ಫೆ.೨೫ ಮತ್ತು ೨೬ ರಂದು ಕನ್ನಡ ಸಾಹಿತ್ಯ ಸಮ್ಮೇಳನ

bkt-23-8
ಬಾಗಲಕೋಟೆ ನಗರದ ಪ್ರೆಸ್‌ಕ್ಲಬ್‌ನಲ್ಲಿ ಕಸಾಪ ಜಿಲ್ಲಾಧ್ಯಕ್ಷ ಶಿವಾನಂದ ಶೆಲ್ಲಿಕೇರಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಡಾ.ಶ್ರೀರಾಮ ಇಟ್ಟಣ್ಣವರ, ಸಿದ್ದರಾಮ ಶಿರೋಳ, ಡಾ.ಚಂದ್ರಶೇಖರ ಕಾಳನ್ನವರ, ಡಾ.ಸಿ.ಎಂ.ಜೋಶಿ, ಗುರುರಾಜ ಲೂತಿ, ಜ್ಯೋತಿಭಾ ಅವತಾಡೆ ಉಪಸ್ಥಿತರಿದ್ದರು.
Published on

ಬಾಗಲಕೋಟೆ: ಕನ್ನಡ ಸಾಹಿತ್ಯ ಪರಿಷತ್ತು ರಾಜ್ಯ, ಜಿಲ್ಲಾ ಘಟಕ ಹಾಗೂ ಬೀಳಗಿ ತಾಲೂಕ ಘಟಕ ಆಶ್ರಯದಲ್ಲಿ ಬೀಳಗಿ ಪಟ್ಟಣದ ಸಿದ್ದೇಶ್ವರ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಫೆ.೨೫ ಮತ್ತು ೨೬ ರಂದು ಜಿಲ್ಲಾ ೧೦ ನೇ ಕನ್ನಡ ಸಾಹಿತ್ಯ ಸಮ್ಮೇಳವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ಶಿವಾನಂದ ಶೆಲ್ಲಿಕೇರಿ ಹೇಳಿದರು.

ಫೆ.೨೫ ರಂದು ಬೆಳಗ್ಗೆ ೮ ಗಂಟೆಗೆ ರಾಷ್ಟ್ರ ಧ್ವಜ, ನಾಡ ಧ್ವಜ ಮತ್ತು ಪರಿಷತ್ತಿನ ಧ್ವಜಾರೋಹಣ ನೆರವೇರುವುದು. ನಂತರ ೮.೩೦ ಗಂಟೆಗೆ ಜಿಲ್ಲೆಯ ವಿವಿಧ ಕಲಾ ತಂಡಗಳೊಂದಿಗೆ ಸಮ್ಮೇಳನಾಧ್ಯಕ್ಷ ತೋಂಟದ ಡಾ.ಸಿದ್ಧರಾಮ ಮಹಾಸ್ವಾಮಿಗಳವರ ನೇತೃತ್ವದಲ್ಲಿ ಭುವನೇಶ್ವರಿದೇವಿ ಪೂಜೆ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಲಾಗುವುದು. ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಂಚರಿಸಲಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ರಂಗ ನಾಟಕಕಾರ ಕಂಠಿ ಹನಮಂತರಾಯ ಪ್ರಧಾನ ವೇದಿಕೆಯಲ್ಲಿ ಬೆಳಗ್ಗೆ ೧೦.೩೦ ಗಂಟೆಗೆ ಡಾ.ತೋಂಟದ ಸಿದ್ಧರಾಮ ಸ್ವಾಮೀಜಿ ಸರ್ವಾಧ್ಯಕ್ಷತೆಯಲ್ಲಿ ಜರುಗುವ ಸಮ್ಮೇಳನವನ್ನು ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ಉದ್ಘಾಟಿಸಲಿದ್ದಾರೆ. ಬೀಳಗಿ ಶಾಸಕ, ಸಚಿವ ಮುರುಗೇಶ ನಿರಾಣಿ ಅಧ್ಯಕ್ಷತೆ ವಹಿಸಲಿದ್ದಾರೆ. ಪಂಚಮಶಿವಲಿಂಗೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಕೂರಿಗೆ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಲಿದ್ದಾರೆ. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಮಾಜಿ ಸಚಿವ ಎಸ್.ಆರ್.ಪಾಟೀಲ ವಿವಿಧ ಕೃತಿ ಬಿಡುಗಡೆಗೊಳಿಸಲಿದ್ದಾರೆ ಎಂದರು.

ಫೆ.೨೬ ರಂದು ಮಧ್ಯಾಹ್ನ ೨.೩೦ ಗಂಟೆಗೆ ಸಮ್ಮೇಳನಾಧ್ಯಕ್ಷರೊಂದಿಗೆ ಸಂವಾದ ನಡೆಯಲಿದೆ, ಮಧ್ಯಾಹ್ನ ೩.೩೦ ಗಂಟೆಗೆ ಬಹಿರಂಗ ಅಽವೇಶನದಲ್ಲಿ ಸಮ್ಮೇಳನದ ನಿರ್ಣಯ ಮಂಡಿಸಲಿದ್ದಾರೆ. ಸಂಜೆ ೫.೩೦ ಗಂಟೆಗೆ ಸಾಧಕರಿಗೆ ಸನ್ಮಾನ ಹಾಗೂ ಸಮಾರೋಪ ಸಮಾರಂಭ ಜರುಗಲಿದೆ. ಗಿರಿಸಾಗರದ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಮಾಜಿ ಶಾಸಕ ಮಲ್ಲಿಕಾರ್ಜುನ ಬನ್ನಿ ಅಧ್ಯಕ್ಷತೆ ವಹಿಸಲಿದ್ದಾರೆ. ಡಾ.ವಿಜಯಕುಮಾರ ಕಟಗಿಹಳ್ಳಿಮಠ ಅವರು ಅಭಿನಂದನಾ ನುಡಿ ಹೇಳುವರು. ಡಾ.ಫ.ಗು.ಹಳಕಟ್ಟಿ ಸಂಶೋಧನಾ ಕೇಂದ್ರದ ಕಾರ್ಯದರ್ಶಿ ಡಾ.ಎಂ.ಎಸ್.ಮಧುಬಾವಿ ಸಮಾರೋಪ ಭಾಷಣ ಮಾಡಲಿದ್ದಾರೆ. ಎರಡು ದಿನ ವಿವಿಧ ಗೋಷ್ಠಿಗಳು ನಡೆಯಲಿವೆ ಎಂದು ತಿಳಿಸಿದರು.

ಸಮ್ಮೇಳನದ ಸ್ವಾಗತ ಸಮಿತಿಯ ಗೌರವಾಧ್ಯಕ್ಷ ಡಾ.ಶ್ರೀರಾಮ ಇಟ್ಟಣ್ಣವರ, ಜಿಲ್ಲಾ ಗೌರವ ಕಾರ್ಯದರ್ಶಿ ಸಿದ್ದರಾಮ ಶಿರೋಳ, ಡಾ.ಚಂದ್ರಶೇಖರ ಕಾಳನ್ನವರ, ಜಿಲ್ಲಾ ಗೌರವ ಕೋಶಾಧ್ಯಕ್ಷ ಡಾ.ಸಿ.ಎಂ.ಜೋಶಿ, ಬೀಳಗಿ ತಾಲೂಕ ಕಸಾಪ ಅಧ್ಯಕ್ಷ ಗುರುರಾಜ ಲೂತಿ, ಜ್ಯೋತಿಭಾ ಅವತಾಡೆ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net