ಬೊಂಬೆನಾಡಿನಿಂದ ಡಿಸಿಎಂ ಸ್ಪರ್ಧಿಸುವರೇ?

Channapatna-toys-ChirodeepChaudhuri-GoogleApp
Published on

*ಚನ್ನಪಟ್ಟಣದಲ್ಲಿಂದು ಡಿ.ಕೆ. ಶಿವಕುಮಾರ್ ಟೆಂಪಲ್ ರನ್

* ಎದುರಾಳಿಗಳಿಗೆ ನಡುಕ ಹುಟ್ಟಿಸುವ ಯತ್ನ

* ರಾಜಕೀಯ ವಲಯದಲ್ಲಿ ಚರ್ಚೆ

*ಉಪ ಚುನಾವಣೆಯಲ್ಲಿ ಸೋಲಿನ ಸೇಡು ತೀರಿಸಿಕೊಳ್ಳುವ ಲೆಕ್ಕಾಚಾರ

ಗಂಗಾಧರ್ ಬೈರಾಪಟ್ಟಣ ರಾಮನಗರ

ಲೋಕಸಭೆ ಚುನಾವಣೆಯಲ್ಲಿ ಸಹೋದರನ ಸೋಲಿನ ನಂತರ ಕಂಗೆಟ್ಟಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಚನ್ನಪಟ್ಟಣದಲ್ಲಿ ಬುಧವಾರ  ಟೆಂಪಲ್ ರನ್ ನಡೆಸುವ ಮೂಲಕ ಎದುರಾಳಿಗಳಿಗೆ ನಡುಕ ಹುಟ್ಟಿಸುವ ಯತ್ನಕ್ಕೆ ಕೈ ಹಾಕಿದ್ದಾರೆ.

ಚನ್ನಪಟ್ಟಣ ಕ್ಷೇತ್ರದ ಶಾಸಕರಾಗಿದ್ದ ಎಚ್.ಡಿ.ಕುಮಾರಸ್ವಾಮಿ, ಮಂಡ್ಯದಲ್ಲಿ ಗೆದ್ದು ಸಂಸದರಾಗಿ ಕೇಂದ್ರದಲ್ಲೂ ಮಂತ್ರಿಯಾದ ನಂತರ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇದರ ಬೆನ್ನಲ್ಲೇ ಕ್ಷೇತ್ರವನ್ನು ಗಟ್ಟಿಮಾಡಿಕೊಳ್ಳಲು ಹೊರಟಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ಲೋಕಸಭೆ ಫಲಿತಾಂಶದ ನಂತರ ತಮ್ಮ ಬೇಟೆಯನ್ನು ಚನ್ನಪಟ್ಟಣದಿಂದಲೇ ಆರಂಭಿಸುತ್ತಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಸ್ಪರ್ಧಿಸುವರೇ ಡಿ.ಕೆ.ಶಿ?

ಚನ್ನಪಟ್ಟಣ ವಿಧಾನಸಭೆ ಕ್ಷೇತ್ರದಲ್ಲಿ ಅತಿ ಶೀಘ್ರದಲ್ಲಿಯೇ ಎದುರಾಗಲಿರುವ ಉಪ ಚುನಾವಣೆಯಲ್ಲಿ ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸ್ಪರ್ಧಿಸುವರೇ? ಇಂತಹದೊಂದು ಚರ್ಚೆ ಚನ್ನಪಟ್ಟಣ ರಾಜಕೀಯ ವಲಯದಲ್ಲಿ ಆರಂಭಗೊಂಡಿದೆ. ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದ ಚುನಾವಣೆಯಲ್ಲಿ ಸಹೋದರ ಡಿ.ಕೆ ಸುರೇಶ್ ಸೋಲಿನ ಸೇಡು ತೀರಿಸಿಕೊಳ್ಳುವ ಸಲುವಾಗಿ ಡಿ.ಕೆ.ಶಿವಕುಮಾರ್ ಚನ್ನಪಟ್ಟಣ ವಿಧಾನಸಭೆ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಲಿದ್ದಾರೆ ಎನ್ನುವ ಮಾತುಗಳು ಕಾಂಗ್ರೆಸ್ ವಲಯದಲ್ಲಿ ಕೇಳಿ ಬರುತ್ತಿವೆ. ಈ ಕಾರಣಕ್ಕಾಗಿಯೇ ಬುಧವಾರ ಕ್ಷೇತ್ರದ ಎಲ್ಲ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಪ್ರಮುಖ ದೇವಾಲಯಗಳಿಗೆ ಭೇಟಿ ನೀಡಿ ದೇವರ ಆರ್ಶೀವಾದ ಪಡೆದುಕೊಳ್ಳಲಿದ್ದಾರೆ ಎನ್ನುವುದು ಕಾಂಗ್ರೆಸ್ ಪಾಳಯದ ಮಾತು.

ಖೆಡ್ಡಾ ತೋಡಿದವರು

ಕ್ರಿಯಾಶೀಲ ಸಂಸದ ಎಂದೇ ಗುರುತಿಸಿಕೊಂಡಿದ್ದ ಡಿ.ಕೆ.ಸುರೇಶ್ ಅವರು ಈ ಬಾರಿಯೂ ಗೆಲುವು ಸಾಧಿಸುತ್ತಾರೆ ಎನ್ನುವ ವಿಶ್ವಾಸ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಇತ್ತು. ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕರಾಗಿದ್ದ ಡಾ.ಸಿ.ಎನ್.ಮಂಜುನಾಥ್ ಅವರು ಅವಧಿ ಮುಗಿದ ನಂತರ ರಾಜಕೀಯಕ್ಕೆ ಬರುತ್ತಾರೆ ಎನ್ನುವ ನಿರೀಕ್ಷೆ ಯಾರಲ್ಲೂ ಇರಲಿಲ್ಲ. ಆದರೆ ಮಂಜುನಾಥ್ ರಾಜಕೀಯ ಪ್ರವೇಶದ ಹಿಂದೆ ಚನ್ನಪಟ್ಟಣದ ಶಾಸಕ ಎಚ್.ಡಿ.ಕುಮಾರಸ್ವಾಮಿ ಮತ್ತು ಮಾಜಿ ಶಾಸಕ ಸಿ.ಪಿ.ಯೋಗೇಶ್ವರ್ ಬಹಳವಾಗಿ ಕೆಲಸ ಮಾಡಿದ್ದಾರೆ. ಈ ಮೂಲಕ ಡಿ.ಕೆ.ಸುರೇಶ್ ಗೆಲುವಿನ ನಾಗಾಲೋಟಕ್ಕೆ ಬ್ರೇಕ್ ಹಾಕಿ ಸೋಲಿನ ಖೆಡ್ಡಾ ತೋಡಿದ್ದರು.

ಸೋಲಿನ ಸೇಡು

ಸಹೋದರರ ಸೋಲಿಗೆ ಪ್ರಮುಖವಾಗಿ ಕಾರಣರಾದ ಮಂಡ್ಯ ಸಂಸದ ಎಚ್.ಡಿ.ಕುಮಾರಸ್ವಾಮಿ ಮತ್ತು ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಅವರು ಪ್ರತಿನಿಧಿಸುತ್ತಿರುವ ಚನ್ನಪಟ್ಟಣ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು ಇಲ್ಲಿ ಸ್ಪರ್ಧೆ ಮಾಡುವ ಮೂಲಕ ಇಬ್ಬರಿಗೂ ಸೋಲುಣಿಸಿ, ಡಿ.ಕೆ.ಸುರೇಶ್ ಸೋಲಿನ ಸೇಡು ತೀರಿಸಿಕೊಳ್ಳಬೇಕು ಎನ್ನುವ ಲೆಕ್ಕಾಚಾರವೂ ಇದರ ಹಿಂದೆ ಎಂದು ಚನ್ನಪಟ್ಟಣದ ಕಾಂಗ್ರೆಸ್ ಮುಖಂಡರೊಬ್ಬರು ಮಾಹಿತಿ ನೀಡಿದರು.

ಕ್ಷೇತ್ರದಲ್ಲಿದೆ ನಂಟು

ಡಿ.ಕೆ.ಶಿವಕುಮಾರ್ ಅವರಿಗೆ ಚನ್ನಪಟ್ಟಣದ ನಂಟು ಬಹಳಷ್ಟಿದೆ. ಈ ಹಿಂದೆ ಸಾತನೂರು ಕ್ಷೇತ್ರವನ್ನು ಡಿ.ಕೆ.ಶಿವಕುಮಾರ್ ಪ್ರತಿನಿಧಿಸುತ್ತಿದ್ದರು. ಚನ್ನಪಟ್ಟಣ ತಾಲೂಕಿನ ವಿರೂಪಾಕ್ಷಿಪುರ ಹೋಬಳಿ ಈ ಕ್ಷೇತ್ರದ ಭಾಗವಾಗಿ ಹಲವು ವರ್ಷಗಳ ಇತ್ತು. ಇಷ್ಟು ಮಾತ್ರವಲ್ಲದೇ, ಡಿ.ಕೆ.ಶಿ ರಕ್ತ ಸಂಬಂಧಿಗಳು ಕ್ಷೇತ್ರದಲ್ಲಿ ಬಹಳಷ್ಟು ಮಂದಿ ಇದ್ದಾರೆ. ಅಲ್ಲದೆ, ಇವರ ಸಹೋದರಿ ಮಂಜುಳಾ ಅವರನ್ನು ಚನ್ನಪಟ್ಟಣ ಶರತ್ ಚಂದ್ರ ಅವರಿಗೆ ಮದುವೆ ಮಾಡಿಕೊಟ್ಟಿದ್ದಾರೆ. ಈಗಲೂ ಡಿ.ಕೆ.ಶಿವಕುಮಾರ್ ಕ್ಷೇತ್ರದಲ್ಲಿ ತಮ್ಮದೇ ಆದ ಒಡನಾಟ ಹೊಂದಿದ್ದಾರೆ.

ಪದೇಪದೆ ಇಂಗಿತ

ಚನ್ನಪಟ್ಟಣದ ತಮ್ಮ ಒಡನಾಟವನ್ನು ಪದೇಪದೆ ನೆನಪಿಸಿಕೊಳ್ಳುವ ಡಿ.ಕೆ.ಶಿವಕುಮಾರ್ ತಾವು ಸಾಧ್ಯವಾದರೆ ಚನ್ನಪಟ್ಟಣದಿಂದ ಸ್ಪರ್ಧೆ ಮಾಡಬೇಕು ಎಂದುಕೊಂಡಿದ್ದೇನೆ ಎನ್ನುತ್ತಿದ್ದರು. ಲೋಕಸಭೆ ಪ್ರಚಾರಕ್ಕೆ ಎಐಸಿಸಿ ಅಧ್ಯಕ್ಷ ಖರ್ಗೆ ಅವರೊಂದಿಗೆ ಚನ್ನಪಟ್ಟಣಕ್ಕೆ ಪ್ರಚಾರಕ್ಕೆ ಬಂದಿದ್ದ ವೇಳೆ ಚನ್ನಪಟ್ಟಣದಿಂದ ಸ್ಪರ್ಧೆ ಮಾಡುವ ಆಸೆಯನ್ನು ಡಿ.ಕೆ.ಶಿ ಹೊರ ಹಾಕಿದ್ದರು. ಇದು ಉಪಚುನಾವಣೆಯಲ್ಲಿ ಚನ್ನಪಟ್ಟಣದಿಂದ ಡಿ.ಕೆ.ಶಿವಕುಮಾರ್ ಸ್ಪರ್ಧೆ ಮಾಡುವ ಸುದ್ದಿಗೆ ಪುಷ್ಟಿ ನೀಡಿದೆ.

ನಿಜವೇ ಆದರೆ?

ಒಂದು ವೇಳೆ ಡಿ.ಕೆ.ಶಿವಕುಮಾರ್ ಚನ್ನಪಟ್ಟಣ ವಿಧಾನಸಭೆ ಉಪಚುನಾವಣೆಯಲ್ಲಿ ಸ್ಪರ್ಧೆ ಮಾಡುವುದು ನಿಜವೇ ಆದರೆ, ಅವರ ಎದುರಾಳಿ ಸಾಕಷ್ಟು ನೀರು ಕುಡಿಯಬೇಕಿದೆ. ಉಪಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿಯಾಗಿ ಸಿ.ಪಿ.ಯೋಗೇಶ್ವರ್ ಸ್ಪರ್ಧೆ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದ್ದು, ಕ್ಷೇತ್ರದಲ್ಲಿ ತೀವ್ರ ಜಿದ್ದಾ ಜಿದ್ದಿ ಏರ್ಪಡಲಿದೆ.

ಒಟ್ಟಾರೆ ಬುಧವಾರ ದೇವಾಲಯ ಪ್ರವಾಸ ಮತ್ತು ಒಂದು ಗಂಟೆಗೆ ಸೀಮಿತವಾದ ಕೆಡಿಪಿ ಸಭೆ ಹಿಂದೆ ರಾಜಕೀಯ ಲೆಕ್ಕಾಚಾರ ಇದ್ದು, ಎದುರಾಳಿಗಳನ್ನು ಕಕ್ಕಾಬಿಕ್ಕಿಯಾಗುವಂತೆ ಮಾಡಿರುವುದು ಸತ್ಯ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net