ಪ್ಲಾಸ್ಟಿಕ್ ಮಾರಾಟ ಮಾಡಿದಲ್ಲಿ ಕ್ರಿಮಿನಲ್ ಪ್ರಕರಣ

cmc commissioner
ಚಿಕ್ಕಮಗಳೂರು ನಗರಸಭೆ ನೂತನ ಪೌರಾಯುಕ್ತ ಬಿ.ಸಿ.ಬಸವರಾಜು ಅವರನ್ನು ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ಸ್ವಾಗತಿಸಿದರು.
Published on

ಚಿಕ್ಕಮಗಳೂರು: ನಗರದ ಸಮಗ್ರ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಲಾಗುವುದು. ಸಮಸ್ಯೆಗಳನ್ನು ಬಗೆಹರಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು ಎಂದು ನಗರಸಭೆ ನೂತನ ಪೌರಾಯುಕ್ತ ಬಿ.ಸಿ.ಬಸವರಾಜ್ ತಿಳಿಸಿದರು.

ನಗರಸಭೆ ಪೌರಾಯುಕ್ತರಾಗಿ ಅಧಿಕಾರ ಸ್ವೀಕರಿಸಿ ಮಾತನಾಡಿ, ನಗರಸಭೆ ಅಧಿಕಾರಿಗಳು-ಸಿಬ್ಬಂದಿಯಿಂದ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗಬಾರದು. ಜನರಿಂದ ಸಲ್ಲಿಕೆಯಾಗುವ ಅರ್ಜಿಗಳನ್ನು ಆದ್ಯತೆಯ ಮೇರೆಗೆ ಬಗೆಹರಿಸಲು ಸಿಬ್ಬಂದಿಗೆ ಸೂಚಿಸಲಾಗುವುದು ಎಂದರು.
ನಗರದ ಸ್ವಚ್ಛತೆ ಕಾಪಾಡಲು ವೈಜ್ಞಾನಿಕವಾಗಿ ಕಸ ವಿಲೇವಾರಿ ಮಾಡಲು ನಗರಸಭೆ ಕೈಗೊಂಡಿರುವ ಕ್ರಮಕ್ಕೆ ಸಾರ್ವಜನಿಕರು ಸಹಕರಿಸಬೇಕು. ಪ್ಲಾಸ್ಟಿಕ್ ನಿಷೇಧದ ನಡುವೆಯೂ ವರ್ತಕರು ಪ್ಲಾಸ್ಟಿಕ್ ಮಾರಾಟ ಮಾಡುತ್ತಿರುವ ಬಗ್ಗೆ ಗಮನಕ್ಕೆ ಬಂದಿದೆ. ತಪಾಸಣೆ ವೇಳೆ ಸಿಕ್ಕಿದರೆ ಅಂತಹ ವರ್ತಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಅವರ ಉದ್ದಿಮೆ ಪರವಾನಗಿ ರದ್ದುಪಡಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಕೆಲವು ಬಡಾವಣೆಗಳಲ್ಲಿ ನಗರಸಭೆಯಿಂದ ಸರಬರಾಜಾಗುತ್ತಿರುವ ನೀರನ್ನು ವ್ಯರ್ಥ ಮಾಡುತ್ತಿದ್ದಾರೆ. ನೀರನ್ನು ಮಿತವಾಗಿ ಬಳಸಿ ನಲ್ಲಿಗಳಿಗೆ ಟ್ಯಾಪ್ ಅಳವಡಿಸಲು ಕಾಲವಕಾಶ ನೀಡಲಾಗುವುದು. ಖಾತೆ ಬದಲಾವಣೆ, ಇ-ಖಾತೆ, ಕಟ್ಟಡ ಪರವಾನಗಿ ಪಡೆಯುವಲ್ಲಿ ಕಚೇರಿಯಿಂದ ವಿಳಂಬವಾಗುತ್ತಿದೆ ಎಂಬ ದೂರುಗಳಿದ್ದರೆ ಕೂಡಲೇ ಅಂತವರು ಭೇಟಿ ಮಾಡಿ ಅಥವಾ ದೂರವಾಣಿ ಮೂಲಕ ತಿಳಿಸಿದರೆ ಸೂಕ್ತ ಅಧಿಕಾರಿಯನ್ನು ಕರೆದು ತಕ್ಷಣ ಕೆಲಸ ಮಾಡಿಕೊಂಡಲು ಸೂಚಿಸಲಾಗುವುದು ಎಂದು ಹೇಳಿದರು.
ನಗರಸಭೆ ಪೌರಕಾರ್ಮಿಕರು ಕಸ ಸಂಗ್ರಹ ಮಾಡುವ ವೇಳೆ ಹೆಚ್ಚಾಗಿ ಪ್ಲಾಸ್ಟಿಕ್ ಬಾಟಲಿಗಳು ಸಂಗ್ರಹವಾಗುತ್ತಿವೆ. ಕಸ ವಿಲೇವಾರಿ ಘಟಕದಲ್ಲಿ ಪ್ಲಾಸ್ಟಿಕ್ ಬಾಟಲಿ ಕರಗಿಸಲು ತುಂಬಾ ತೊಂದರೆ ಆಗುತ್ತಿದೆ. ಮುಂದಿನ ದಿನಗಳಲ್ಲಿ ನಗರಸಭೆಯಿಂದ ನಿಷೇಧಿಸಿ ಗಾಜಿನ ಲೋಟ ಹಾಗೂ ಬಾಟಲಿಗಳಲ್ಲಿ ಕುಡಿಯುವ ನೀರನ್ನು ಸರಬರಾಜು ಮಾಡಲು ಆಲೋಚಿಸಲಾಗಿದೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net