆಯ ಪ್ರವಾಸ ಕೈಗೊಂಡಿದ್ದರು. ಜಿಲ್ಲೆಯ ಯಾವುದೇ ತಾಂಡಾಗಳಿಗೆ ಭೇಟಿ ನೀಡದೆ, ಸಮಾಜದ ಪ್ರಮುಖರೊಂದಿಗೆ ಸಭೆ ಮಾಡದೇ ಹೋಗಿದ್ದಾರೆ. ತಮ್ಮ ವೈಯಕ್ತಿಕ ಹಿತಾಸಕ್ತಿಗೆ ಸಮಾಜವನ್ನು ಬಲಿಕೊಡುವ ಕೆಲಸ ನಡೆಯುತ್ತಿದ್ದು, ಕೂಡಲೇ ಇದಕ್ಕೆ ಕಡಿವಾಣ ಬೀಳಬೇಕು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ಬಂಜಾರ ಸಮಾಜವು ಇಂದಿಗೂ ಕಷ್ಟಕರ ಪರಿಸ್ಥಿತಿ ಎದುರಿಸುತ್ತಿದೆ. ಜಿಲ್ಲೆಯಲ್ಲಿ ಬಂಜಾರ ಸಮುದಾಯ ಅನೇಕ ಸಮಸ್ಯೆ, ಸಂಕಷ್ಟಗಳಿಗೆ ಯಾರು ಸ್ಪಂದಿಸುತ್ತಿಲ್ಲ. ಜಲ್ಲಾ ಕೇಂದ್ರ ಸ್ಥಾನದಲ್ಲಿ ಒಂದು ಬಂಜಾರ ಭವನವಿಲ್ಲ. ಬಾಗಲಕೋಟೆ ನಗರ ಸೇರಿದಂತೆ ಜಿಲ್ಲೆಯ ಹಲವೆಡೆ ಇಂದಿಗೂ ಸಮುದಾಯದವರು ಮತಾಂತರ ಪಿಡುಗಿಗೆ ಒಳಗಾಗುತ್ತಿದ್ದಾರೆ. ಬಂಜಾರಾ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಪಿ.ರಾಜೀವ ಗಮನ ಹರಿಸಿಲ್ಲ. ರಾಜಕೀಯಗೋಸ್ಕರ ಸಮುದಾಯದ ಹೆಸರು ಬಳಸಿಕೊಳ್ಳವುದು ಸರಿಯಲ್ಲ ಎಂದು ಎಚ್ಚರಿಸಿದರು.
ಬಂಜಾರ ಸಮಾಜದ ಜಿಲ್ಲಾಧ್ಯಕ್ಷ ಬಲರಾಮ ನಾಯಕ, ೪೦ ವರ್ಷದ ರಾಜಕೀಯ ವ್ಯವಸ್ಥೆಯಲ್ಲಿ ಯಾವ ಪಕ್ಷಗಳು ಬಂಜಾರ ಸಮುದಾಯಕ್ಕೆ ಸೂಕ್ತ ಪ್ರಾತಿನಿದ್ಯ ನೀಡಿಲ್ಲ. ಸಮುದಾಯ ನಿರ್ಲಕ್ಷಿಸುವ ಯಾವುದೇ ಪಕ್ಷವಾಗಲಿ ಈ ಬಾರಿ ತಕ್ಕ ಪಾಠ ಕಲಿಸುತ್ತೇವೆ ಎಂದು ಹೇಳಿದರು.
ಮುಖಂಡರಾದ ರಮೇಶ ನಾಯಕ, ವಿಷ್ಣು ಲಮಾಣಿ,ಚಂದ್ರಶೇಖರ ರಾಠೋಡ, ಲಿಂಗಪ್ಪ ಚೌವಾಣ, ಆನಂದ ರಾಠೋಡ ಸುದ್ದಿಗೋಷ್ಠಿ ಇದ್ದರು.