

ಬಾಗಲಕೋಟೆ: ಪ್ರತಿಷ್ಠಿತ ಬಿವಿವಿ ಸಂಘವೂ ಶಿಕ್ಷಣ ರಂಗದಲ್ಲಿ ದೇಶದ್ಯಾಂತ ಕೀರ್ತಿಗಳಿಸಲು, ಇಲ್ಲಿ ಪ್ರಾಚಾರ್ಯರು, ಶಿಕ್ಷಕ ವೃಂದದ ಪ್ರಾಮಾಣಿಕ ಸೇವೆ, ಅವರು ನೀಡುವ ಗುಣಮಟ್ಟದ ಶಿಕ್ಷಣವೆ ಕಾರಣವಾಗಿದ್ದು, ಇಂಥಹ ಪ್ರಾಮಾಣಿಕರು ಸಂಘಕ್ಕೆ ಸಿಕ್ಕಿರುವುದು ಹೆಮ್ಮೆ ವಿಷಯವಾಗಿದೆ ಎಂದು ಮಾಜಿ ಶಾಸಕ ಹಾಗೂ ಬಿವಿವಿ ಸಂಘದ ಕಾರ್ಯಾಧ್ಯಕ್ಷರಾದ ಡಾ.ವೀರಣ್ಣ ಚರಂತಿಮಠ ಹೇಳಿದರು.
ಅವರು ಶನಿವಾರ ಬಿವಿವಿ ಸಂಘ ನೂತನ ಸಭಾಭವನದಲ್ಲಿ ಬಿವಿವಿ ಸಂಘ, ಜಿ.ಬಿ.ದಾನಶೆಟ್ಟಿ ಅಭಿನಂದನ ಗ್ರಂಥ ಸಮೀತಿ ವತಿಯಿಂದ ಹಮ್ಮಿಕೊಂಡ ವೃತ್ತಿಯಿಂದ ನಿವೃತ್ತಿ ಹೊಂದುತ್ತಿರುವ ಪಾಲಿಟೇಕ್ನಿಕ್ ಕಾಲೇಜಿನ ಪ್ರಾಚಾರ್ಯ ಅವರಿಗೆ ಜ್ಞಾನ ಶ್ರೇಷ್ಠಿ ಅಭಿನಂದನಾ ಗ್ರಂಥ ಸಮರ್ಪಣೆ ಸಮಾರಂಭದ ಅಧ್ಯಕ್ಷತೆವಹಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸಂಘದ ಕಾಲೇಜು, ಶಾಲೆಗಳಲ್ಲಿ ಉತ್ತಮ ಪ್ರಾಚಾರ್ಯ ಹಾಗೂ ಶಿಕ್ಷಣ ವೃಂದ, ಸಂಘದ ಸಿಬ್ಬಂದಿಗಳ ಪ್ರಾಮಾಣಿಕ ಸೇವೆ ಜೋತೆಗೆ ಅವರು ವಿದ್ಯಾರ್ಥಿಗಳಿಗೆ ನೀಡುವ ಗುಣಮಟ್ಟದ ಶಿಕ್ಷಣದಿಂದಾಗಿ ಬಿವಿವಿ ಸಂಘ ದೇಶಕ್ಕೆ ಉತ್ತಮ ಸಾಧಕರನ್ನು ನೀಡುತ್ತಿದ್ದು, ದೇಶವ್ಯಾಪಿ ತನ್ನ ವಿಸ್ತಾರವನ್ನು ಹೆಚ್ಚಿಸುವುದರ ಜೊತೆಗೆ ಉತ್ತಮ ಕೀರ್ತಿಗೆ ಪಾತ್ರವಾಗಿದೆ, ಜಿ.ಬಿ.ದಾನಶೆಟ್ಟಿ ಅವರು ಮೃದು ಸ್ವಭಾವದವರು, ಅವರ ಪ್ರಾಮಾಣಿಕ ಕಾರ್ಯಕ್ಷಮತೆಯಿಂದಾಗಿ ರಾಷ್ಟ್ರಪತಿಗಳು ಸೇರಿದಂತೆ ರಾಷ್ಟ್ರಮಟ್ಟದ ಪ್ರಶಸ್ತಿಗಳ ಜೊತೆಗೆ ರಾಷ್ಟ್ರೀಯ ಗೌರವವನ್ನು ಕಾಲೇಜಿಗೆ ತರುವ ಮೂಲಕ ಸಂಘದ ಕೀರ್ತಿಯನ್ನು ಹೆಚ್ಚಿಸಿದ್ದಾರೆ, ಸಂಘ ಸಂಸ್ಥೆಗಳಿಗೆ ಇಂಥಹ ಸೇವಾ ಪ್ರಾಮಾಣಿಕರ ಅಗತ್ಯತೆ ಇದೆ ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಹುಬ್ಬಳ್ಳಿಯ ವಾಣಿಜ್ಯ ತೆರಿಗೆಗಳ ಇಲಾಖೆಯ ನಿವೃತ್ತ ಉಪ ಆಯುಕ್ತ ಜಿ.ಬಿ.ಗೌಡಪ್ಪಗೋಳ ಸಮಾಜದಲ್ಲಿ ಸಾಧಕರ ಸಾಧನೆಗಳು ಜನಮಾಸಗಳಲ್ಲಿ ಉಳಿದು ಮುಂದಿನ ಪಿಳಿಗೆಗೆ ಮಾದರಿಯಾಗಬೇಕು, ಜಿ.ಬಿ.ದಾನಶೆಟ್ಟಿ ಅವರು ಉಪನ್ಯಾಸಕರಾಗಿ, ವಿಭಾಗ ಮುಖ್ಯಸ್ಥರಾಗಿ, ಪ್ರಾಚಾರ್ಯರಾಗಿ ಒಂದೇ ಸಂಸ್ಥೆಯಲ್ಲಿ ೩೫ ವರ್ಷಗಳ ಸೇವೆ ಅವರ ಆದರ್ಶಕ್ಕೆ ಹಿಡಿದ ಕನ್ನಡಿಯಾಗಿದೆ, ಇದೆ ೩೦ ರಂದು ಅವರು ನಿವೃತ್ತಿಯಾಗುತ್ತಿದ್ದಾರೆ, ಇವರ ಸೇವೆಗೆ ಬೆನ್ನುಲುಬಾಗಿ ನಿಂತ ಸಂಘ ಆಡಳಿತ ಮಂಡಳಿ ಹಾಗೂ ಸಂಘದ ಕಾರ್ಯಾದ್ಯಕ್ಷರ ಧನಾತ್ಮಕ ನಿಲುವುಗಳು ಶ್ಲಾಘನೀಯವಾಗಿದೆ, ಬಾಗಲಕೋಟೆ ನಗರ ಸೇರಿದಂತೆ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಬೆಳವಣಿಗೆಗೆ ಬಿ.ವಿ.ವಿ.ಸಂಘ ಕಾರಣವಾಗಿದೆ ಎಂದರು.
ಅಭಿನಂದನಪರ ಮಾತುಗಳನ್ನಾಡಿದ ಪ್ರಾಚಾರ್ಯ ಜಿ.ಬಿ.ದಾನಶೆಟ್ಟಿ ಬಿವಿವಿ ಸಂಘ ತಾಯಿ ಕರುಳಿನ ಸಂಸ್ಥೆ, ಇಲ್ಲಿನ ಹಿರಿಯರ ಮಾರ್ಗದರ್ಶನ ಅವರ ಅನುಭವಗಳ ಮೂಲಕ ಹಾಗೂ ಸಂಘದ ಕಾರ್ಯಾದ್ಯಕ್ಷರಾದ ಡಾ.ವೀರಣ್ಣ ಚರಂತಿಮಠ ಅವರ ಪ್ರಾಮಾಣಿಕತೆ, ಸಮಯ ಪ್ರಜ್ಞೆಯಿಂದ ಪ್ರೇರೆಪಿತನಾಗಿ ಅವರ ಮಾರ್ಗದರ್ಶನದಲ್ಲಿ ಸುಧೀರ್ಘ ಸೇವೆ ಸಲ್ಲಿಸಲು ಅವಕಾಶ ಒದಗಿದ್ದು ನನ್ನ ಹೆಮ್ಮೆ, ಮಾನವೀಯ ಮೌಲ್ಯಗಳ ಜೊತೆಗೆ ಆಧುನಿಕ ಸೌಲಭ್ಯ, ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಸಂಘದಲ್ಲಿ ನಾನು ಒಬ್ಬನಾಗಿರುವುದಕ್ಕೆ ನನಗೆ ಹೆಮ್ಮೆ ಎನಿಸುತ್ತದೆ ಎಂದರು.
ಕಾರ್ಯಕ್ರಮದ ದಿವ್ಯಸಾನಿಧ್ಯವಹಿಸಿ ಜ್ಞಾನಶ್ರೇಷ್ಠಿ ಅಭಿನಂದನಾ ಗ್ರಂಥವನ್ನು ಬಿಡುಗಡೆಗೊಳಿಸಿ ಆಶೀರ್ವಚನ ನೀಡಿದ ಚರಂತಿಮಠದ ಶ್ರೀ ಪ್ರಭುಸ್ವಾಮಿಗಳು ಈ ಅಭಿನಂದನಾ ಗ್ರಂಥಗಳು ಯುವ ಪೀಳಿಗೆಗೆ ಮಾರ್ಗದರ್ಶಿಗಳಾಗಲಿ, ಜೀವನ ಬದಲಾಗಬೇಕಾದರೆ ಪುಸ್ತಕ ಓದುವುದು ಅಗತ್ಯವಾಗಿದೆ, ದೇಶದ ಅಭಿವೃದ್ಧಿಗೆ ಪ್ರಾಚಾರ್ಯ ಜಿ.ಬಿ ದಾನಶೆಟ್ಟಿಯವರ ಲೇಖನಗಳನ್ನು ಪ್ರಧಾನಿ ಕಾರ್ಯಾಲಯ ಮೆಚ್ಚುಗೆ ವ್ಯಕ್ತಪಡಿಸಿರುವುದು ಇವರ ಸಾಧನೆ, ಪಾಲಿಟೇಕ್ನಿಕ್ ಕಾಲೇಜಿಗೆ ಉನ್ನತ ಶ್ರೇಣಿಯನ್ನು ಒದಗಿಸುವ ಮೂಲಕ ತಮ್ಮ ಸೇವಾ ಅವಧಿಯಲ್ಲಿ ಎಲ್ಲ ಕ್ಷೇತ್ರಗಳಲ್ಲಿ ತಮ್ಮದೇಯಾದ ಕೊಡುಗೆ ನೀಡಿರುವುದು ಹೆಮ್ಮೆ ವಿಷಯವಾಗಿದೆ, ಆಧುನಿಕ ಯುಗದಲ್ಲಿ ಮುಂದಿನ ಪೀಳಿಗೆಯನ್ನು ಗಮನದಲ್ಲಿಟ್ಟುಕೊಂಡು ಶಿಕ್ಷಣಕ್ಕೆ ಬೇಕಾಗುವ ಅತ್ಯಾಧುನಿಕ ತಂತ್ರಜ್ಞಾನ ಸೌಲಭ್ಯಗಳ ಜೋತೆಗೆ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಸಂಘ ಮುಂಚೂಣಿಯಲ್ಲಿದೆ, ಲಕ್ಷಾಂತರ ಜನರಿಗೆ ಬದುಕು ಕಟ್ಟಿಕೊಟ್ಟು, ಅನೇಕ ಸಾಧಕರನ್ನು ದೇಶಕ್ಕೆ ಕೊಟ್ಟ ಸಂಸ್ಥೆ ನಮ್ಮ ಬಿವಿವಿ ಸಂಘ ಎಂದರು.
ಕಾರ್ಯಕ್ರಮದಲ್ಲಿ ಜಿ.ಬಿ.ದಾನಶೆಟಿ ಹಾಗೂ ಗೀತಾ ದಾನಶೆಟ್ಟಿ ದಂಪತಿಗಳು ಸನ್ಮಾನಿಸಿ ಗೌರವಿಸಲಾಯಿತು. ಬಿವಿವಿ ಸಂಘದ ಗೌರವ ಕಾರ್ಯದರ್ಶಿ ಮಹೇಶ ಅಥಣಿ, ಸಂಘದ ಆಡಳಿತಾಧಿಕಾರಿ ಡಾ.ವ್ಹಿ.ಎಸ್.ಕಟಗಿಹಳ್ಳಿಮಠ, ಜ್ಞಾನಶ್ರೇಷ್ಠಿ ಗ್ರಂಥ ಸಂಪಾದಕರಾದ ಡಾ.ಗೀತಾ ದಾನಶೇಟ್ಟಿ, ಇದ್ದರು.ಅಭಿನಂಧನ ಗ್ರಂಥದ ಗೌರವ ಸಂಪಾದಕರಾದ ಎಸ್.ಆರ್.ಮನಹಳ್ಳಿ ಸ್ವಾಗತಿಸಿ ಪ್ರಸ್ತಾವಿಕವಾಗಿ ಮಾತನಾಡಿದರು. ಶಿವಾನಂದ ಪೂಜಾರ ಗ್ರಂಥ ಅವಲೋಕನ ಮಾಡಿದರು, ಸಂಪಾದಕರಾದ ಎಸ್.ಎಸ್.ದೊಡ್ಡಮನಿ ವಂದಿಸಿದರು.