ಪ್ರಾಥಮಿಕ ಶಾಲಾ ಶಿಕ್ಷಕರ ಬೇಡಿಕೆ ಈಡೇರಿಸಿ

MALLYYA B GUTTEDAR
Published on

ಕಲಬುರಗಿ: ಪ್ರಾಥಮಿಕ ಶಾಲಾ ಶಿಕ್ಷಕರ ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ಬೆಂಗಳೂರಿನ ಪ್ರೀಡಂ ಪಾರ್ಕ್​ನಲ್ಲಿ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷ ಕರ ಸಂಘದಿಂದ ಆ.೧೨ರಂದು ಒಂದು ದಿನದ ಸಾಂಕೇತಿಕ ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ಮಲ್ಲಯ್ಯ ಗುತ್ತೇದಾರ ಹೇಳಿದರು.
೨೦೧೬ಕ್ಕಿಂತಲೂ ಮುನ್ನ ನೇಮಕವಾದ ಶಿಕ್ಷಕರಿಗೆ ೧ರಿಂದ ೭ನೇ ತರಗತಿ ಬದಲಾಗಿ ೧-೫ನೇ ತರಗತಿಗೆ ಸೀಮಿತ ಸರಿಯಲ್ಲ. ೨೦೧೭ರವರೆಗೆ ನೇಮಕವಾದ ಶಿಕ್ಷಕರನ್ನು ೧ರಿಂದ ೭ನೇ ತರಗತಿಗೆ ನೇಮಕ ಶಿಕ್ಷಕರೆಂದು ಪರಿಗಣಿಸಬೇಕು. ಸಿ ಆ್ಯಂಡ್ ಆರ್ ನಿಯಮದ ಉಲ್ಲೇಖ ೧ರ ಹೊಸ ವೃಂದ ಮತ್ತು ನಿಯಮಗಳು ೨೦೧೭ರ ನಂತರ ನೇಮಕವಾದ ಶಿಕ್ಷಕರಿಗೆ ಅನ್ವಯ ಮಾಡಬೇಕು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಅರ್ಹ ಶಿಕ್ಷಕರಿಗೆ ೨೦೧೬ರ ಪೂರ್ವದಂತೆ ಅರ್ಹತೆ ಆಧಾರದ ಮೇಲೆ ಪ್ರೌಢ ಶಾಲೆಗೆ ಬಡ್ತಿ ನೀಡಬೇಕು. ೧-೭ನೇ ತರಗತಿಗೆ ನೇಮಕವಾದವರನ್ನು ಪಿಎಸ್‌ಟಿ ಎಂದು ಪದನಾಮ ಮಾಡಿ ೧-೫ಕ್ಕೆ ಸೀಮಿತ ಮಾಡಿದ್ದು ಹಿಂಪಡೆಯಬೇಕು. ಅರ್ಹತೆ ಇರುವ ೨೦೧೬ಕ್ಕಿಂತಲೂ ಮೊದಲು ನೇಮಕವಾದ ಎಲ್ಲ ೧-೮ ತರಗತಿಗೆ ಪ್ರಾಥಮಿಕ ಶಾಲಾ ಶಿಕ್ಷಕರ ಸಂಖ್ಯೆ ಮುಗಿಯುವರೆಗೆ ಅರ್ಹತೆ ಆಧಾರದ ಮೇಲೆ ಬಡ್ತಿ ನೀಡಬೇಕು ಎಂದು ಒತ್ತಾಯಿಸಿದರು.
ಸಿ ಆ್ಯಂಡ್ ಆರ್ ನಿಯಮದಿಂದ ರಾಜ್ಯದ ೧.೨೦ ಲಕ್ಷ ಶಿಕ್ಷಕರಿಗೆ ಅನ್ಯಾಯವಾಗಿದೆ. ಆಯ್ಕೆ ವೇಳೆ ೧ರಿಂದ ೭ನೇ ತರಗತಿಗೆ ಎಂದು ನೇಮಕ ಆದೇಶ ಪತ್ರ ನೀಡಲಾಗಿದೆ. ಆದರೆ ಪ್ರಸ್ತುತ ಕೇವಲ ೧ರಿಂದ ೫ನೇ ತರಗತಿಗೆ ಸೀಮಿತ ಮಾಡುವುದು ಸರಿಯಲ್ಲ. ಪ್ರಾಥಮಿಕ ಶಾಲಾ ಶಿಕ್ಷಕರು ಎಲ್ಲ ಅರ್ಹತೆ, ಪದವಿ ಹೊಂದಿದ್ದು, ಅವರನ್ನು ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರು ಎಂದು ಪರಿಗಣಿಸಬೇಕು ಎಂದು ಆಗ್ರಹಿಸಿದರು.
ಸಮಾಜವನ್ನು ಕಟ್ಟುವ ಶಿಕ್ಷಕರು ಬೀದಿಗೆ ಇಳಿಯದಂತೆ ನೋಡಿಕೊಳ್ಳುವುದು ಸರ್ಕಾರದ ಜವಾಬ್ದಾರಿ. ಸರಳ ಬೇಡಿಕೆ ಈಡೇರಿಸಿ, ಅನುಭವಿ ಶಿಕ್ಷಕರ ಲಾಭ ಪಡೆಯಬೇಕು, ಹೆಚ್ಚುವರಿ ಅವಕಾಶ ಒದಗಿಸಬೇಕು ಎಂದು ಆಗ್ರಹಿಸಿದರು.
ಸಂಘಟನೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಾಬು ಮೌರ್ಯ, ಈಶ್ವರಗೌಡ ಪಾಟೀಲ್, ದೇವಿಂದ್ರಪ್ಪ ಗಣಮುಖಿ, ಪರಮೇಶ್ವರ ದೇಸಾಯಿ, ಅನೀಲಕುಮಾರ ಸುಂಠಾಣ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net