

ಬಾಗಲಕೋಟೆ: ಜಿಲ್ಲಾ ಕೇಂದ್ರ ಸ್ಥಾನದಲ್ಲಿ ಮೊದಲ ಹಂತದಲ್ಲಿ ಪ್ರಜಾಧ್ವನಿ ಯಾತ್ರೆ ಪೂರ್ಣಗೊಂಡಿದ್ದು, ಇದೀಗ ಎರಡನೇ ಹಂತದ ಪ್ರಜಾಧ್ವನಿ ಯಾತ್ರೆ ಫೆಬ್ರವರಿಯಲ್ಲಿ ನಡೆಯಲಿದೆ. ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವ ವಹಿಸಲಿದ್ದಾರೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಸ್.ಜಿ.ನಂಜಯ್ಯನಮಠ ಹೇಳಿದರು.
ಫೆ.೧೫ ರಂದು ಬೀಳಗಿ ವಿಧಾನಸಭಾ ಮತಕ್ಷೇತ್ರದ ಕಲಾದಗಿ ಗ್ರಾಮದಲ್ಲಿ ಮಧ್ಯಾಹ್ನ ೧೨ ಗಂಟೆಗೆ ಪ್ರಜಾಧ್ವನಿಯಾತ್ರೆ ನಡೆಯಲಿದೆ. ನಂತರ ಫೆ.೨೧ ರಂದು ಬೆಳಗ್ಗೆ ೧೧ ಗಂಟೆಗೆ ಹುನಗುಂದ, ಫೆ.೨೩ ರಂದು ಬೆಳಗ್ಗೆ ೧೧ ಗಂಟೆಗೆ ಜಮಖಂಡಿ, ೩ ಗಂಟೆಗೆ ತೇರದಾಳ, ೬ ಗಂಟೆಗೆ ಮುಧೋಳದಲ್ಲಿ ಪ್ರಜಾಧ್ವನಿ ಯಾತ್ರೆ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪ್ರತಿಯೊಂದು ಕಾರ್ಯಕ್ರಮ ಯಶಸ್ವಿಗೊಳಿಸಲು ಸಕಲ ಸಿದ್ಧತೆ ನಡೆಯಲಿದೆ. ಪ್ರತಿಯೊಂದು ಸಮಾವೇಶದಲ್ಲಿ ೨೦ ಸಾವಿರಕ್ಕೂ ಹೆಚ್ಚು ಜನ ಭಾಗವಹಿಸಲಿದ್ದಾರೆ. ಬಿಜೆಪಿ ದುರಾಡಳಿತ, ಭ್ರಷ್ಟಾಚಾರ ಬಗ್ಗೆ ಜನರಿಗೆ ತಿಳಿಸಲಾಗುವುದು ಎಂದ ಅವರು, ರಾಜಕೀಯದಲ್ಲಿ ಟೀಕೆಗಳು ಇರಬೇಕು. ಶಬ್ಧ ಬಳಕೆ ಹಿಡಿತದಲ್ಲಿರಬೇಕು. ಟೀಕೆಗಳಲ್ಲಿ ಸತ್ವ, ಸತ್ಯ, ಸಂಸ್ಕೃತಿ ಇರಬೇಕು. ಇದು ಎಲ್ಲ ರಾಜಕೀಯ ಪಕ್ಷಗಳ ನಾಯಕರಿಗೆ ಅನ್ವಯ ಅಂತ ಸಲಹೆ ನೀಡಿದರು.
ಎಚ್‌ಡಿಕೆ ಹೇಳಿಕೆ ಖಂಡನೀಯ:
ಮಾಜಿ ಸಿಎಂ ಸಿಎಂ ಎಚ್.ಡಿ.ಕುಮಾರಸ್ವಾಮಿ ಬ್ರಾಹ್ಮಣ ಸಮುದಾಯದ ಕುರಿತು ನೀಡಿರುವ ಹೇಳಿಕೆ ಖಂಡನೀಯ. ಒಬ್ಬ ವ್ಯಕ್ತಿ ಕೊಲೆಗಾರ ಎನ್ನುವ ಕಾರಣಕ್ಕೆ ಈಡೀ ಸಮುದಾಯ ಧೋಷಣೆ ಮಾಡುವುದು ತಪ್ಪು. ಗೊಡ್ಸೆ ಮಾಡಿದ ತಪ್ಪಿಗೆ ಅವರ ಮಕ್ಕಳು, ಮೊಮ್ಮಕ್ಕಳು ಅಪರಾಧಿ ಅಂತ ತೀರ್ಮಾನಿಸಲು ಸಾಧ್ಯವಿಲ್ಲ. ಗಾಂಧೀಜಿ ಹತ್ಯೆ ಅಕ್ಷಮ್ಯ ಅಪರಾಧ. ಇದನ್ನು ಒಪ್ಪಲು ಸಾಧ್ಯವಿಲ್ಲ. ಕೊಲೆಗಡುಕರನ್ನು ಜಾತಿ ಆಧಾರದ ಮೇಲೆ ಗುರುತಿಸುವುದು ತಪ್ಪು ಅಂತ ಎಚ್‌ಡಿಕೆ ಹೇಳಿಕೆಗೆ ತೀಕ್ಷ್ಯಣವಾಗಿ ಪ್ರತಿಕ್ರಿಯೆ ನೀಡಿದರು.
ಮಾಜಿ ಸಚಿವ ಎಚ್.ವೈ.ಮೇಟಿ, ಮುಖಂಡ ಬಸವಪ್ರಭು ಸರನಾಡಗೌಡ, ಕಾಂಗ್ರೆಸ್ ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷ ನಾಗರಾಜ ಹದ್ಲಿ, ವಕ್ತಾರ ಸಿಕಂದರ ಅಥಣಿ ಇತರರು ಇದ್ದರು.