

ಬಾಗಲಕೋಟ: ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಗೋಲಭಾವಿ ಗ್ರಾಮದ ಪ್ರಾಥಮಿಕ ಆರೋಗ್ಯ ಉಪ ಕೇಂದ್ರಕ್ಕೆ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮಂಗಳವಾರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದಾಗ ಆರೋಗ್ಯ ಸೇವೆ, ಸೌಕರ್ಯ, ಸಿಬ್ಬಂದಿಗಳ ಹಾಜರಾತಿ ಮತ್ತು ವಿವಿಧ ಆರೋಗ್ಯ ಯೋಜನೆಗಳ ಅನುಷ್ಠಾನದ ಬಗ್ಗೆ ಪರಿಶೀಲಿಸಿದರು. ಆರೋಗ್ಯ ಕೇಂದ್ರದಲ್ಲಿ ಸ್ವಚ್ಛತೆ ಮತ್ತು ಸೌಕರ್ಯಗಳ ಕಡ್ಡಾಯ ನಿರ್ವಹಣೆ ಆಗಬೇಕು. ಓಪಿಡಿ, ಐಪಿಡಿ ದಾಖಲೆ ಹಾಗೂ ಲಸಿಕೆ ದಾಖಲೆಗಳನ್ನು ನವೀಕರಣಗೊಳಿಸಬೇಕು. ಸಿಬ್ಬಂದಿಗಳು ಸಮಯಕ್ಕೆ ಸರಿಯಾಗಿ ಆಸ್ಪತ್ರೆಗೆ ಹಾಜರಾಗುವದಲ್ಲದೇ ಸಮವಸ್ತ್ರದೊಂದಿಗೆ ಗುರುತಿನ ಚೀಟಿ ಹಾಕಿಕೊಂಡು ಬರುವಂತೆ ಸೂಚಿಸಿದರು.
ರಬಕವಿ-ಬನಹಟ್ಟಿ ತಾಲೂಕಿನ ಮಹಾಲಿಂಗಪೂರದ ಸರಕಾರಿ ಪದವಿ ಪೂರ್ವ ಕಾಲೇಜಿನ ಕೊಠಡಿ ನಿರ್ಮಾಣ ಕಾಮಗಾರಿ, ಮಾನಾಪೂರ ಗ್ರಾಮದ ಅಂಗನವಾಡಿ ಕಟ್ಟಡ ಕಾಮಗಾರಿ ಪರಿಶೀಲನೆ ನಡೆಸಿ ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸಲು ಸೂಚಿಸಿದರು. ನಂತರ ಮಧಬಾವಿ ಗ್ರಾಮದ ಸರಕಾರಿ ಪ್ರೌಢಶಾಲೆಗೆ ಭೇಟಿ ನೀಡಿದ ಸಿಇಓ ಕುರೇರ್ ಮೂಲ ಸೌಕರ್ಯಗಳನ್ನು ಪರಿಶೀಲಿಸಿ ಅಚ್ಚಕಟ್ಟಾಗಿ ನಿರ್ವಹಣೆ ಮಾಡಲು ತಿಳಿಸಿದರು. ನಂತರ ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಿ ಪ್ರತಿಯೊಂದು ಮಕ್ಕಳ ಕಲಿಕೆಯ ಬಗ್ಗೆ ಗಮನ ಹರಿಸಲು ತಿಳಿಸಿದರು.
ಸಂಗಾನಟ್ಟಿ ಸರಕಾಋಇ ಪ್ರೌಢಶಾಲೆಗೆ ಭೇಟಿ ನೀಡಿದಾಗ ಶೌಚಾಲಯ ನಿರ್ಮಾಣ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ವೀಕ್ಷಣೆ ಮಾಡಿದರು. ನಂತರ ಬಿಸಿ ಊಟದ ಕೋಣೆಗೆ ತೆರಳಿ ಆಹಾರ ಪದಾರ್ಥ ಪರಿಶೀಲಿಸಿ ಉತ್ತಮ ಗುಣಮಟ್ಟದ ಆಹಾರ ತಯಾರಿಸಲು ಅಡುಗೆ ಸಿಬ್ಬಂದಿಗಳಿಗೆ ಸೂಚನೆ ನೀಡಿದರು. ಸಂಗಾನಟ್ಟಿ ಗ್ರಾಮದ ಸಿಸಿ ರಸ್ತೆ ಕಾಮಗಾರಿ ಮತ್ತು ಘನ ತ್ಯಾಜ್ಯ ವಿಲೇವಾರಿ ಘಟಕದ ಕಾಮಗಾರಿ ವೀಕ್ಷಣೆ ಮಾಡಿದರು. ಚಿಮ್ಮಡ ಗ್ರಾಮಕ್ಕೆ ತೆರಳಿದಾಗ ಸರಕಾರಿ ಪ್ರೌಢಶಾಲೆಯ ಆವರಣದಲ್ಲಿ ಸಸಿ ನೆಟ್ಟರು. ಮತ್ತು ಗ್ರಾಮದ ಬ್ಲಾಕ್ ನಡುತೋಪು ಕಾಮಗಾರಿ ವೀಕ್ಷಣೆ ಮಾಡಿದರು.
ಗೋಲಭಾವಿ ಗ್ರಾಮದ ಚರಂಡಿ ಕಾಮಗಾರಿ, ಹಳಿಂಗಳಿ ಗ್ರಾಮದ ಓವರ್ ಹೆಡ್ ನೀರಿನ ಟ್ಯಾಂಕ್ ಸಾಮಥ್ರ್ಯ ಹೆಚ್ಚಿಸುವ ಕಾಮಗಾರಿ ವೀಕ್ಷಣೆ ಮಾಡಲಾಯಿತು. ಗ್ರಾಮ ಪಂಚಾಯತ ಕಾರ್ಯಾಲಯಕ್ಕೆ ಭೇಟಿ ನೀಡಿ ವಿವಿಧ ರಜಿಸ್ಟರಗಳನ್ನು ಪರಿಶೀಲನೆ ಮಾಡಿ ಗ್ರಾಮದ ಸ್ವಚ್ಚತೆ ಹಾಗೂ ಕುಡಿಯುವ ನೀರಿನ ಬಗ್ಗೆ ಹೆಚ್ಚಿನ ಆದ್ಯತೆ ನೀಡುವಂತೆ ಸೂಚನೆ ನೀಡಿದರು.
ಭೇಟಿ ಸಮಯದಲ್ಲಿ ರಬಕವಿ-ಬನಹಟ್ಟಿ ತಾಲೂಕಿನ ಕಾರ್ಯನಿರ್ವಾಹಕ ಅಧಿಕಾರಿ ಸಿದ್ದಪ್ಪ ಪಾಟೀಹಾಳ, ಪಂಚಾಯತ ರಾಜ್ ಜಮಖಂಡಿ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಟಿ.ಬಿ.ತಳವಾರ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯದ ಜಮಖಂಡಿ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಜೆ.ಪಿ.ಶೆಟ್ಟಿ ಸೇರಿದಂತೆ ಇತರರು ಉಪಸ್ಥಿತರಿದ್ದರು.