

ಬಾಗಲಕೋಟೆ: ಮತದಾರರ ಸೇರ್ಪಡೆ, ತೆಗೆದು ಹಾಕುವ ಪ್ರಕ್ರಿಯೆಯಲ್ಲಿ ಬಾಗಲಕೋಟೆ ನಗರದ ಅನೇಕ ಬೂತಗಳಲ್ಲಿ ಗೋಲ್‌ಮಾಲ್ ನಡೆದಿದೆ. 143 ವಿದ್ಯಾರ್ಥಿಗಳಿಗೆ ಒಬ್ಬರೇ ತಂದೆ ಹೆಸರು ಹಾಕಲಾಗಿದೆ. ಚುನಾವಣೆ ವಿಭಾಗದ ಅಧಿಕಾರಿಗಳು ಪ್ರಮಾಣಿಕವಾಗಿ ಮತದಾರರ ಯಾದಿಪಟ್ಟಿ ಸಿದ್ದಪಡಿಸಬೇಕು. ಇಲ್ಲವಾದಲ್ಲಿ ಹೋರಾಟ ಅನಿವಾರ್ಯ ಎಂದು ಕಾಂಗ್ರೆಸ್ ಜಿಲ್ಲಾ ಘಟಕದ ಎಚ್ಚರಿಕೆ ನೀಡಿದೆ.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಶನಿವಾರ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಸ್.ಜಿ.ನಂಜಯ್ಯನಮಠ, ಮಾಜಿ ಸಚಿವ ಎಚ್.ವೈ.ಮೇಟಿ ಜಂಟಿ ಸುದ್ದಿಗೋಷ್ಠಿಯಲ್ಲಿ ದಾಖಲಾತಿ ಬಿಡುಗಡೆ ಮಾಡಿ ಮಾತನಾಡಿದ ಅವರು, ಬೂತ ನಂಬರ್ 159 ರಲ್ಲಿ ಬೇರೆ ಬೇರೆ ರಾಜ್ಯದಿಂದ ಕಲಿಯಲು ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳನ್ನು ಸೇರ್ಪಡೆಗೊಳಿಸಲಾಗುತ್ತಿದೆ. ಕಲಿತ ಹೋದವರನ್ನು ಮರು ಸೇರ್ಪಡೆ ಮಾಡಲಾಗುತ್ತಿದೆ. ಒಂದು ಕಡೆ ಮಾತ್ರ ಮತದಾರರ ಯಾದಿ ಪಟ್ಟಿಯಲ್ಲಿ ಹೆಸರು ಇರಿಸಬೇಕು. ಯಾವುದೇ ನಿಯಮ ಪಾಲನೆ ಮಾಡುತ್ತಿಲ್ಲ ಎಂದು ದೂರಿದರು.
ಮಾಜಿ ಸಚಿವ ಎಚ್.ವೈ.ಮೇಟಿ ಮಾತನಾಡಿ, ದಾಖಲಾತಿ ನಾವು ಸೃಷ್ಟಿ ಮಾಡಿದ್ದು ಅಲ್ಲ. ಚುನಾವಣೆ ವಿಭಾಗದಲ್ಲಿ ಪಡೆದ ಮಾಹಿತಿಯಲ್ಲಿ ಅನೇಕ ಗೋಲ್ ಮಾಲ್ ಕಂಡು ಬಂದಿದೆ. 143 ವಿದ್ಯಾರ್ಥಿಗಳಿಗೆ ಒಬ್ಬರೇ ತಂದೆ ಹೆಸರು ಹಾಕಲಾಗಿದೆ. ಬೂತನ ಸಂಖ್ಯೆ 159 ರಲ್ಲಿ ವ್ಯಾಸಂಗ ಪೂರ್ಣಗೊಳಿಸಿದ 298 ಮತದಾರರನ್ನು ಸೇರ್ಪಡೆಗೊಳಿಸಲಾಗಿದೆ. ದೇವಸ್ಥಾನ ಒಂದರಲ್ಲಿ ಬೂತ ಸ್ಥಾಪಿಸಲಾಗಿದೆ. ಇದು ಕಾನೂನು ಪ್ರಕಾರ ತಪ್ಪು. ಶಿಕ್ಷಣಕ್ಕಾಗಿ ಬಂದ ವಸತಿ ನಿಲಯಗಳು, ಕಾಲೇಜಿನಲ್ಲಿರುವ ವಿದ್ಯಾರ್ಥಿಗಳು ವೋಟರ್ ಐಡಿ ಮಾಡಲು ದಾಖಲಾತಿ ನೀಡದಿದ್ದರೇ ಅಂಕಗಳು ಕಡಿತ ಅಂತ ವಿವಿಧ ಕಾಲೇಜುಗಳಲ್ಲಿ ಬೆದರಿಕೆ ಹಾಕಲಾಗುತ್ತಿದೆ. ಅಂಗನವಾಡಿ ಕಾರ್ಯಕರ್ತರಿಗೆ ಆ್ಯಪ್ ಬಗ್ಗೆ ಗೊತ್ತಿಲ್ಲ. ಮತದಾರರ ಪಟ್ಟಿ ಸಿದ್ದಪಡಿಸಲು ಸರಳವಾದ ಮಾರ್ಗ ಅನುಸರಿಸುತ್ತಿಲ್ಲ. ಇದು ಸರಿಯಾದ ಕ್ರಮವಲ್ಲ. ಕೂಡಲೇ ಅಧಿಕಾರಿಗಳು ಎಲ್ಲವನ್ನು ಸರಿಡಪಿಸಬೇಕು. ಪ್ರಮಾಣಿಕವಾಗಿ ಮತದಾರರ ಯಾದಿ ಪಟ್ಟಿ ಸಿದ್ಧಪಡಿಸಬೇಕು ಎಂದು ಆಗ್ರಹಿಸಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾಗರಾಜ ಹದ್ಲಿ, ಮುಖಂಡ ಎಸ್.ಎನ್.ರಾಂಪೂರ ಸುದ್ದಿಗೋಷ್ಠಿಯಲ್ಲಿ ಇದ್ದರು.
ಕೋಟ್..
ಬಾಗಲಕೋಟೆ ನಗರದ ವಿವಿಧ ಕಾಲೇಜುಗಳಲ್ಲಿನ ವಿದ್ಯಾರ್ಥಿಗಳನ್ನು ಅಕ್ರಮವಾಗಿ ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಲಾಗುತ್ತಿದೆ. 2023 ಚುನಾವಣೆ ದೃಷ್ಟಿಕೋನ ಇಟ್ಟುಕೊಂಡು ಇದೆಲ್ಲ ನಡೆಯುತ್ತಿದೆ. ಈಗಾಗಲೇ ಆ ವಿದ್ಯಾರ್ಥಿಗಳು ಸ್ಥಾನಿಕ ಊರುಗಳಲ್ಲಿ ಮತದಾನದ ಹಕ್ಕು ಹೊಂದಿದ್ದಾರೆ. ಆದರು ಸಹ ಮಹಾವಿದ್ಯಾಲಯಗಳ ಪ್ರಚಾರ್ಯರು, ಪ್ರಾಧ್ಯಾಪಕರು ಬಾಗಲಕೋಟೆ ಮತಕ್ಷೇತ್ರದ ಮತದಾರರ ಪಟ್ಟಿಗೆ ಸೇರ್ಪಡೆಗೊಳ್ಳಬೇಕು. ನಿಮ್ಮೂರಿನಲ್ಲಿ ಮತದಾರರ ಪಟ್ಟಿಯಿಂದ ವರ್ಗಾವಣೆ ಮಾಡಿಕೊಳ್ಳಬೇಕು ಎಂದು ಹೇಳುತ್ತಿದ್ದಾರೆ. ಅಲ್ಲದೆ ಅನೇಕ ಬೆದರಿಕೆ ಹಾಕಲಾಗುತ್ತಿದೆ. ಇದರಿಂದ ವಿದ್ಯಾರ್ಥಿಗಳು ದಿಕ್ಕು ತೋಚದಂತಾಗಿ ಮಾನಸಿಕವಾಗಿ ಕುಗ್ಗುತ್ತಿದ್ದಾರೆ. ಕಾಲೇಜುಗಳಲ್ಲಿ ಕಾನೂನು ಬಾಹಿರ ರಾಜಕೀಯ ಚಟುವಟಿಕೆಗಳನ್ನು ತಡೆಯಲು ಸೂಕ್ತ ಕ್ರಮ ತೆಗೆದುಕೊಳ್ಳಬೇಕು.