

ಶಿರಸಿ: ನಗರದ ಹೃದಯ ಭಾಗದಲ್ಲಿರುವ ಮೀನು ಮಾರುಕಟ್ಟೆ ಜಾಗವನ್ನು ಬಸ್ ನಿಲ್ದಾಣಕ್ಕೆ ಬಳಸಿಕೊಳ್ಳಬಾರದು ಎಂದು ಕೋಟೆಗಲ್ಲಿಯ ಮೀನು ವ್ಯಾಪಾರಿಗಳು ಹಾಗೂ ಗ್ರಾಹಕರು ಉಪವಿಭಾಗಾಧಿಕಾರಿ ಕಚೇರಿಯ ಮ್ಯಾನೇಜರ್ ಶೈಲಜಾ ಹೆಗಡೆ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.
ಮೀನು ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಜೂಜೆ ನರೋನಾ ಮಾತನಾಡಿ, ನಗರದ ಹಳೆ ಬಸ್ ನಿಲ್ದಾಣದ ಹತ್ತಿರದ ಮೀನು, ಚಿಕನ್, ಮಟನ್ ಮಾರುಕಟ್ಟೆಯು ನೂರಾರು ವರ್ಷದ ಹಿಂದಿನಿಂದಲೂ ಅದೇ ಉದ್ದೇಶಕ್ಕೆ ಬಳಕೆ ಮಾಡಿಕೊಂಡು ಬರಲಾಗುತ್ತಿದೆ. ಅಲ್ಲದೆ, 12 ವರ್ಷದ ಹಿಂದೆ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಸರ್ಕಾರ ಹೊಸದಾಗಿ ಕಟ್ಟಡವನ್ನು ನಿರ್ವಿುಸಿ ಕೊಟ್ಟಿದೆ. ಈಗ ಹಳೆ ಬಸ್ ನಿಲ್ದಾಣವನ್ನು ಮರುನಿರ್ವಿುಸುತ್ತಿದ್ದು, ಮೀನು ಮಾರುಕಟ್ಟೆ ಸ್ಥಳವನ್ನು ಬಸ್ ನಿಲ್ದಾಣಕ್ಕಾಗಿ ಬಳಕೆ ಮಾಡಿಕೊಳ್ಳಲು ಸಿದ್ಧತೆ ನಡೆಸಲಾಗುತ್ತಿದೆ. ಇದು ಸರಿಯಲ್ಲ ಎಂದರು.
ಈಗ ಇರುವ ಮೀನು ಮಾರುಕಟ್ಟೆಯಿಂದ ನೂರಾರು ಕುಟುಂಬಗಳು ಜೀವನ ನಿರ್ವಹಣೆ ಮಾಡುತ್ತಿದ್ದಾರೆ. ಸ್ಥಳ ಬದಲಾಯಿಸಿದರೆ ಕುಟುಂಬಗಳು ಬೀದಿ ಪಾಲಾಗುವ ಸಾಧ್ಯತೆಯಿದೆ. ಮಾರುಕಟ್ಟೆ ನಗರದ ಹೃದಯ ಭಾಗದಲ್ಲಿರುವುದರಿಂದ ನಗರದವರಿಗೆ ಹಾಗೂ ಸುತ್ತಮುತ್ತಲಿನ ಹಳ್ಳಿಗರಿಗೆ ಅನುಕೂಲವಾಗಿದೆ. ಅಲ್ಲದೆ, ಇಲ್ಲಿಯ ಪರಿಸರಕ್ಕಾಗಲಿ ಅಥವಾ ಸಾರ್ವಜನಿಕರಿಗಾಗಲಿ ಯಾವುದೇ ತೊಂದರೆ ಆಗುವುದಿಲ್ಲ. ಜತೆಗೆ ಉಳಿದ ವ್ಯಾಪಾರ, ವಹಿವಾಟಿನ ಸ್ಥಳದಿಂದ ಪ್ರತ್ಯೇಕವಾಗಿರುವ ಕಾರಣ ಯಾವುದೇ ತೊಂದರೆ ಉಂಟಾಗುತ್ತಿಲ್ಲ. ಈಗಾಗಲೇ ಹುಲೇಕಲ್ ರಸ್ತೆಯ ರಾಮನಗರದಲ್ಲಿ ಸರ್ಕಾರವು ವಿಶಾಲವಾದ ಬಸ್ ನಿಲ್ದಾಣ ನಿರ್ವಿುಸಿದೆ. ಹಳೆ ಬಸ್ ನಿಲ್ದಾಣವು ಪಿಕ್ಅಪ್ ಬಸ್ ನಿಲ್ದಾಣವಾಗಿದ್ದು, ಇದಕ್ಕೆ ಅವಶ್ಯಕತೆಗಿಂತ ಹೆಚ್ಚಿನ ಜಾಗ ಬೇಕಾಗುವುದಿಲ್ಲ. ಈಗ ಇರುವ ಹಳೆ ಬಸ್ ನಿಲ್ದಾಣವನ್ನು ಅವಶ್ಯಕತೆಗಿಂತ ಹೆಚ್ಚಿಗೆ ವಿಸ್ತರಿಸಿದಲ್ಲಿ ಮೀನು ಮಾರುಕಟ್ಟೆ ನಿರ್ವಣಕ್ಕಾಗಿ ವ್ಯಯಿಸಿದ ಕೋಟ್ಯಂತರ ರೂಪಾಯಿ ಹಾಗೂ ಹೊಸ ಮೀನು ಮಾರುಕಟ್ಟೆ ನಿರ್ವಣಕ್ಕಾಗಿ ವ್ಯಯಿಸಿಬೇಕಾದ ಹಣ ಸರ್ಕಾರಕ್ಕೆ ಭಾರವಾಗುತ್ತದೆ. ಹಾಗಾಗಿ ಈಗ ಇರುವ ಮೀನು ಮಾರುಕಟ್ಟೆಯನ್ನು ಯಥಾಸ್ಥಿತಿಯಲ್ಲಿಟ್ಟು ಹಳೆ ಬಸ್ ನಿಲ್ದಾಣ ನಿರ್ವಿುಸಬೇಕು ಎಂದು ಒತ್ತಾಯಿಸಿದರು.
ಈ ವೇಳೆ ಇರ್ಫಾನ್ ಸೌದಾಗರ್, ಅರವಿಂದ ಪವಾರ, ಅಸ್ಲಂ ಸೌದಾಗರ್, ಅಬ್ದುಲ್ ಶೇಖ್ ಹಾಗೂ ಇತರರಿದ್ದರು.</